ಮದ್ದೂರು: ಗ್ರಾಮದ ಯಾವ ಬೀದಿಯೂ ಸರಿಯಿಲ್ಲ… ಅಂಬೇಡ್ಕರ್ ಭವನಕ್ಕೆ ಅಡಿಪಾಯ ಹಾಕಿ ಹಲವು ತಿಂಗಳು ಕಳೆದರೂ ಪೂರ್ಣಗೊಳಿಸಿಲ್ಲ… ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಇಲ್ಲ… ಕಾಲುವೆಗಳ ಮೂಲಕ ಜಮೀನಿಗೆ ನೀರು ಬರುತ್ತಿಲ್ಲ… ಆತಗೂರು ಹೋಬಳಿಯಲ್ಲಿ ಮರು ಸರ್ವೇಯಲ್ಲಿ ಗೊಂದಲವಾಗಿದೆ… 6 ವರ್ಷದಿಂದ ವಿದ್ಯುತ್ ಪರಿವರ್ತಕಕ್ಕೆ ಅರ್ಜಿ ನೀಡಿದ್ದರೂ ಇನ್ನೂ ಅಳವಡಿಸಿಲ್ಲ…
ತಾಲೂಕಿನ ಆತಗೂರು ಹೋಬಳಿಯ ಕೆಸ್ತೂರು, ಆತಗೂರು ಹಾಗೂ ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬುಧವಾರ ಶಾಸಕ ಕೆ.ಎಂ.ಉದಯ್ ಅವರು ಮತದಾರರಿಗೆ ಕೃತಜ್ಞತೆ ಹಾಗೂ ಗ್ರಾಮಗಳ ಕುಂದುಕೊರತೆ ಸಭೆಯಲ್ಲಿ ಗ್ರಾಮಸ್ಥರು ಸಮಸ್ಯೆಗಳನ್ನು ಅನಾವರಣಗೊಳಿಸಿದರು.
ಕೆರೆ ಹೂಳು ತೆಗೆಸಿ, ಕಾಲುವೆಗೆ ಸೋಪಾನ ಕಟ್ಟೆ ಕಟ್ಟಿಸಿ, ಕೃಷಿ ಇಲಾಖೆಯಲ್ಲಿ ಟಾರ್ಪಾಲ್ ಕೊಡುತ್ತಿಲ್ಲ, ಶಾಲಾ ಕಟ್ಟಡ ಕಟ್ಟಿಸಿಕೊಡಿ… ಹೀಗೆ ಹತ್ತಾರು ಸಮಸ್ಯೆಗಳ ಪಟ್ಟಿಯನ್ನು ಶಾಸಕ ಕೆ.ಎಂ.ಉದಯ್ ಮುಂದೆ ಗ್ರಾಮಸ್ಥರು ತೆರೆದಿಟ್ಟರು. ಶಾಸಕರ ಪ್ರವಾಸದುದ್ದಕ್ಕೂ ಆತಗೂರು ಹೋಬಳಿಯ ರೀಸರ್ವೇ ಸಮಸ್ಯೆ ಸದ್ದು ಮಾಡಿತು. ಕೆಲವು ಸಮಸ್ಯೆಗಳನ್ನು ಶಾಸಕರು ಸ್ಥಳದಲ್ಲಿಯೇ ಪರಿಹರಿಸಿ, ಇನ್ನೂ ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ಆದಷ್ಟು ಶೀಘ್ರ ಪರಿಹರಿಸುವಂತೆ ಸೂಚನೆ ನೀಡಿದರು.
ಶಾಸಕ ಕೆ.ಎಂ.ಉದಯ್ ಮಾತನಾಡಿ, 3 ವರ್ಷಗಳಿಂದ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನನ್ನ ಕೈಲಾದ ಮಟ್ಟಿಗೆ ಕ್ಷೇತ್ರದ ಜನತೆಗೆ ಸಹಾಯ ಮಾಡಿಕೊಂಡು ಬರುತ್ತಿದ್ದೆ. ಜನಾಶೀರ್ವಾದದಿಂದ ಚುನಾವಣೆಯಲ್ಲಿ ಗೆಲ್ಲಿಸಿ ಜನರ ಸೇವೆ ಮಾಡಲು ಶಾಸಕನಾಗಿ ಆಯ್ಕೆ ಮಾಡುವ ಮೂಲಕ ಮತ್ತಷ್ಟು ಜವಾಬ್ದಾರಿ ಹೊರಿಸಿದ್ದೀರಿ. ಹೀಗಾಗಿ ಕ್ಷೇತ್ರದ ಎಲ್ಲ ಸಮಸ್ಯೆಗಳನ್ನೂ ಒಂದೇ ಬಾರಿಗೆ ಬಗೆಹರಿಸಲು ಸಾಧ್ಯವಿಲ್ಲ. ಹಂತ ಹಂತವಾಗಿ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.
ಗ್ರಾಮಗಳ ಅಭಿವೃದ್ಧಿಗೆ ನರೇಗಾ ಯೋಜನೆ ಸಹಕಾರಿಯಾಗಿದೆ. ಆದರೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಆ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಬೇಜವಾಬ್ದಾರಿತನ ತೋರುತ್ತಿದ್ದಾರೆ. ಇನ್ನು ಮುಂದೆ ಇಂಥ ಸೋಮಾರಿ ಅಧಿಕಾರಿಗಳನ್ನು ಬದಲಾವಣೆ ಮಾಡುವ ಮೂಲಕ ದಕ್ಷ, ಪ್ರಾಮಾಣಿಕ ಅಧಿಕಾರಿಗಳನ್ನು ನಿಯೋಜಿಸಿಕೊಂಡು ಸರ್ಕಾರದ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಮಾದರಿ ಕ್ಷೇತ್ರವನ್ನಾಗಿ ಮಾಡುವುದಾಗಿ ಭರವಸೆ ನೀಡಿದರು.
ಶಾಸಕರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಆತಗೂರು ಹೋಬಳಿಯ ಗೊಲ್ಲರದೊಡ್ಡಿ ಗ್ರಾಮದ ಶ್ರೀ ಜುಂಜಪ್ಪ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅಡಗನಹಳ್ಳಿ, ಬಸವಲಿಂಗನದೊಡ್ಡಿ, ಯಡಾನಹಳ್ಳಿ, ಕೆಸ್ತೂರು, ತೂಬಿನಕೆರೆ ಸೇರಿದಂತೆ 20 ಕ್ಕೂ ಹೆಚ್ಚು ವಿವಿಧ ಗ್ರಾಮಗಳಿಗೆ ತಾಲೂಕು ಮಟ್ಟದ ಅಧಿಕಾರಿಗಳ ಜತೆಗೂಡಿ ಪ್ರವಾಸ ಕೈಗೊಂಡು ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು.
ತಾಲೂಕು ಮಟ್ಟದ ಅಧಿಕಾರಿಗಳಾದ ಸಂದೀಪ್, ನಾಗಲಕ್ಷ್ಮೀ, ರೇಖಾ, ಸಿ.ಎಚ್.ಕಾಳೀರಯ್ಯ, ಮಹದೇವಪ್ಪ, ಸುರೇಶ್‌ಕುಮಾರ್, ಪರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಮುಖಂಡರಾದ ಕೆ.ಟಿ.ರಾಜಣ್ಣ, ಬಿಳಿಯಪ್ಪ, ಅಡಗನಹಳ್ಳಿ ಧನು, ರಜಿತ್, ಸತೀಶ್, ಗಿರೀಶ್, ರವಿ, ಚಂದ್ರಣ್ಣ ಇದ್ದರು.