Oplus_16908288 
ಜಿಲ್ಲೆ

ಶಾಸಕರ ಮನೆಯಲ್ಲಿ ಪೌರಕಾರ್ಮಿಕರಿಗೆ ಔತಣ ಕೂಟ

ವಿರಾಜಪೇಟೆ: ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರ ಮನೆಯಲ್ಲಿ ವಿರಾಜಪೇಟೆ ಪೌರ ಕಾರ್ಮಿಕರಿಗೆ ಸೋಮವಾರ ಔತಣಕೂಟವನ್ನು ಆಯೋಜಿಸಲಾಗಿತ್ತು.

ಪೌರಕಾರ್ಮಿಕರ ಕಷ್ಟ-ಸುಖಗಳನ್ನು ವಿಚಾರಿಸುತ್ತ ಅವರ ಅಹವಾಲುಗಳನ್ನು ಆಲಿಸುತ್ತಾ ಮಾತನಾಡಿದ ಶಾಸಕರು, ಪುರಸಭೆ ವ್ಯಾಪ್ತಿಯ ಎಲ್ಲ ಸಾರ್ವಜನಿಕರು ಆರೋಗ್ಯದಿಂದಿರಲು ಮತ್ತು ವಿರಾಜಪೇಟೆ ಪುರಸಭೆ ವ್ಯಾಪ್ತಿಯ ಪ್ರದೇಶಗಳು ಸ್ವಚ್ಛತೆಯಿಂದ ಇರಲು ಪೌರಕಾರ್ಮಿಕರ ಕೊಡುಗೆ ಬಹುದೊಡ್ಡದಾಗಿದೆ. ಅವರ ಕೊಡುಗೆಯನ್ನು ಸದಾ ಸ್ಮರಿಸುತ್ತಾ, ಅವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಪುರಸಭೆ ವ್ಯಾಪ್ತಿಯ ಸ್ವಚ್ಛತೆಗಾಗಿ ಶ್ರಮಿಸುವ ಪೌರಕಾರ್ಮಿಕರ ಕೆಲಸವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಶಾಸಕರು, ಪೌರಕಾರ್ಮಿಕರ ಹಿತದೃಷ್ಟಿಯಿಂದ ನಾನು ಸರ್ಕಾರದೊಂದಿಗೆ ಚರ್ಚಿಸಿ ಹಲವಾರು ಕಾರ್ಯಕ್ರಮಗಳನ್ನು ತರಲು ಬದ್ಧನಾಗಿದ್ದು, ಪೌರಕಾರ್ಮಿಕರು ಸಹ ಅನವಶ್ಯಕ ಮಾತುಗಳಿಗೆ ಕಿವಿಗೊಡದೆ, ಪುರಸಭೆ ವ್ಯಾಪ್ತಿಯ ಸ್ವಚ್ಛತೆ ಕಾಪಾಡುವಲ್ಲಿ ಮತ್ತಷ್ಟು ಮುತುವರ್ಜಿ ವಹಿಸಿ ಕೆಲಸ ಮಾಡಬೇಕೆಂದು ಕರೆ ನೀಡಿದರು.

ನಂತರ ಪೌರಕಾರ್ಮಿಕರಿಗೆ ಆಯೋಜಿಸಿದ್ದ ಔತಣಕೂಟದಲ್ಲಿ ಸ್ವತಹ ಶಾಸಕರೇ ಮುಂದೆ ನಿಂತು ಆಹಾರ ಬಡಿಸಿ ನಂತರ ಪೌರಕಾರ್ಮಿಕರೊಂದಿಗೆ ಭೋಜನ ಸವಿದರು. ಪುರಸಭೆಯ ಅಧ್ಯಕ್ಷ ದೇಚಮ್ಮ ಕಾಳಪ್ಪ, ಉಪಾಧ್ಯಕ್ಷರು ಮತ್ತು ಕಾಂಗ್ರೆಸ್ ಸದಸ್ಯರು, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.