ಶಿವಮೊಗ್ಗ: ಬಿಜೆಪಿ ಶಾಸಕ ಮುನಿರತ್ನ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಮತ್ತೆ ಎಂದೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡಬಾರದು ಎಂದು ಒಕ್ಕಲಿಗ ಸಮಾಜದ ಮುಖಂಡ ಆರ್.ಎಂ.ಮಂಜುನಾಥ ಗೌಡ ಆಗ್ರಹಿಸಿದರು.
ಒಕ್ಕಲಿಗ ಸಮುದಾಯಕ್ಕೆ ಒಂದು ಸಾಂಸ್ಕೃತಿಕ ಹಿನ್ನೆಲೆ ಇದೆ. ಈ ನಾಡು ಕಟ್ಟುವಲ್ಲಿ ಒಕ್ಕಲಿಗರ ಪಾತ್ರ ಹೆಚ್ಚಾಗಿದೆ. ನಮ್ಮ ಸ್ವಾಭಿಮಾನ, ಆತ್ಮ ಗೌರವಕ್ಕೆ ಈಗ ಮುನಿರತ್ನ ಅವರ ಹೇಳಿಕೆಯಿಂದ ಧಕ್ಕೆ ಉಂಟಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ನಾಲ್ಕು ಬಾರಿ ಶಾಸಕರು, ಒಮ್ಮೆ ಸಚಿವರೂ ಆಗಿದ್ದ ಮುನಿರತ್ನ ಅವರು ಒಕ್ಕಲಿಗ ಸಮಾಜಕ್ಕೆ ಕಳಂಕ ತಂದಿದ್ದಾರೆ. ಕೇವಲ ನಮ್ಮ ಸಮಾಜಕ್ಕಷ್ಟೇ ಅಲ್ಲ, ದಲಿತರ ಬಗ್ಗೆಯೂ ನಾಲಿಗೆ ಹರಿಬಿಟ್ಟಿದ್ದಾರೆ. ಜಾತಿ ಹೆಸರು ಹೇಳಿ ನಿಂದಿಸಿದ್ದಾರೆ. ಗುತ್ತಿಗೆದಾರ ಚೆಲುವರಾಜ್ ಅವರೊಂದಿಗೆ ಮಾತನಾಡಿದ ಸಂಭಾಷಣೆ ಕೇಳಿದರೆ ಮುನಿರತ್ನ ಎಷ್ಟು ನೀಚರು ಎಂಬುದು ಗೊತ್ತಾಗುತ್ತದೆ ಎಂದರು.
ಮುನಿರತ್ನ ಮತ್ತೆ ಪದೇಪದೆ ಇಂತಹ ತಪ್ಪುಗಳನ್ನು ಮಾಡುತ್ತಿದ್ದಾರೆ. ಮಹಿಳೆಯರ ಬಗ್ಗೆ ಅವರಿಗಿರುವ ಕೀಳು ಅಭಿರುಚಿ ಎಷ್ಟೆಂದು ಗೊತ್ತಾಗುತ್ತದೆ. ಬಿಜೆಪಿ ಮುಖಂಡರು ಇಷ್ಟಾದರೂ ಮುನಿರತ್ನ ಬಗ್ಗೆ ಖಂಡನೆ ಮಾಡುತ್ತಿಲ್ಲ. ಪ್ರಕರಣವನ್ನು ಮುಖ್ಯಮಂತ್ರಿಗಳು ಎಸ್‌ಐಟಿ ತನಿಖೆಗೆ ಒಪ್ಪಿಸಿದ್ದಾರೆ. ಆದರೆ ಕಠಿಣ ಕ್ರಮದ ಅವಶ್ಯಕತೆ ಇದೆ ಎಂದು ಒತ್ತಾಯಿಸಿದರು.
ಮುಖಂಡರಾದ ಬಿ.ಎ.ರಮೇಶ್ ಹೆಗ್ಡೆ, ಪುಟ್ಟಸ್ವಾಮಿ, ಭಾರತಿ ರಾಮಕೃಷ್ಣ, ಚೇತನ್‌ಗೌಡ, ಚಂದ್ರಕಾಂತ್, ಗುಂಡಪ್ಪ ಗೌಡ, ಪ್ರತಿಮಾ ಡಾಕಪ್ಪ, ಸುದರ್ಶನ್, ಮೋಹನ್ ಉಂಬ್ಳೆಬೈಲ್, ಧರ್ಮೇಶ್, ಪ್ರಭಾಕರ್, ಗೋ. ರಮೇಶ್ ಗೌಡ, ರಘು, ಕೃಷ್ಣಮೂರ್ತಿ, ಸಂದೀಪ್ ಸುದ್ದಿಗೋಷ್ಠಿಯಲ್ಲಿದ್ದರು.