ತುಮಕೂರು: ಜೆಡಿಎಸ್‌ನಿಂದ ಉಚ್ಛಾಟಿತಗೊಂಡಿದ್ದ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ನಿರೀಕ್ಷೆಯಂತೆಯೇ ಶಾಸಕ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ ಶ್ರೀನಿವಾಸ್, ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿ ಗುಬ್ಬಿ ಕ್ಷೇತ್ರದಿಂದ ಕೈ ಅಭ್ಯರ್ಥಿಯಾಗುವುದನ್ನು ಖಚಿತಪಡಿಸಿದರು.
ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಎಸ್.ಆರ್.ಶ್ರೀನಿವಾಸ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದ ಜೆಡಿಎಸ್ ಗುಬ್ಬಿ ಕ್ಷೇತ್ರದಲ್ಲಿ ಬೇರೊಬ್ಬರನ್ನು ಅಭ್ಯರ್ಥಿಯಾಗಿ ಘೋಷಿಸಿತ್ತು.
ಶ್ರೀನಿವಾಸ್ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಬಸವ ಜಯಂತಿಯಂದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದ್ದು, ನಂತರ ಗುಬ್ಬಿ ಕ್ಷೇತ್ರದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಿ ಕಾರ್ಯಕರ್ತರನ್ನು ಕಾಂಗ್ರೆಸ್ ಸೇರಿಸಿಕೊಳ್ಳುವುದಾಗಿ ತಿಳಿಸಿದರು.
ರಾಜೀನಾಮೆ ನೀಡುವ ಮುನ್ನ ತುಮಕೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಶ್ರೀನಿವಾಸ್, 20 ವರ್ಷದಿಂದ ಜೆಡಿಎಸ್‌ನಲ್ಲಿದ್ದು ಈಗ ಪಕ್ಷ ತೊರೆಯುತ್ತಿರುವುದಕ್ಕೆ ನೋವಾಗುತ್ತಿದೆ ಎಂದು ಭಾವನಾತ್ಮಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಎಚ್.ಡಿ.ರೇವಣ್ಣ ಅವರನ್ನು ನೆನಪಿಸಿಕೊಂಡು ರಾಜಕೀಯ ಜೀವನದಲ್ಲಿ ಸಹಕಾರ ನೀಡಿದ್ದಾರೆ, ಅವರಿಗೆ ಧನ್ಯವಾದಗಳು ಎಂದರು.
ನಾನು ಜೆಡಿಎಸ್ ತೊರೆಯದೇ ಅನ್ಯ ಮಾರ್ಗವಿಲ್ಲ. ಕಳೆದ ಅಕ್ಟೋಬರ್‌ನಲ್ಲಿಯೇ ಗುಬ್ಬಿಯಲ್ಲಿ ಬೇರೊಬ್ಬರನ್ನು ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಜತೆಗೆ ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡಿರುವುದು ನೋವು ತಂದಿದೆ ಎಂದರು.
ಸೇರ್ಪಡೆಗೆ ಸ್ಥಳೀಯ ವಿರೊಧ: ಕಾಂಗ್ರೆಸ್ ಸೇರ್ಪಡೆಗೆ ಸ್ಥಳೀಯ ಮುಖಂಡರ ವಿರೋಧವಿದ್ದು ಕುತೂಹಲ ಮೂಡಿಸಿದೆ. ಗುಬ್ಬಿಯ ಮುಖಂಡರಾದ ಹೊನ್ನಗಿರಿಗೌಡ ಹಾಗೂ ಪ್ರಸನ್ನಕುಮಾರ್ ಬಹಿರಂಗವಾಗಿಯೇ ಶ್ರೀನಿವಾಸ್ ವಿರುದ್ಧ ಸಮರ ಸಾರಿದ್ದು ಇಬ್ಬರಿಗೂ ಪಕ್ಷದ ವತಿಯಿಂದ ಎಚ್ಚರಿಕೆ ಕೂಡ ನೀಡಲಾಗಿದೆ ಎನ್ನಲಾಗಿದೆ.
ಶ್ರೀನಿವಾಸ್ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಮುಖಂಡರನ್ನು ಪಕ್ಷದಿಂದ ಅಮಾನತುಗೊಳಿಸುವ ಪ್ರಕ್ರಿಯೆ ಕೂಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆಸಲಾಗುತ್ತಿದ್ದು ಪಕ್ಷ ಸೇರ್ಪಡೆ ನಂತರ ವಿದ್ಯಮಾನಗಳು ಕುತೂಹಲ ಮೂಡಿಸಿದೆ.
ಕಳೆದ ಚುನಾವಣೆಯಲ್ಲಿ ದೇವೇಗೌಡರನ್ನು ನಾನು ಸೋಲಿಸಿದೆ ಎಂಬ ಕುಮಾರಸ್ವಾಮಿ ಆರೋಪ ನನಗೆ ನೋವು ತಂದಿದೆ, ನಾನು ಯಾವತ್ತು ಪಕ್ಷದ್ರೋಹ ಮಾಡಿಲ್ಲ. ಪ್ರಾಮಾಣಿಕವಾಗಿ ಪಕ್ಷ ಕಟ್ಟೋಕೆ ಆ ಪಕ್ಷದ ಏಳಿಗೆಗೋಸ್ಕರ ದುಡಿದಿದ್ದೇನೆ. ನನಗೂ ಕುಮಾರಸ್ವಾಮಿ ಮಧ್ಯೆ ಒಂದು ಭಾವನಾತ್ಮಕ ಸಂಬಂಧ ಇತ್ತು. ಆವರು ಯಾರ ಮಾತು ಕೇಳಿ ನನ್ನನ್ನು ಪಕ್ಷದಿಂದ ಹೊರಹಾಕಿದರೊ ಅವರೇ ಹೇಳಬೇಕು.
| ಎಸ್.ಆರ್.ಶ್ರೀನಿವಾಸ್ ಶಾಸಕ