ಬಾಗಲಕೋಟೆ: ಶಾಸಕ ಸಿದ್ದು ಸವದಿ ವಿರುದ್ಧ ಕಾಂಗ್ರೆಸ್ ಮುಖಂಡರು ಮಾಡುತ್ತಿರುವ ಆರೋಪ ಶುದ್ಧ ಸುಳ್ಳು. ಕೆಲವು ದುಷ್ಟ ಶಕ್ತಿಗಳು, ಪಟ್ಟಭದ್ರ ಹಿತಾಸಕ್ತಿಗಳು ರಾಜಕೀಯ ಲಾಭಕ್ಕಾಗಿ ಚುನಾವಣೆ ಸಮೀಪಸುತ್ತಿದ್ದಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ತೇರದಾಳ ಮತಕ್ಷೇತ್ರದ ಬಿಜೆಪಿ ಮುಖಂಡರಾದ ಸುರೇಶ ಅಕ್ಕಿವಾಡ, ಧರಿಯಪ್ಪ ಉಳ್ಳಾಗಡ್ಡಿ ಹೇಳಿದರು.
ಈಗಾಗಲೇ ಜನರ ಆಶಿರ್ವಾದದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸಿದ್ದು ಸವದಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಮತದಾರರ ಸಮೀಕ್ಷೆಯಲ್ಲಿ ಗೆಲುವಿನ ಮುನ್ಸೂಚನೆ ಸಿಕ್ಕಿದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ಹೇಳಿಕೆ, ಆರೋಪ ಮಾಡತ್ತಿದ್ದಾರೆ. ಇದರಲ್ಲಿ ಸತ್ಯಾಂಶವಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಜಿಲ್ಲಾ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ೯ ಎಕರೆ ಜಮೀನು ಇದೆ ಅಂತ ಸುಳ್ಳು ಹೇಳಿ ಅಪಿಡವಿಟ್ ಸಲ್ಲಿಸಿ ಚುನಾವಣೆಗೆ ಸ್ಪರ್ಧೆ ಮಾಡಿ ಅಧಿಕಾರ ಅನುಭವಿಸಿ ಈಗ ೮೦ ಎಕರೆ ಆಗಿರುವ ಬಗ್ಗೆ ಸೂಕ್ತ ವಿವರಣೆ ಕೊಡಲಿ. ಈಗಾಗಲೇ ಈ ವಿಷಯಕ್ಕೆ ಸಂಬಂಧಿಸಿದಂತೆ ಧಾರವಾಡ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ನಡಿತಾ ಇದೆ. ಎಲ್ಲರಿಗೂ ತಿಳಿದ ವಿಷಯ. ಶಾಸಕರ ಬಗ್ಗೆ ಮಾತನಾಡಿ ದೊಡ್ಡರಾಗಬೇಕು ಎನ್ನುವ ಹುಚ್ಚು ಕಲ್ಪನೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಕಾನೂನಾತ್ಮಕ ಹೋರಾಟ ಮಾಡಲು ಸಾಕಷ್ಟು ಅವಕಾಶಗಳಿವೆ. ವೋಟ್ ಬ್ಯಾಂಕ್ ರಾಜಕಾರಣಕ್ಕೆ ಕೀಳು ಮಟ್ಟದ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಚುಚ್ಚಿದರು.
ನೇರವಾಗಿ ಚುನಾವಣೆಗೆ ಸ್ಪರ್ಧೆ ಮಾಡಲಿ ಅದು ಬಿಟ್ಟು ಶಾಸಕ ಸಿದ್ದು ಸವದಿ ಮೇಲೆ ಆರೋಪ ಮಾಡುವುದು ಸರಿಯಲ್ಲ. ಜಿ.ಪಂ, ತಾಪಂ ಅನುದಾನ ದುರ್ಬಳಕೆ ಮಾಡಿದ್ದಾರೆ ಎನ್ನುವ ಆರೋಪ ಮಾಡಿದ್ದಾರೆ. ಈ ಬಗ್ಗೆ ದೂರು ಕೊಡಬೇಕು. ಕಾಮಗಾರಿಯಗಳನ್ನು ಗುತ್ತಿಗೆದಾರರನ್ನು ನೇಮಿಸುವ ಅಧಿಕಾರ ಶಾಸಕರಿಗೆ ಇಲ್ಲ. ಇ ಟೆಂಡರ ಮುಖಾಂತರ ನಡೆಯುತ್ತದೆ ಎನ್ನವುದ ಕನಿಷ್ಠ ಜ್ಞಾನವಿಲ್ಲದೆ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರ ಸೋಲಿನ ಹತಾಶೆಯಿಂದ ಹೇಳಿಕೆ ನೀಡುತ್ತಿದ್ದಾರೆ. ಆರೋಪ ಮಾಡುವ ಮುನ್ನ ಸೂಕ್ತ ದಾಖಲೆಗಳ ಪುರಾವೆ ಕೊಡಲಿ ಎಂದು ತಿಳಿಸಿದರು.
ಆನಂದ ಕಂಪು, ಜಿ.ಎಸ್.ಗೊಂಬಿ, ರಾಜು ಚಮಕೇರಿ, ವರ್ಧಮಾನ ಕೇರಿ ಸುದ್ದಿಗೋಷ್ಠಿಯಲ್ಲಿ ಇದ್ದರು.