ಬಸವಕಲ್ಯಾಣ: ಬಕ್ರೀದ್ ಹಬ್ಬದ ದಿನ ನಡೆದ ಗಲಾಟೆ ಸಂಬಂಧಿಸಿದಂತೆ ಶಾಸಕ ಶರಣು ಸಲಗರ ಸೇರಿ 9 ಮಂದಿ ವಿರುದ್ಧ ನಗರ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ. ನಗರದ ಹಿರೇಮಠ ಕಾಲನಿ ನಿವಾಸಿ ಮೇರಾಜ್ ಇನಾಮುಲ್ಲಾಖಾನ್ ನೀಡಿದ ದೂರಿನ ಮೇರೆಗೆ ಶಾಸಕ ಸಲಗರ, ಲಿಂಗರಾಜ್ ಶಾಶೆಟ್ಟೆ, ಸಂತೋಷ ಸೋಳಂಕೆ ಸೇರಿದಂತೆ 9 ಮಂದಿ ವಿರುದ್ಧ ಧಮ್ಕಿ, ಬೆದರಿಕೆ, ಮತೀಯ ಭಾವನೆಗಳಿಗೆ ಧಕ್ಕೆ, ಅತಿಕ್ರಮ ಪ್ರವೇಶ ಆರೋಪದ ಮೇರೆಗೆ ದೂರು ದಾಖಲಾಗಿದೆ. ಜು.1ರಂದು ಬಕ್ರೀದ್ ಹಬ್ಬದ ಅಂಗವಾಗಿ ಫಿರ್ಯಾದಿ ತಮ್ಮ ಕುಟುಂಬ ಸದಸ್ಯರ ಜತೆ ಮನೆಯಲ್ಲಿ ಕುರ್ಬಾನಿ ಕೊಡುವಾಗ ಶಾಸಕ ಶರಣು ಸಲಗರ ಸೇರಿ 15-25 ಮಂದಿ ಮನೆ ಮುಂದೆ ಬಂದು ಗಲಾಟೆ ನಡೆಸಿದ್ದಾರೆ. ಅತಿಕ್ರಮ ಪ್ರವೇಶಿಸಿ ಅದು ಹೇಗೆ ಕುರ್ಬಾನಿ ಕೊಡುತ್ತೀರಿ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಮನೆಯಲ್ಲಿ ಗೋಹತ್ಯೆ ನಡೆಸಲಾಗುತ್ತಿದೆ ಎಂದು ಶಾಸಕ ಶರಣು ಸಲಗರ ಹಾಗೂ ಬೆಂಬಲಿಗರು ಆರೋಪಿಸಿ ಗಲಾಟೆ ನಡೆಸಿದ್ದರು. ಬಳಿಕ ಪೊಲೀಸ್ರು ಬಂದು ಗಲಾಟೆ ನಿಯಂತ್ರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.