ಜಿಲ್ಲೆ

ಶಾಸಕ, ಸಚಿವರಿಗೂ ಗೊತ್ತಿಲ್ಲದ ಯೋಜನೆ

ಚಾಮರಾಜನಗರ: ಜಿಲ್ಲೆಯಲ್ಲಿ ಹರಿಯುವ ಕಾವೇರಿ ನದಿಯಿಂದ ಮತ್ತು ಎರಡು ಕೆರೆಗಳಿಗೆ ನೀರು ತುಂಬಿಸಿ ಬೆಂಗಳೂರಿನ ಸುತ್ತಮುತ್ತಲ ಕೈಗಾರಿಕಾ ಪ್ರದೇಶಗಳಿಗೆ ನೀರು ಹರಿಸುವ ಯೋಜನೆಯ ಬಗ್ಗೆ ಕ್ಷೇತ್ರದ ಶಾಸಕರಷ್ಟೇ ಅಲ್ಲ, ಉಸ್ತುವಾರಿ ಸಚಿವರಿಗೂ ಗೊತ್ತುಪಡಿಸಿಲ್ಲ.

ಕೈಗಾರಿಕ ಪ್ರದೇಶಾಭಿವೃದ್ಧಿ ಮಂಡಳಿ ಈ ಯೋಜನೆಯನ್ನು ರೂಪಿಸಿದ್ದು, ಮುಂಗಾರು ಅವಧಿಯಲ್ಲಿ ಕೊಳ್ಳೇಗಾಲದ ಸರಗೂರಿನಿಂದ ನೇರವಾಗಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಕೈಗಾರಿಕಾ ಪ್ರದೇಶಗಳಿಗೆ ನೀರು ಸರಬರಾಜು ಮಾಡುವುದು. ಮುಂಗಾರು ನಂತರ ಕಾವೇದಿ ನದಿಯಿಂದ ಯಳಂದೂರಿನ ಅಗರ ಮತ್ತು ಮದ್ದೂರು ಕೆರೆಗಳಿಗೆ ನೀರು ಹರಿಸಿ, ಇಲ್ಲಿಂದ ಕೈಗಾರಿಕಾ ಪ್ರದೇಶಗಳಿಗೆ ಪೈಪ್‌ಲೈನ್ ಮೂಲಕ ನೀರು ಒದಗಿಸುವುದು ಯೋಜನೆಯ ಸ್ವರೂಪ.

ಆದರೆ ಅಧಿಕಾರಿಗಳು ಈ ಯೋಜನೆ ಬಗ್ಗೆ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ಗಮನಕ್ಕೆ ತಂದಿಲ್ಲ. ಅಷ್ಟೇ ಯಾಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರಿಗೂ ಇದರ ಬಗ್ಗೆ ಮಾಹಿತಿ ಇಲ್ಲ. ಜನಪ್ರತಿನಿಧಿಗಳ ಅವಗಾಹನೆಗೇ ಬಾರದಿದ್ದ ಮೇಲೆ ಇನ್ನು ಜನರ ಗಮನಕ್ಕೆ ಬಂದಿರಲೂ ಸಹ ಸಾಧ್ಯವಿಲ್ಲ. ಹೀಗಾಗಿ ಬಹುಕೋಟಿ ರೂ.ವೆಚ್ಚದ ಯೋಜನೆಯನ್ನು ರೂಪಿಸುವಾಗ ಆ ಕ್ಷೇತ್ರದ ಜನಪ್ರತಿನಿಧಗಳನ್ನು ಕಡೆಗಣಿಸಿ, ಸ್ಥಳೀಯ ರೈತರ ಅಭಿಪ್ರಾಯ ಪರಿಗಣಿಸದೆ, ಸಾಧಕ-ಬಾಧಕಗಳನ್ನು ಅವಲೋಕಿಸದೆ ಸದ್ದಿಲ್ಲದೆ ಮುಂದುವರೆದಿರುವುದು ಇಲ್ಲಿ ಎದ್ದು ಕಾಣುತ್ತಿದೆ.

ಯೋಜನೆಗೆ ಕೆರೆಗಳ ಹಸ್ತಾಂತರ ಮಾಡಲ್ಲ:

ಸರಗೂರು ಕಾವೇರಿಯಿಂದ ಅಗರ, ಮದ್ದೂರು ಕೆರೆಗಳಿಗೆ ನೀರು ತಂದು, ಕೆರೆಗಳಿಂದ ಬೆಂಗಳೂರಿನ ಸುತ್ತಮುತ್ತಲ ಜಿಲ್ಲೆಗಳಿಗೆ ನೀರು ಪೂರೈಸುವ ಯೋಜನೆ ಅವೈಜ್ಞಾನಿಕ ಮತ್ತು ದುಬಾರಿ. ಹೀಗಾಗಿ ಕೆರೆಗಳನ್ನು ಹಸ್ತಾಂತರ ಮಾಡುವುದಿಲ್ಲ ಎಂದು ನೀರಾವರಿ (ದಕ್ಷಿಣ) ವಲಯದ ಮುಖ್ಯ ಇಂಜಿನಿಯರ್‌ಗೆ ಕಬಿನಿ ಮತ್ತು ವರುಣಾ ನಾಲಾ ವೃತ್ತದ ಅಧೀಕ್ಷಕ ಇಂಜಿನಿಯರ್ ಪತ್ರ ಬರೆದಿದ್ದಾರೆ. ಸೆ.29ರಂದು ಬರೆದಿರುವ ಪತ್ರದಲ್ಲಿ ಕೆರೆಗಳ ಹಸ್ತಾಂತರ ಮತ್ತು ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಳ ಮಾಡಲು ಏರಿಗಳನ್ನು ಅಭಿವೃದ್ಧಿ ಪಡಿಸುವುದರಿಂದ ಆಗುವ ಪರಿಣಾಮಗಳ ಕುರಿತು ವಿವರವಾದ ಸ್ಥಳ ಪರಿಶೀಲನಾ ವರದಿಯನ್ನು ಸಲ್ಲಿಸುವಂತೆ ಕೆಐಎಡಿಬಿಯವರು ತಿಳಿಸಿರುವುದನ್ನು ಉಲ್ಲೇಖಿಸಲಾಗಿದೆ. ಇದನ್ನು ಪರಿಶೀಲಿಸಲಾಗಿ, ಸದರಿ ಕೆರೆಗಳು ಸಣ್ಣ ನೀರಾವರಿ ಇಲಾಖೆಯ ಅಧೀನದಲ್ಲಿ ಬರುವ ಕೆರೆಗಳಾಗಿದ್ದು, ಈಗಾಗಲೇ ಜಲಸಂಪನ್ಮೂಲ ಇಲಾಖೆಗೆ ಹಸ್ತಾಂತರಗೊಂಡಿದೆ. ಕೆರೆಗಳ ಮೂಲ ಉದ್ದೇಶ ನೀರಾವರಿ ಸೌಲಭ್ಯ ಒದಗಿಸಲು ಮಾತ್ರ ಸೀಮತವಾಗಿದೆ. ಕೆರೆಗಳ ಏರಿಗಳನ್ನು ಎತ್ತರಿಸಿದರೆ ಅಕ್ಕ-ಪಕ್ಕದ ಜಮೀನುಗಳು ಹಾಗೂ ವಿತರಣಾ ನಾಲೆ-42ರ ಫೀಡರ್ ನಾಲೆಗಳು ಮುಳುಗಡೆಯಾಗುತ್ತವೆ ಎಂಬ ಮಾಹಿತಿಯನ್ನು ಕೊಳ್ಳೇಗಾಲ ಉಪ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ವರದಿ ನೀಡಿದ್ದಾರೆ.

ಬೆಂಗಳೂರಿನಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ಕೊಳ್ಳೇಗಾಲ ಮತ್ತು ಯಳಂದೂರಿನಿಂದ ನೀರು ಹರಿಸುವುದು ಅವೈಜ್ಞಾನಿಕ. ನದಿ ಬಲಭಾಗದ ಕೆರೆಗಳಿಗೆ ನೀರು ತುಂಬಿಸಿ ನಂತರ ನದಿಯನ್ನು ಹಾದುಹೋಗುವಂತೆ ಪೈಪ್‌ಲೈನ್ ಅಳವಡಿಸುವುದು ತಾಂತ್ರಿಕವಾಗಿಯೂ ಸರಿಯಾದ ಯೋಜನೆಯಲ್ಲ ಮತ್ತು ದುಬಾರಿಯೂ ಆಗಿರುತ್ತದೆ. ಹೀಗಾಗಿ ಬದಲಿ ಯೋಜನೆಗಳು ಲಭ್ಯವಿರುವುದರಿಂದ ಪ್ರಸ್ತುತ ಯೋಜಿಸಿರುವ ಕೆರೆಗಳು ನೀರಾವರಿ ಸೌಲಭ್ಯದ ಕೆರೆಗಳಾಗಿರುವುದರಿಂದ ಹಸ್ತಾಂತರಿಸಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ.

ಇಲ್ಲಿಗೇ ಬೇಕಾಗಿದೆ ನೀರಾವರಿ ಯೋಜನೆ: ಚಾಮರಾಜನಗರ ಜಿಲ್ಲೆಯಲ್ಲೇ ನೀರಿನ ಕೊರತೆ ಕಾಡುತ್ತಿದೆ. ಕೊಳ್ಳೇಗಾಲದ ಕಾವೇರಿ ನದಿಯಿಂದ ಮತ್ತು ಯಳಂದೂರಿನ ಕೆರೆಗಳಿಂದ ಬೇರೆ ಜಿಲ್ಲೆಯ ಕೈಗಾರಿಕೆಗಳಿಗೆ ನೀರು ಒದಗಿಸಲು ಇರುವ ಇಚ್ಛಾಶಕ್ತಿ ಇಲ್ಲಿ ಕುಡಿಯಲೂ ಸಹ ನೀರಿಲ್ಲದ ಗ್ರಾಮಗಳಿಗೆ ಜಲ ಹರಿಯಲೂ ಪ್ರದರ್ಶನಗೊಳ್ಳಬೇಕಾಗಿದೆ. ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದರಿಂದ ಜಿಲ್ಲೆಯನ್ನು ಬರ ಕಾಡುತ್ತಿದೆ. ಅಂತರ್ಜಲ ಮಟ್ಟ ಕುಸಿತ ಕಂಡಿದೆ. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದರು. ಸಭೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ನೀರಿನ ಕೊರತೆ ಕಾಡುತ್ತಿರುವ ಮತ್ತು ಭವಿಷ್ಯದಲ್ಲಿ ಕಾಡುವ ಗ್ರಾಮಗಳ ಪಟ್ಟಿಯನ್ನು ಅಧಿಕಾರಿಗಳು ಸಭೆಯ ಮುಂದಿಟ್ಟಿದ್ದರು. ಆ ಮಾಹಿತಿ ಪ್ರಕಾರ, ಈಗ ಸರಗೂರಿನ ಕಾವೇರಿ ನದಿಯಿಂದ ನೀರು ಸರಬರಾಜು ಮಾಡಬೇಕೆಂದಿರುವ ಕೊಳ್ಳೇಗಾಲ ತಾಲೂಕಿನಲ್ಲಿ ಮುಂಬರುವ ದಿನಗಳಲ್ಲಿ 5 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಬಹುದು. ಇದರಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಬಹುದಾದ 1 ಗ್ರಾಮದಲ್ಲಿ ಒಪ್ಪಂದಕ್ಕಾಗಿ ಖಾಸಗಿ ಬೋರ್‌ವೆಲ್‌ಅನ್ನು ಗುರುತಿಸಲಾಗಿದೆ. ಇನ್ನು ಕಾವೇದಿ ನದಿಯಿಂದ ಅಗರ ಮತ್ತು ಮದ್ದೂರು ಕೆರೆಗಳಿಗೆ ನೀರು ತುಂಬಿಸಬೇಕೆಂದಿರುವ ಯಳಂದೂರು ತಾಲೂಕಿನಲ್ಲಿ 7 ಗ್ರಾಮಗಳಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಲಿದೆ. ಹೀಗಾಗಿ 6 ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್‌ಗಳಲ್ಲಿ ಕುಡಿಯುವ ನೀರು ಒದಗಿಸಲು ಒಪ್ಪಂದಕ್ಕೆ ಗುರುತಿಸಲಾಗಿದೆ. ಮೂಲಸೌಕರ್ಯಗಳಲ್ಲಿ ಕುಡಿಯುವ ನೀರಿಗೆ ಒದಗಿಸುವುದು ಆದ್ಯ ಕರ್ತವ್ಯ. ಕೈಗಾರಿಕೆಗೆ ನೀರು ಕೊಡುವುದು ನಂತರದ ವಿಚಾರ ಎನ್ನುವುದನ್ನು ಮರೆಯುವಂತಿಲ್ಲ.

ಕೊಳ್ಳೇಗಾಲದ ಕಾವೇರಿ ನದಿಯಿಂದ ಯಳಂದೂರು ಕೆರೆಗಳಿಗೆ ನೀರು ತುಂಬಿಸಿ, ಇಲ್ಲಿಂದ ಬೆಂಗಳೂರಿನ ಕೈಗಾರಿಕೆಗೆ ಸರಬರಾಜು ಮಾಡುವ ಯೋಜನೆಯ ಬಗ್ಗೆ ನನ್ನ ಬಳಿ ಮಾಹಿತಿ ಇಲ್ಲ. ಕೆ.ವೆಂಕಟೇಶ್, ಜಿಲ್ಲಾ ಉಸ್ತುವಾರಿ ಸಚಿವ ಬೆಂಗಳೂರಿನ ಕೈಗಾರಿಕೆಯ ಪ್ರದೇಶಗಳಿಗೆ ನೀರು ಪೂರೈಸಲು ಅಗರ-ಮದ್ದೂರು ಗ್ರಾಮದ ಕೆರೆಗಳನ್ನು ಬಳಸಿಕೊಳ್ಳುವ ನಿರ್ಧಾರದ ಬಗ್ಗೆ ಸ್ಥಳೀಯ ರೈತರಿಗೆ ಗೊತ್ತೇ ಇಲ್ಲ. ಈ ಯೋಜನೆಯ ಬಗ್ಗೆ ರೈತರಿಗೆ ಆಗುವ ಅನುಕೂಲ ಅಥವಾ ಅನಾನುಕೂಲವನ್ನು ಇಲಾಖೆಯ ಅಧಿಕಾರಿಗಳು ಅಥವಾ ಸರ್ಕಾರದವರು ಮಾಹಿತಿಯನ್ನೇ ನೀಡಿಲ್ಲ. ರೈತರ ಗಮನಕ್ಕೆ ಬಾರದೆ, ಚರ್ಚೆ ನಡೆಸದೆ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ಬಿ.ಪುಟ್ಟಸುಬ್ಬಣ್ಣ , ಅಗರ ಗ್ರಾಮದ ರೈತ