ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡಿನಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಸ್ಥಳಾಂತರ ಮಾಡದೆ ಹೋದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಶಾಸಕರ ವಿರುದ್ಧ ಗೋ ಬ್ಯಾಕ್ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ ಎಚ್ಚರಿಕೆ ನೀಡಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡಿನಲ್ಲಿ ಕಾಡಾನೆಗಳ ಉಪಟಳ ಹೆಚ್ಚಳವಾಗಿದೆ. ರೈತರಿಗೆ ಹಾಗೂ ಬೆಳೆಗಾರರಿಗೆ ಅಪಾರ ಹಾನಿ ಸಂಭವಿಸಿದೆ. ಆದರೆ ಜನಪ್ರತಿನಿಧಿಗಳು ಸೇರಿದಂತೆ ಜಿಲ್ಲಾಡಳಿತ ಆನೆ ಹಾವಳಿ ತಡೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕೇಂದ್ರದ ಸಮೀಪದಲ್ಲಿರುವ ಮೆಣಸಿನ ಮಲ್ಲೇದೇವರಹಳ್ಳಿ, ಆಲದಗುಡ್ಡೆ, ವಸ್ತಾರೆ, ಕೆಸವಿನಮನೆ, ಮೂಗ್ತಿಹಳ್ಳಿ, ಕದ್ರಿಮಿದ್ರಿ ಕಂಚಿನಹಳ್ಳಿ, ಕೆ.ಆರ್.ಪೇಟೆ, ಕಂಬಿಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶದಲ್ಲಿ ಸುಮಾರು ೨೦ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿವೆ. ಆನೆಗಳ ಓಡಾಟದಿಂದ ಭತ್ತದ ಗದ್ದೆಗಳಲ್ಲಿ ಗುಂಡಿ ಗೊಟರುಗಳಾಗಿವೆ. ಕಾಫಿ ಗಿಡಗಳನ್ನು ಬೇರು ಸಹಿತ ಕಿತ್ತು ಹಾಕಿವೆ ಎಂದು ದೂರಿದರು.
ಕಾಡಾನೆಗಳ ಹಾವಳಿ ಅತಿಯಾಗಿದೆ. ಆದರೂ ಕೂಡ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳ ಸಭೆಯನ್ನು ಕರೆದು ಸೂಕ್ತವಾದ ನಿರ್ದೇಶನ ನೀಡಿಲ್ಲ. ಅವರು ತೋಟಕ್ಕೆ ಮಾತ್ರ ಬಂದು ಹೋಗುತ್ತಿದ್ದಾರೆ. ಜಿಲ್ಲಾಡಳಿತವೂ ಕೂಡ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಜಿಲ್ಲಾಡಳಿತ ನಿಷ್ಕಿöçಯವಾಗಿದೆ. ಈ ಕುರಿತು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಕಾಡಾನೆಗಳನ್ನು ಕೂಡಲೇ ಸ್ಥಳಾಂತರ ಮಾಡಬೇಕು ಇಲ್ಲದೆ ಹೋದರೆ ಜಿಲ್ಲೆಯ ಉಸ್ತುವಾರಿ ಸಚಿವರ ಹಾಗೂ ಶಾಸಕರುಗಳ ವಿರುದ್ಧ ಗೋ ಬ್ಯಾಕ್ ಚಳವಳಿಯನ್ನು ರೂಪಿಸಲು ಸಾಧ್ಯದಲ್ಲೇ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಸೀತರಾಮ ಭರಣ್ಯ, ಹಿರೇಮಗಳೂರು ಪುಟ್ಟಸ್ವಾಮಿ, ಉಮೇಶ್, ದಿನೇಶ್, ನಾಗರಾಜ್ ಉಪಸ್ಥಿತರಿದ್ದರು.
ಕೋಟ್....
ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ತಮ್ಮ ತೋಟಕ್ಕೆ ಮಾತ್ರ ಸೀಮಿತರಾಗಿದ್ದಾರೆ. ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ತೋಟಕ್ಕೆ ಬರಬೇಕು ಎಂದೆನಿಸಿದಾಗ ಚಿಕ್ಕಮಗಳೂರಿಗೆ ಪ್ರವಾಸ ಹಾಕಿಕೊಳ್ಳುತ್ತಾರೆ. ಒಟ್ಟಾರೆಯಾಗಿ ಜಾರ್ಜ್ ತಮ್ಮ ತೋಟದ ಉಸ್ತುವಾರಿ ಸಚಿವರಾಗಿದ್ದಾರೆ.
ಎಚ್.ಸಿ.ಕಲ್ಮರುಡಪ್ಪ, ಬಿಜೆಪಿ ರೈತ ಮೋರ್ಚ ರಾಜ್ಯ ಪ್ರಧಾನ ಕಾರ್ಯದರ್ಶಿ