ಇಂಡಿ: ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಸಾಲದ ಸುಳಿಗೆ ಸಿಲುಕಿದೆ. ಕೇವಲ 180 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಕಾರ್ಖಾನೆ ಇದೀಗ 360 ಕೋಟಿ ರೂ. ಸಾಲದಲ್ಲಿದೆ ಎಂದು ಬಿಜೆಪಿ ಮುಖಂಡ ಶಿವಯೋಗಪ್ಪ ನೇದಲಗಿ ಆರೋಪಿಸಿದ್ದಾರೆ.
ಸೋಮವಾರ ಸಾಲೋಟಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿರುವ ಅವರು, ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಈಗ ಮಾಡಿದ್ದೇನು?. ಇಂದು ಆ ಕಾರ್ಖಾನೆ ಸ್ಥಿತಿ ಏನಾಗಿದೆ? 180 ಕೋಟಿ ರೂ.ವೆಚ್ಚದಲ್ಲಿ ಆರಂಭವಾದ ಕಾರ್ಖಾನೆಗೆ ಸಿದ್ದರಾಮಯ್ಯ ಅವರು 40 ಕೋಟಿ ರೂ.ಅನುದಾನ ನೀಡಿದರು. ಆಗಲಾದರೂ ಸಾಲದ ಪ್ರಮಾಣ ಕಡಿಮೆಯಾಗಬೇಕಿತ್ತು. ಬದಲಾಗಿ ಇನ್ನಷ್ಟು ಹೆಚ್ಚಾಗಿದೆ ಎಂದು ನೇದಲಗಿ ಗಂಭೀರ ಆರೋಪ ಮಾಡಿದರು.
‘ಬರೀ ನಾನು, ನನ್ನದು, ನನ್ನಿಂದಲೇ ಎಲ್ಲ, ಇಡೀ ಇಂಡಿ ತಾಲೂಕು ನನ್ನದು’ ಎಂಬಂತೆ ಶಾಸಕರು ಭಾಷಣ ಮಾಡುತ್ತಾರೆ. ಕಾಂಗ್ರೆಸ್ ಪಕ್ಷ ನನ್ನ ತಾಯಿ ಇದ್ದಂತೆ. ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧನಿದ್ದೇನೆ ಎನ್ನುವ ಇವರು, ಬಿ.ಆರ್. ಪಾಟೀಲ, ಬಿ.ಜಿ. ಪಾಟೀಲ ಕಾಂಗ್ರೆಸ್‌ನಿಂದ ಚುನಾವಣೆಗೆ ನಿಂತಾಗ ಪಕ್ಷೇತರ ಅಭ್ಯರ್ಥಿ ರವಿ ಪಾಟೀಲರ ಚುನಾವಣೆ ಮಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗುವ ಸಂದರ್ಭ ಎಂ.ಬಿ. ಪಾಟೀಲರ ಮನೆ ಮುಂದೆ ಹೋಗಿ ನಿಂತರು. ಬಳಿಕೆ ಅವರ ವಿರುದ್ಧವೇ ತಿರುಗಿಬಿದ್ದರು. ಇವರಿಗೆ ಪಕ್ಷದ ತತ್ವ ಸಿದ್ದಾಂತದ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ? ಹೇಳುವುದು ಶಾಸ್ತ್ರ ತಿನ್ನುವುದು ಬದನೆಕಾಯಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲರ ಹೆಸರು ಹೇಳದೆ ಖಾರವಾಗಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮಾಡಬೇಕಾದರೆ ನನ್ನನ್ನು ಕುರಿತು ‘ಆತ ಗುಂಡಾಗಿರಿ, ದಾದಾಗಿರಿ ಮಾಡುತ್ತಾನೆ, ಇಂಥವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಗತಿ ಏನು?’ ಎಂದೆಲ್ಲಾ ಪ್ರಶ್ನಿಸಿದ ಯಶವಂತರಾಯಗೌಡರಿಗೆ ತಮ್ಮ ಚುನಾವಣೆ ಸಂದರ್ಭ ಗುತ್ತೆದಾರ ಅವರ ಮನೆಯಲ್ಲಿ ಬಂದು ನನ್ನನ್ನು ಗೆಲ್ಲಿಸಿ ಎಂದು ಅಂಗಲಾಚುವಾಗ ‘ದಾದಾಗಿರಿ, ಗೂಂಡಾಗಿರಿ ನೆನಪಾಗಲಿಲ್ಲವೇ?’ ಎಂದು ಪ್ರಶ್ನಿಸಿದ ನೇದಲಗಿ ‘ಇದೇ ನನ್ನ ಕೊನೇ ಚುನಾವಣೆ ಇದೊಂದು ಬಾರಿ ಸಹಕರಿಸು’ ಎಂದು ಮಾತು ಕೊಟ್ಟಿದ್ದೀರಿ. ನಾನು ಸಹ ಮಾತು ಕೊಟ್ಟಂತೆ ‘ಜಿಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ, ನೀವು ಮಾತು ಕೊಟ್ಟಂತೆ ಮುಂದಿನ ಬಾರಿ ಚುನಾವಣೆಗೆ ನಿಲ್ಲಬಾರದು’ ಎಂದು ಯಶವಂತರಾಯಗೌಡ ಪಾಟೀಲಗೆ ಪರೋಕ್ಷವಾಗಿ ಸವಾಲು ಹಾಕಿದರು.
ಅಂತಿಮವಾಗಿ ಮುಂಬರುವ ಚುನಾವಣೆಯಲ್ಲಿ ನಾನೂ ಸಹ ಬಿಜೆಪಿ ಟಿಕೆಟ್ ಆಕಾಂಕ್ಷಿ. ಟಿಕೆಟ್ ಸಿಕ್ಕಿದ್ದೇ ಆದರೆ ಗೆಲುವು ನಿಶ್ಚಿತ. ವ್ಯಕ್ತಿ ನೋಡಿ. ಜಾತಿ, ನೀತಿ ಎನ್ನದೇ ಆಶೀರ್ವಾದ ಮಾಡಿ. ನನಗೆ ಟಿಕೆಟ್ ಸಿಗದೇ ಹೋದರೆ ಯಾರಿಗೆ ಸಿಗುತ್ತದೋ ಅವರಿಗೆ ಗೆಲ್ಲಿಸೋಣ ಎನ್ನುವ ಮೂಲಕ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿ ಎಂಬುದನ್ನು ಬಹಿರಂಗ ಪಡಿಸಿದರು.
ಮುಖಂಡರಾದ ಶಿವಯೋಗಪ್ಪ ಚನ್ನಗೊಂಡ, ರಾಜುಗೌಡ ಪಾಟೀಲ, ಅಪ್ಪಾಶಾ ಗೊರನಾಳ, ಮಹೇಶ ಹಸನಾಪುರ ಮತ್ತಿತರರಿದ್ದರು.