ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಜಾತಿ ನಿಂದನೆ, ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ ಆರೋಪ ಹೊತ್ತು ಜೈಲು ಸೇರಿರುವ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ವಿರುದ್ಧ ದಲಿತ ಸಂಘಟನೆಗಳು ಸಿಡಿದೆದ್ದಿವೆ.
ದಲಿತ ಸಮುದಾಯದ ಬಗ್ಗೆ ನಿಂದಿಸಿರುವ ಮುನಿರತ್ನ ಅವರ ಶಾಸಕತ್ವ ರದ್ದುಗೊಳಿಸಿ ಗಡಿಪಾರು ಮಾಡುವಂತೆ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿ ಅಣಕು ಶವ ದಹಿಸಿದವು.
ನಗರದ ಪ್ರವಾಸಿ ಮಂದಿರ ಬಳಿ ಹಲವು ದಲಿತ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ಸಮಾವೇಶಗೊಂಡ
ಸಾವಿರಾರು ಮಂದಿ ಪ್ರತಿಭಟನಾಕಾರರು, ಮುನಿರತ್ನ ವಿರುದ್ಧ ಘೋಷಣೆ ಕೂಗಿದರು. ರಸ್ತೆಯಲ್ಲಿ ಕುಳಿತುಕೊಂಡು ತಮಟೆ ಭಾರಿಸಿ, ಅರೆಬೆತ್ತಲೆ ಮೆರವಣಿಗೆ ನಡೆಸಿದರು.
ನಗರದ ಪ್ರವಾಸಿ ವೃತ್ತದಿಂದ ಬಸ್‌ನಿಲ್ದಾಣ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ಕಚೇರಿ ಬಳಿ ಸಮಾವೇಶಗೊಂಡು ತಹಸೀಲ್ದಾರ್ ಅಮೃತ್‌ಆತ್ರೇಶ್ ಮೂಲಕ ರಾಜ್ಯಪಾಲರು ಹಾಗೂ ವಿಧಾನಸಭಾಧ್ಯಕ್ಷರಿಗೆ ಮನವಿ ರವಾನಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ನಾಗರತ್ನಮ್ಮ, ವಕೀಲ ವಿಜಯ್‌ಕುಮಾರ್, ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಮೈನಹಳ್ಳಿಅಂಜನಮೂರ್ತಿ, ರಾಜಣ್ಣ, ಡಿ.ಚಿಕ್ಕಣ್ಣ, ಮಂಜಮ್ಮ, ಮಾಜಿ ಸದಸ್ಯೆ ಹನುಮಂತಮ್ಮ, ಮುಖಂಡ ದೇಗನಹಳ್ಳಿ ನರಸಿಂಹಮೂರ್ತಿ, ಪಿ.ಗಂಗಾಧರ್ ಉಪಸ್ಥಿತರಿದರು.
ಕೂಡಲೇ ಸೂಕ್ತ ತನಿಖೆ ಮಾಡಿ: ಹಣ ಹಾಗೂ ಅಧಿಕಾರ ಬಲದಿಂದ ದಲಿತ ಹೆಣ್ಣು ಮಕ್ಕಳ ಬಗ್ಗೆ ಕೀಳಾಗಿ ಮಾತನಾಡಿದ್ದು ಮುನಿರತ್ನ ಅವರ ಸಂಸ್ಕೃತಿಯನ್ನು ಎತ್ತಿ ತೊರಿಸುತ್ತದೆ. ಅತ್ಯಾಚಾರ ಪ್ರಕರಣ, ಎಚ್‌ಐವಿ ಪ್ರಕರಣ ಸೇರಿ ಸಾಕಷ್ಟು ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳೆಕಿಗೆ ಬಂದಿದೆ. ಸೂಕ್ತ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಕೀಲ ತಾಳೇಕೆರೆಗಂಗರಾಜು ಒತ್ತಾಯಿಸಿದರು.
ಮುನಿರತ್ನ ಆಡಿರುವ ಮಾತುಗಳು, ಹೆಣ್ಣು ಮಕ್ಕಳ ಬಗ್ಗೆ ಬಳಸಿರುವ ಪದಗಳು ಇಡೀ ಮಾನುಕುಲ ತಲೆ ತಗ್ಗಿಸುವಂತಿದೆ. ಶಾಸಕ ಸ್ಥಾನದಲ್ಲಿದ್ದುಕೊಂಡು ನಡೆಸಿರುವ ಅಮಾನವೀಯ ವರ್ತನೆಗಳೆ ಅವರು ಶಾಸಕ ಸ್ಥಾನದಲ್ಲಿರಲು ಅನರ್ಹ ಎಂದು ಹೇಳುತ್ತವೆ.ಬಿನ್ನಮಂಗಲ ವೆಂಕಟೇಶ್ಕಾಂಗ್ರೆಸ್ ಎಸ್‌ಸಿ, ಎಸ್‌ಟಿ ಬ್ಲಾಕ್ ಅಧ್ಯಕ್ಷ