ಜಿಲ್ಲೆ

ಶಾಸಕ ಮುನಿರತ್ನ ವಿರುದ್ಧ ಕ್ರಮಕ್ಕೆ ಪಟ್ಟು

ನೆಲಮಂಗಲ: ಬಿಬಿಎಂಪಿ ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿರುವ ಮುನಿರತ್ನ ಅವರ ಶಾಸಕತ್ವ ರದ್ದುಗೊಳಿಸಿ, ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ಒಕ್ಕಲಿಗ ಸಂಘಟನೆಗಳು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದವು.
ನಗರದ ಕೆಂಪೇಗೌಡ ವೃತ್ತದ ಸಮೀಪ ಹತ್ತಾರು ತಾಲೂಕು ಒಕ್ಕಲಿಗ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ಬೆಳಗ್ಗೆ ಸಮಾವೇಶಗೊಂಡ ಸಾವಿರಾರು ಮಂದಿ ಪ್ರತಿಭಟನಾಕಾರರು, ಶಾಸಕ ಮುನಿರತ್ನ ವಿರುದ್ಧ ಘೋಷಣೆ ಕೂಗಿದರು. ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ರಸ್ತೆಯನ್ನು ಕೆಲಕಾಲ ಬಂದ್ ಮಾಡಿ, ಬಳಿಕ ಮುನಿರತ್ನ ಅವರ ಭಾವಚಿತ್ರವಿರುವ ಅಣಕು ಶವದಹಿಸಿ ಆಕ್ರೋಶ ಹೊರಹಾಕಿದರು. ನಗರದ ಕೆಂಪೇಗೌಡ ವೃತ್ತದಿಂದ ಸೊಂಡೇಕೊಪ್ಪ ವೃತ್ತ, ಬಸ್‌ನಿಲ್ದಾಣ ಮಾರ್ಗವಾಗಿ ಸುಮಾರು 3 ಕಿ.ಮೀ.ಕಾಲ್ನಡಿಗೆ ಮೂಲಕ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ತಾಲೂಕು ಕಚೇರಿ ಸಮೀಪ ಸಮಾವೇಶಗೊಂಡು ತಹಸೀಲ್ದಾರ್ ಅಮೃತ್‌ಆತ್ರೇಶ್ ಮೂಲಕ ರಾಜ್ಯಪಾಲರಿಗೆ ಮನವಿ ರವಾನಿಸಿದರು.


ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಬಿ.ಕೆ.ತಿಮ್ಮರಾಜು, ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ನಾರಾಯಣ್‌ಗೌಡ, ಸದಸ್ಯ ಬಿ.ಜಿ.ವಾಸು, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜು, ಬಿಎಂಟಿಸಿ ಮಾಜಿ ನಿರ್ದೇಶಕ ಮಿಲ್ಟ್ರಿ ಮೂರ್ತಿ, ಮುಖಂಡರಾದ ಎಚ್.ಜಿ.ರಾಜು, ಚನ್ನಪ್ಪ, ಮಧುಸೂಧನ್, ಸುಂದರೇಶ್, ಗುರುಪ್ರಕಾಶ್, ಪೆಮ್ಮನಹಳ್ಳಿದೇವರಾಜು, ಸಿ.ಎಂ.ಗೌಡ, ಲಕ್ಷ್ಮೀನಾರಾಯಣ್, ಹನುಮಂತರಾಜು, ಚಿಕ್ಕಹನುಮೇಗೌಡ, ವಕೀಲ ರಘುನಾಥ್, ಲಕ್ಷ್ಮೀಕಾಂತ್, ಬೂದಿಹಾಲ್‌ಗೋವಿಂದರಾಜು, ನಾರಾಯಣ್‌ಗೌಡ, ಸುನೀಲ್‌ಕುಮಾರ್, ಕಾಚನಹಳ್ಳಿ ಮನು, ಯಶ್ವಂತ್, ಹ್ಯಾಡಾಳ್‌ಕಿರಣ್ ಉಪಸ್ಥಿತರಿದ್ದರು.

ಸಮುದಾಯಕ್ಕೆ ನೋವು: ಶಾಸಕ ಮುನಿರತ್ನ ಲಂಚ ವಿಚಾರವಾಗಿ ಕೀಳುಮಟ್ಟದಲ್ಲಿ ಮಹಿಳೆಯನ್ನು ಅವಮಾನಿಸಿ ಮಾತನಾಡಿದ್ದು, ಸಾಕಷ್ಟು ಮಂದಿಗೆ ನೋವುಂಟು ಮಾಡಿದೆ. ಮುನಿರತ್ನ ವೋಟರ್‌ಐಡಿ, ಸರ್ಕಾರಿ ಆಸ್ತಿ ಕಬಳಿಕೆ ಸೇರಿ ಸಾಕಷ್ಟು ಭ್ರಷ್ಟಾಚಾರದಲ್ಲಿ ಸಿಲುಕಿರುವುದು ಸಾಬೀತಾಗಿದೆ. ಜತೆಗೆ ಗುತ್ತಿಗೆದಾರನ ಪತ್ನಿ, ತಾಯಿಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಲ್ಲದೆ ಒಕ್ಕಲಿಗ, ದಲಿತ ಸಮುದಾಯವನ್ನು ಅವಮಾನ ಮಾಡಿದ್ದು, ಕೂಡಲೇ ಶಾಸಕ ಸ್ಥಾನದಿಂದ ವಜಾಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮುನಿರತ್ನ ಮನೆ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಬಿಎಂಎಲ್ ಕಾಂತರಾಜು ಎಚ್ಚರಿಸಿದರು.

ಶಾಸಕ ಮುನಿರತ್ನ ಒಕ್ಕಲಿಗ, ದಲಿತ ಸಮುದಾಯವನ್ನು ಅವಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಸಮುದಾಯದ ಶ್ರೀಗಳು ಕರೆ ನೀಡಿದಲ್ಲಿ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುವುದು.ಎಂ.ಕೆ.ನಾಗರಾಜು ಒಕ್ಕಲಿಗ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ