ಬೀದರ್: ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಅವರ ಮನೆ ಹಾಗೂ ಅವರ ಪುತ್ರನ ಕಚೇರಿಯಲ್ಲಿ ಒಟ್ಟು ರೂ. 8 ಕೋಟಿಗೂ ಅಧಿಕ ಲಂಚದ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ವೃತ್ತದಿಂದ ಘೋಷಣೆ ಕೂಗುತ್ತ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು.
ಶಾಸಕರ ಮನೆಯಲ್ಲಿ ಲಂಚದ ಹಣ ಹಾಗೂ ಸಾಕಷ್ಟು ಚಿನ್ನ ದೊರೆತಿರುವುದು ಬಿಜೆಪಿ ಸರ್ಕಾರ ಯಾವ ಮಟ್ಟಕ್ಕೆ ಇಳಿದಿದೆ ಎನ್ನುವುದನ್ನು ತೋರಿಸಿದೆ. ಈ ಹಗರಣ ರೂ. 8 ಕೋಟಿಯದ್ದಷ್ಟೇ ಅಲ್ಲ; ರೂ. 800 ಕೋಟಿಯದ್ದಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಹಗರಣದಲ್ಲಿ ಶಾಮೀಲಾಗಿರುವುದು ಕಂಡು ಬರುತ್ತದೆ ಎಂದು ದೂರಿದರು.
ಇಂತಹ ಹಗರಣಗಳ ಮೂಲಕ ಲೆಕ್ಕವಿಲ್ಲದಷ್ಟು ಹಣ ದೋಚಿ ಮುಖ್ಯಮಂತ್ರಿಯವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ಕಪ್ಪು ಕಾಣಿಕೆ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಅವರನ್ನು ಕೂಡಲೇ ಬಂಧಿಸಬೇಕು. ನೂರಾರು ಹಗರಣಗಳನ್ನು ಮಾಡಿರುವ ಬಿಜೆಪಿ ಸರ್ಕಾರದ ಸಚಿವರು ಹಾಗೂ ಶಾಸಕರು ಭ್ರಷ್ಟಾಚಾರದ ಬಕಾಸುರರಾಗಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ನ್ಯಾಯ ಎತ್ತಿ ಹಿಡಿಯಲು ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಂದ ಲಂಚದ ಹಗರಣದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ, ಡಾ. ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಪುಂಡಲೀಕರಾವ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗೀತಾ ಚಿದ್ರಿ, ಪ್ರಚಾರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ದತ್ತಾತ್ರಿ ಮೂಲಗೆ, ಎಂ.ಎ. ಸಮಿ, ಕಾರ್ಯದರ್ಶಿ ಪರ್ವೇಜ್ ಕಮಲ್, ಮುಖಂಡರಾದ ಬಸವರಾಜ ಬುಳ್ಳಾ, ಧನರಾಜ ತಾಳಂಪಳ್ಳಿ, ಶಶಿಕಾಂತ ಪೊಲೀಸ್ ಪಾಟೀಲ, ನೀಲಕಂಠ ರಾಠೋಡ್, ಚಂದ್ರಶೇಖರ ಚನಶೆಟ್ಟಿ, ಸಂಜಯ್ ಜಾಗೀರದಾರ್, ಚಂದ್ರಕಾಂತ ಹಿಪ್ಪಳಗಾಂವ್, ಶಂಕರ ರೆಡ್ಡಿ ಚಿಟ್ಟಾ, ಮಹಮ್ಮದ್ ಯುಸೂಫ್, ಡಿ.ಕೆ. ಸಂಜುಕುಮಾರ, ಅಜಮತ್ ಪಟೇಲ್, ಜಾನ್ ವೆಸ್ಲಿ, ಗೋವರ್ಧನ್ ರಾಠೋಡ್, ಶಾಕೀರ್ ಖಾನ್, ಸಚಿನ್ ಮಲ್ಕಾಪುರ, ನಯೀಮ್ ಕಿರ್ಮಾನಿ, ಪ್ರಶಾಂತ ದೊಡ್ಡಿ, ಮೋಹನ್ ಕಾಳೇಕರ್ ಮತ್ತಿತರರು ಪಾಲ್ಗೊಂಡಿದ್ದರು.
ಸಂಕಲ್ಪ ಯಾತ್ರೆ ಯಾವ ಪುರುಷಾರ್ಥಕ್ಕೆ
ಬೀದರ್: ಬಿಜೆಪಿ ಶಾಸಕರ ಮನೆಯಲ್ಲೇ ಲಂಚದ ಹಣ ದೊರೆತಿರುವಾಗ, ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಡೆಸುತ್ತಿರುವುದು ಯಾವ ಪುರುಷಾರ್ಥಕ್ಕಾಗಿ ಎಂದು ಹುಮನಾಬಾದ್‍ನ ಕಾಂಗ್ರೆಸ್ ಶಾಸಕ ರಾಜಶೇಖರ ಪಾಟೀಲ ಪ್ರಶ್ನಿಸಿದರು. ನಗರದಲ್ಲಿ ಕಾಂಗ್ರೆಸ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಲೋಕಾಯುಕ್ತ ದಾಳಿ ವೇಳೆ ಬಿಜೆಪಿ ಶಾಸಕರ ಮನೆಯಲ್ಲಿ ಕೋಟ್ಯಂತರ ರೂಪಾಯಿ ಲಂಚದ ಹಣ ಪತ್ತೆಯಾಗಿರುವುದು ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ಬಿಂಬಿಸಿದೆ ಎಂದು ಟೀಕಿಸಿದರು. ಜಿಲ್ಲೆಯಲ್ಲಿ ಸಂಸದರ ನಿಧಿಯಲ್ಲಿ ಕುರ್ಚಿ ಹಾಕಿಸಿದ್ದೇ ಕೇಂದ್ರ ಸಚಿವ ಭಗವಂತ ಖೂಬಾ ಅವರ ಸಾಧನೆಯಾಗಿದೆ ಎಂದು ಟೀಕಿಸಿದರು. ಸ್ವಾತಂತ್ರ್ಯದ ನಂತರ ಬೀದರ್‍ಗೆ ಮೊದಲ ಬಾರಿಗೆ ಕೇಂದ್ರ ಸಚಿವ ಸ್ಥಾನ ದೊರೆತಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಮಾಡುವ ಬದಲು, ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಮುಂದೆ ಅವರು ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.