ಹುಣಸೂರು ನಗರದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಪಂಚಾಯಿತ್ ರಾಜ್ ಸಂಘಟನೆ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಶಾಸಕ ಎಚ್.ಪಿ.ಮಂಜುನಾಥ್ ಇತರರು ಭಾಗವಹಿಸಿದ್ದರು. 
ಜಿಲ್ಲೆ

ಶಾಸಕ ಮಂಜುನಾಥ್‌ರನ್ನು ಮತ್ತೊಮ್ಮೆ ಆಯ್ಕೆ ಮಾಡೋಣ

ಹುಣಸೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಾಸಕ ಎಚ್.ಪಿ.ಮಂಜುನಾಥ್ ಅವರನ್ನು ಹುಣಸೂರು ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಆಯ್ಕೆ ಮಾಡುವ ಮೂಲಕ ಮಂತ್ರಿಯನ್ನಾಗಿಸೋಣ ಎಂದು ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಕರೆ ನೀಡಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ರಾಜೀವ್ ಗಾಂಧಿ ಪಂಚಾಯಿತ್ ರಾಜ್ ಸಂಘಟನೆಗಳ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜಕೀಯ ಧರ್ಮಯುದ್ಧದಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪುಟಿದೇಳಲಿದೆ. ಹುಣಸೂರಿನಲ್ಲಿ ಜನಪರ ಕಾಳಜಿಯಿಂದ ಕಳೆದ 15 ವರ್ಷಗಳಿಂದ ಶಾಸಕರಾಗಿರುವ ಎಚ್.ಪಿ.ಮಂಜುನಾಥ್ ಅವರನ್ನು ಮತ್ತೆ ವಿಜಯಶಾಲಿಯನ್ನಾಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪಕ್ಷದ ನಿಯಮಗಳ ಪ್ರಕಾರ 4ನೇ ಬಾರಿಗೆ ಗೆದ್ದವರು ಸಚಿವರಾಗಲಿದ್ದಾರೆ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ಈ ಗುರಿಯೊಂದಿಗೆ ಮುಂದಿನ ಚುನಾವಣೆಯಲ್ಲಿ ದುಡಿಬೇಕು ಎಂದು ಸಲಹೆ ನೀಡಿದರು.

ಸ್ಥಳೀಯ ಸಂಸ್ಥೆಗಳಿಗೆ ರಾಜಕೀಯ ಅಧಿಕಾರ ನೀಡಿದವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ. ಅವರ ಹೆಸರಿನಲ್ಲೇ ಮತ್ತೆ ರಾಜಕೀಯವಾಗಿ ಕಾರ್ಯಕರ್ತರನ್ನು ಮುನ್ನಲೆಗೆ ತರಲು ಈ ಸಂಘಟನೆಯು ಪ್ರಮುಖ ಪಾತ್ರ ವಹಿಸಲಿದೆ. ಪಕ್ಷ ಸಂಘಟನೆ ಮತ್ತು ಅಧಿಕಾರ ಪಡೆಯುವುದೇ ನಮ್ಮೆಲ್ಲರ ಮುಂದಿನ ಗುರಿ ಎಂದರು.

ಶಾಸಕ ಎಚ್.ಪಿ. ಮಂಜುನಾಥ್ ಮಾತನಾಡಿ, ಎರಡೂವರೆ ವರ್ಷಗಳ ಹಿಂದೆ ನಡೆದ ಉಪಚುನಾವಣೆಯಲ್ಲಿ 17 ಸ್ಥಾನಗಳ ಪೈಕಿ ನಾನೊಬ್ಬನೇ ಗೆದ್ದಿದ್ದು. ಆದರೆ, ನಂತರ ರಾಜ್ಯ ಸರ್ಕಾರದ ತಾರತಮ್ಯ ನೀತಿಯಿಂದಾಗಿ ಅನುದಾನ ಕೊರತೆಯು ತಾಲೂಕಿನ ಅಭಿವೃದ್ಧಿಗೆ ಬಾಧಕವಾಗಿ ಪರಿಣಮಿಸಿದೆ. ರಾಜೀವ್ ಗಾಂಧಿ ಪಂಚಾಯಿತ್ ಸಂಘಟನೆಯ ಕಾರ್ಯಕರ್ತರು ಗ್ರಾಮೀಣ ಭಾಗದಲ್ಲಿ ಮನೆಮನೆಗೆ ತೆರಳಿ ಸಿದ್ದರಾಮಯ್ಯ ಸರ್ಕಾರದ ವಿವಿಧ ಭಾಗ್ಯ ಯೋಜನೆಗಳ ಕುರಿತು ಜನರಿಗೆ ಮನದಟ್ಟು ಮಾಡಿಸಬೇಕು. ಜತೆಗೆ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ತೋರಿಸಬೇಕು ಎಂದು ಸೂಚಿಸಿದರು.

ನಗರಸಭೆ ಅಧ್ಯಕ್ಷೆ ಗೀತಾ ನಿಂಗರಾಜು, ಪಂಚಾಯತ್ ರಾಜ್ ಸಂಘಟನೆ ಜಿಲ್ಲಾಧ್ಯಕ್ಷ ಕೋಟೆ ಮಲ್ಲೇಶ್, ಡಿಸಿಸಿ ಉಪಾಧ್ಯಕ್ಷ ಎಡತಲೆ ಮಂಜಣ್ಣ, ಸಂಘಟನೆಯ ತಾಲೂಕು ಅಧ್ಯಕ್ಷ ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿಳಿಕೆರೆ ನಾರಾಯಣ್, ಕಲ್ಕುಣಿಕೆ ರಮೇಶ್ , ದೇವರಾಜ್, ಮುಖಂಡರಾದ ಬಸವರಾಜು, ಕೆಂಪರಾಜು, ಉದ್ಯಮಿ ಎಚ್.ಪಿ.ಅಮರನಾಥ್, ನಾಡಪ್ಪನಹಳ್ಳಿ ರಾಜು ಶಿವರಾಜೇಗೌಡ, ರವಿಪ್ರಸನ್ನ, ಅಜ್ಗರ್ ಪಾಷಾ, ರಾಘು, ಬಸವರಾಜಪ್ಪ, ಕುಮಾರಸ್ವಾಮಿ, ರಾಜೇಗೌಡ ಹಾಗೂ ಕಾರ್ಯಕರ್ತರು ಹಾಜರಿದ್ದರು.