ವಿಜಯಪುರ: ಕಳೆದ ಐದಾರು ತಿಂಗಳಿಂದ ಪಕ್ಷ, ಸಮಾಜ ಹಾಗೂ ವೈಯಕ್ತಿಕವಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಬಿಜೆಪಿ ಮುಖಂಡ ಭೀಮಾಶಂಕರ ಹದನೂರ ಆರೋಪಿಸಿದರು.
ಯತ್ನಾಳರಿಗೆ ಸಮಾಜದ ಬಗ್ಗೆ ಅಭಿಮಾನ ಹುಟ್ಟಿದ್ದು ಸಚಿವ ಸ್ಥಾನ ಕೈತಪ್ಪಿದಾಗ. ಹಿಂದೆ ಇವರೇ ಕೂಡಲಸಂಗಮ ಸ್ವಾಮೀಜಿ ವಿರುದ್ದ ಮಾತನಾಡಿದವರು. ಇದೀಗ ಅಧಿಕಾರಕ್ಕಾಗಿ ಸಮಾಜದ ಕಾಳಜಿ ಬಂದಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಆಪಾದಿಸಿದರು.
ಉಂಡ ತಾಟಿನಲ್ಲಿ ಹೇಸಿಗೆ ಮಾಡುವುದು ಯತ್ನಾಳರ ಚಟ ಎಂದಿರುವ ಅವರು ಉಪಕಾರ ಮಾಡಿದ ಯಾರನ್ನೂ ಅವರು ಸ್ಮರಿಸಲ್ಲ ಎಂದರು.
ಅಟಲ ಬಿಹಾರಿ ವಾಜಪೇಯಿ, ಆಡ್ವಾನಿ ಹೆಸರು ಹೇಳಿಕೊಂಡು ಪಕ್ಷ ನಿಷ್ಠೆ ಬಗ್ಗೆ ಮಾತನಾಡುವ ಇದೇ ಯತ್ನಾಳ ಫೋಕ್ರಾನ್
ಅಣು ಒಪ್ಪಂದದ ಸಮಯದಲ್ಲಿ ವಿರುದ್ದ ಮತ ಚಲಾಯಿಸಿ ಕಾಂಗ್ರೆಸ್ ಗೆ ಹೋಗುವವರಿದ್ದರು.
ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಪರ ಇದ್ದ ಯತ್ನಾಳ ಇದೀಗ ಅದೇ ಯಡಿಯೂರಪ್ಪ ವಿರುದ್ದ ತಿರುಗಿ ಬಿದ್ದಿದ್ದಾರೆ. ಕೆಲ ತಿಂಗಳ ಹಿಂದೆ ಪ್ರಲ್ಹಾದ ಜೋಶಿ, ಜಗದೀಶ ಶೆಟ್ಟರ್ ಗೆ ಎಲ್ಲರಿಗೂ ಟೀಕಿಸುತ್ತಿದ್ದರು. ಈಗ ಅವರ ಪರ ಮಾತನಾಡುತ್ತಾರೆ. ಹೀಗಾಗಿ ಇವರಿಗೆ ಸ್ಪಷ್ಟತೆ ಇಲ್ಲ. ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ.
ನಗರ ಸಂಪೂರ್ಣ ಹದಗೆಟ್ಟಿದೆ. ಎರಡ್ಮೂರು ರಸ್ತೆ ಮಾಡಿದರೆ ಅದೇ ಅಭಿವೃದ್ಧಿ ಅಲ್ಲ. ಇಡೀ ನಗರದ ರಸ್ತೆಗಳು ಹದಗೆಟ್ಟಿವೆ. ರಾಜ್ಯದಲ್ಲಿ ನಗರದ ಹೆಸರು ಕೆಟ್ಟಿದೆ. ಅತೀ ಹೆಚ್ಚು ಭ್ರಷ್ಟಾಚಾರ ನಡೆದಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದರು.