ಹಾಸನ : ಶಾಸಕ ಪ್ರೀತಂಗೌಡ ಅವರ ನೇತೃತ್ವದಲ್ಲಿ ಶುಕ್ರವಾರ ನಡೆದ ನಾಮಪತ್ರ ಸಲ್ಲಿಕೆ ಪೂರ್ವ ಬೃಹತ್ ರ‌್ಯಾಲಿಗೆ ಜನಸಾಗರವೇ ಹರಿದು ಬಂದಿತು. ನಗರದೆಲ್ಲೆಡೆ ಬಿಜೆಪಿಯ ಬಾವುಟಗಳು ರಾರಾಜಿಸುವ ಮೂಲಕ ಇಡೀ ನಗರ ಕೇಸರಿಮಯವಾಗಿ ಕಂಗೊಳಿಸುತ್ತಿತ್ತು.
ಶುಕ್ರವಾರ ಬೆಳಗ್ಗೆ 11ರಿಂದ ಜಿಲ್ಲಾ ಕ್ರೀಡಾಂಗಣದ ಮುಂಭಾಗದಿಂದ ಆರಂಭವಾದ ಬೃಹತ್ ಮೆರವಣಿಗೆಯಲ್ಲಿ ಸಾವಿರಾರು ಜನರು ಆಗಮಿಸುವ ಮೂಲಕ ರ‌್ಯಾಲಿಗೆ ಮೆರಗು ತಂದರು. ಸಾಲಗಾಮೆ ರಸ್ತೆ ಮೂಲಕ ಸಾವಿರಾರು ಜನರು ಕೇಸರಿ ಬಾವುಟ ಹಿಡಿದು ಶಾಸಕರು ಮತ್ತು ಪಕ್ಷಕ್ಕೆ ಜೈಕಾರ ಹಾಕುತ್ತಾ ಹೆಜ್ಜೆ ಹಾಕಿದರು. ಈ ಸಂದರ್ಭದಲ್ಲಿ ಡಿಜೆಗೆ ಯುವಕ- ಯುವತಿಯರು ಕುಣಿದು ಕುಪ್ಪಳಿಸಿದರು.
ಮೆರವಣಿಗೆಯು ಸಹ್ಯಾದ್ರಿ ವೃತ್ತದ ಮೂಲಕ ಮಹಾವೀರ ವೃತ್ತ, ಹೇಮಾವತಿ ಪ್ರತಿಮೆ ಮುಂಭಾಗ ಆಗಮಿಸಿ ಅಲ್ಲಿಂದ ಎನ್.ಆರ್.ಸರ್ಕಲ್‌ಗೆ ಆಗಮಿಸಿದ ರ‌್ಯಾಲಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಇರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರ‌್ಯಾಲಿ ಅಂತ್ಯಗೊಳಿಸಲಾಯಿತು.
2ನೇ ಬಾರಿಗೆ ಸ್ಪರ್ಧೆಗಿಳಿಯುತ್ತಿರುವ ಪ್ರೀತಂಗೌಡ ಅವರು ತಮ್ಮ ಚಾಣಾಕ್ಷತನದಿಂದಲೇ ಇಂದಿನ ಮೆರವಣಿಗೆಯನ್ನು ಅಚ್ಚುಕಟ್ಟಾಗಿ ಸಂಘಟಿಸಿದ್ದಾರೆ ಎಂಬ ಮಾತುಗಳು ನಗರದಲ್ಲಿ ಕೇಳಿಬರುತ್ತಿತ್ತು. ಹಾಸನದ ಇತಿಹಾಸದಲ್ಲಿ ಇಷ್ಟೊಂದು ಜನರನ್ನು ಸೇರಿಸಿರುವ ನಿದರ್ಶನಗಳಿಲ್ಲ. ಆದರೆ ಪ್ರೀತಂಗೌಡ ಅವರು ತಮ್ಮ ಎದುರಾಳಿಗಳಿಗೆ ಈ ರ‌್ಯಾಲಿಯ ಮೂಲಕ ಉತ್ತರ ನೀಡಿದ್ದಾರೆ ಎಂಬ ಮಾತುಗಳು ಕೇಳಿಬಂದವು.
ಜಿಲ್ಲಾ ಕ್ರೀಡಾಂಗಣ ಮುಂಭಾಗದಿಂದ ಆರಂಭವಾದ ಮೆರವಣಿಗೆ ಎನ್.ಆರ್.ವೃತ್ತದವರೆಗೂ ಕೂಡ ಶಾಸಕ ಪ್ರೀತಂಗೌಡ ಮತ್ತು ಪಕ್ಷದ ಮುಖಂಡರು ತೆರೆದ ವಾಹನದಲ್ಲಿ ಬಂದಿದ್ದ ಮತದಾರರು ಮತ್ತು ಕಾರ‌್ಯಕರ್ತರು ಹಾಗೂ ಜನರಿಗೆ ಕೈ ಮುಗಿದು ಕೃತಜ್ಞತೆ ಸಲ್ಲಿಸುತ್ತಿದ್ದರು. ಮೆರವಣಿಗೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮತ್ತು ಬೇಲೂರಿನ ಬಿಜೆಪಿ ಅಭ್ಯರ್ಥಿ ಹುಲ್ಲಳ್ಳಿ ಸುರೇಶ್, ಆಲೂರು-ಸಕಲೇಶಪುರದ ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜು, ಬಿಜೆಪಿ ಪಕ್ಷದ ಮುಖಂಡರಾದ ನವಿಲೆ ಅಣ್ಣಪ್ಪ, ನಗರಸಭೆ ಅಧ್ಯಕ್ಷ ಆರ್. ಮೋಹನ್‌ಕುಮಾರ್, ಹುಡಾ ಅಧ್ಯಕ್ಷ ಲಲಾಟ್‌ಮೂರ್ತಿ, ನಗರಸಭೆ ಸದಸ್ಯ ಎಚ್.ಎಂ.ಸುರೇಶ್‌ಕುಮಾರ್, ಶೋಭನ್‌ಬಾಬು, ಯಶವಂತ್, ವೇಣುಗೋಪಾಲ್, ರಂಗನಾಥ್ ಇನ್ನಿತರರು ಇದ್ದರು.
ನನ್ನ ವಿರುದ್ಧ ರಾಜಕಾರಣ ಮಾಡುವವರು ಇನ್ನೂ ಎದ್ದಿಲ್ಲ: ಪ್ರೀತಂ ಗೌಡ :
ಹಾಸನ ರಾಜಕಾರಣದ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಜನ ಸೇರಿರುವ ಉದಾಹರಣೆಗಳಿಲ್ಲ. ನನ್ನ ವಿರುದ್ಧ ರಾಜಕಾರಣ ಮಾಡುವವರು ಇನ್ನೂ ಎದ್ದೇ ಇಲ್ಲ ಎಂದು ಪರೋಕ್ಷವಾಗಿ ಜೆಡಿಎಸ್ ವಿರುದ್ಧ ಶಾಸಕ ಪ್ರೀತಂಗೌಡ ವಾಗ್ದಾಳಿ ನಡೆಸಿದರು.
ಮೆರವಣಿಗೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ರಾಜಕೀಯ ವಿರೋಧಿಗಳು ಯಾರೆಂಬುದು ಇನ್ನೂ ತಿಳಿದಿಲ್ಲ. ಅವರು ಯಾರೂ ಕೂಡ ಚುನಾವಣೆಗೆ ತಯಾರಿಯನ್ನೂ ಮಾಡಿಕೊಂಡಿಲ್ಲ. ಆದರೆ ಕ್ಷೇತ್ರದ ಜನರು ನನ್ನ ಅಭಿವೃದ್ಧಿ ಕೆಲಸವನ್ನು ಮೆಚ್ಚಿ ಇಂದಿನ ಮೆರವಣಿಗೆಗೆ ಆಗಮಿಸಿದ್ದಾರೆ ಎಂದು ಹೇಳಿದರು.
ನನ್ನ ರಾಜಕೀಯ ವಿರೋಧಿ ಜನತಾದಳದವರು. ಅವರು ಈಗ ಟಿಕೆಟ್ ಪಡೆಯುವ ವಿಚಾರದಲ್ಲೇ ಅವರವರೇ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ನಮ್ಮ ಪಕ್ಷದ ಕಾರ‌್ಯಕರ್ತರು ಮತ್ತು ಮುಖಂಡರು ಈ ಬಾರಿ ಕಮಲದ ಗುರುತಿಗೆ 1 ಲಕ್ಷ ಮತಗಳನ್ನು ಹಾಕಿ ನನ್ನನ್ನು ಮತ್ತೊಮ್ಮೆ ವಿಧಾನಸೌಧಕ್ಕೆ ಕಳುಹಿಸಲು ನಿರ್ಧರಿಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇವತ್ತಿನ ರ‌್ಯಾಲಿಯನ್ನು ನೋಡಿ ಹೇಮಾವತಿ ನಗರದವರು ಮತ್ತು ಹೊಳೆನರಸೀಪುರದವರು ನನಗೆ ಟಿಕೆಟ್ ಕೊಡದಿದ್ದರೆ ಸಾಕು ಎಂಬ ತೀರ್ಮಾನಕ್ಕೆ ಬರುತ್ತಾರೆ. ಆದರೆ ಅವರಿಗೆ ಟಿಕೆಟ್ ತೆಗೆದುಕೊಳ್ಳುವ ಶಕ್ತಿಯನ್ನು ಆ ಭಗವಂತ ಕೊಡಲಿ ಎಂದು ರೇವಣ್ಣ ಮತ್ತು ದಿ.ಪ್ರಕಾಶ್ ಅವರ ಕುಟುಂಬದ ಹೆಸರು ಹೇಳದೆ ಟಾಂಗ್ ನೀಡಿದರು.
ಹಾಸನ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗುತ್ತೇನೆ ಎಂದು ಒಬ್ಬರು ಬಂದಿದ್ದಾರೆ. ಅವರಿಗೆ ಠೇವಣಿಯೇ ಸಿಗುವುದಿಲ್ಲ ಎಂದು ಕಾಂಗ್ರೆಸ್‌ನವರನ್ನೂ ಕೂಡ ಕಾಲೆಳೆದರು. ಕಳೆದ ಬಾರಿ ಸೋತ ಕಾಂಗ್ರೆಸ್ ಅಭ್ಯರ್ಥಿ ಯಾವ ಪಕ್ಷದಲ್ಲಿರುತ್ತಾರೋ ಗೊತ್ತಿಲ್ಲ ಎಂದು ಹೇಳುವ ಮೂಲಕ ಎಚ್.ಕೆ. ಮಹೇಶ್ ಅವರನ್ನೂ ಕೂಡ ಟೀಕಿಸಿದರು.
ಇಡೀ ಜಿಲ್ಲೆ ಒಂದು ಕುಟುಂಬದ ಹಿಡಿತದಲ್ಲಿ ನಲುಗುತ್ತಿದೆ. ಇದನ್ನು ತಪ್ಪಿಸಲು ಜನರು ಬಿಜೆಪಿಗೆ ಮತ ಹಾಕುತ್ತಿದ್ದಾರೆ. ಕುಟುಂಬದ ಹಿಡಿತವನ್ನು ತಪ್ಪಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ತರಲು ಜನರು ಮುಂದಾಗಬೇಕು. ಈ ನಿಟ್ಟಿನಲ್ಲಿ ಈ ಬಾರಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಅದರಂತೆ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.