ಹಾಸನ: ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಯಾರಾಗುತ್ತಾರೆ ಎಂಬುದು ಪ್ರೀತಂಗೌಡರಿಗೆ ಬೇಡದ ವಿಷಯ. ಅವರು ತಮ್ಮ ಕ್ಷೇತ್ರದ ಅಭಿವೃದ್ಧಿ ಮತ್ತು ಪಕ್ಷದ ವಿಷಯವನ್ನು ನೋಡಿಕೊಳ್ಳಲಿ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಭವಾನಿ ರೇವಣ್ಣ ತಿರುಗೇಟು ನೀಡಿದರು.
ನಗರದ ರಿಂಗ್ ರಸ್ತೆ ಬಳಿ ಇರುವ ಚಾಮುಂಡೇಶ್ವರಿ ದೇಗುಲಕ್ಕೆ ಸೋಮವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಪದೇಪದೆ ನಮ್ಮ ಕುಟುಂಬದವರನ್ನೇ ಚುನಾವಣೆಗೆ ನಿಲ್ಲಿ ಎಂಬುದಾಗಿ ಆಹ್ವಾನಿಸಲು ಅವರ‌್ಯಾರು ಎಂದು ಕಿಡಿಕಾರಿದರು.
ಯಾರು ಅಭ್ಯರ್ಥಿ ಆದರೂ ಸ್ಪರ್ಧೆ ಇದ್ದೇ ಇರುತ್ತದೆ. ದೇವೇಗೌಡರ ಕುಟುಂಬಕ್ಕೆ ಹಾಸನ ಏನು ಹೊಸದಲ್ಲ. ನಾವು ನಿನ್ನೆ, ಮೊನ್ನೆ ಹಾಸನ ನೋಡುತ್ತಿಲ್ಲ. ಶಾಸಕರು ಅವರ ಕೆಲಸ ಏನಿದೆ ಅದನ್ನು ನೋಡಿಕೊಳ್ಳಲಿ ಎಂದು ಟಾಂಗ್ ನೀಡಿದರು.
ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಯಾರಾಗಬೇಕು ಎಂಬುದು ಇನ್ನೂ ನಿರ್ಧಾರ ಆಗಿಲ್ಲ. ಕಾರ್ಯಕರ್ತರು ಮತ್ತು ಪಕ್ಷದ ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಯಾರೇ ಅಭ್ಯರ್ಥಿ ಆದರು ಎಲ್ಲರು ಒಗ್ಗಟ್ಟಿನಿಂದ ಪಕ್ಷದ ಗೆಲುವಿಗೆ ಶ್ರಮಿಸುತ್ತೇವೆ ಎಂದು ನುಡಿದರು.
ಪಕ್ಷದ ಸ್ಥಳೀಯ ಮಹಿಳಾ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಆಗಮಿಸಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದೇನೆ. ನವರಾತ್ರಿ ಪ್ರಯುಕ್ತ ಈ ಪೂಜೆ ಸಲ್ಲಿಸಲಾಗಿದೆ. ಇದಕ್ಕೆ ರಾಜಕೀಯ ಬಣ್ಣ ಹಚ್ಚುವುದು ಬೇಡ ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್‌ನ ಮಹಿಳಾ ಕಾರ್ಯಕರ್ತೆ ಪವಿತ್ರ ಮಾತನಾಡಿ, ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗೆ ಜೆಡಿಎಸ್‌ನಿಂದ ಮಹಿಳಾ ಅಭ್ಯರ್ಥಿ ಸ್ಪರ್ಧೆ ಮಾಡಿಲ್ಲ. ಆದ್ದರಿಂದ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಿದರೆ ಮಹಿಳೆಯರಿಗೆ ಪ್ರಾಶಸ್ತ್ಯ ನೀಡಿದಂತೆ ಆಗುತ್ತದೆ ಎಂದು ಹೇಳಿದರು.
ಪಕ್ಷದ ಹೈಕಮಾಂಡ್ ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್ ಅವರಿಗೆ ಟಿಕೆಟ್ ನೀಡಿದರೂ ನಮ್ಮದೇನು ಅಡ್ಡಿ ಇಲ್ಲ, ಪಕ್ಷದ ಅಭ್ಯರ್ಥಿ ಗೆಲುವಿಗೆ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ ಮತ್ತು ಕಾರ್ಯಕರ್ತರು ಇದ್ದರು.