ವಿರಾಜಪೇಟೆ: ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಕೊಡವ ಜನಾಂಗದ ಏಕೈಕ ಪ್ರತಿನಿಧಿ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು. ಒಂದು ವೇಳೆ ನೀಡದಿದ್ದರೆ ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲು ಗುರುವಾರ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಆಯೋಜಿಸಿದ್ದ ಜಿಲ್ಲೆಯ ವಿವಿಧ ಕೊಡವ ಸಮಾಜ ಮತ್ತು ಕೊಡವ ಸಂಘಟನೆಗಳ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
ಪಟ್ಟಣದಲ್ಲಿ ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ವಿವಿಧ ಕೊಡವ ಸಮಾಜಗಳ ಪ್ರತಿನಿಧಿಗಳು ಹಾಗೂ ವಿವಿಧ ಕೊಡವ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಶಾಸಕ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಒಗ್ಗಟ್ಟಿನ ಹೋರಾಟ ನಡೆಸಲು ತೀರ್ಮಾನಿಸಿ ಸದ್ಯದಲ್ಲಿಯೇ ಮುಖ್ಯಮಂತ್ರಿ ಮತ್ತು ವರಿಷ್ಠರ ಬಳಿ ನಿಯೋಗ ತೆರಳಲು ನಿರ್ಧರಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಪರದಂಡ ಸುಬ್ರಮಣಿ ಕಾವೇರಪ್ಪ, ಸುದೀರ್ಘ ಅವಧಿಯ ನಂತರ ಕೊಡವ ಜನಾಂಗಕ್ಕೆ ಒಬ್ಬರು ಉತ್ತಮ ಜನಪ್ರತಿನಿಧಿ ಸಿಕ್ಕಿದ್ದಾರೆ. ಜನಾಂಗ ಹಾಗೂ ಜಿಲ್ಲೆಯ ಅಭಿವೃದ್ಧಿ ಹಿತದೃಷ್ಟಿಯಿಂದ ಎ.ಎಸ್. ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು. ಇದರಲ್ಲಿ ಯಾವುದೇ ರಾಜಕೀಯ ಲೇಪ ಹಾಕದೆ ಪಕ್ಷಾತೀತವಾಗಿ ಎಲ್ಲರೂ ಒಂದಾಗಬೇಕಿದೆ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ ಮಾತನಾಡಿ, ಕೊಡಗಿನ ಗಂಭೀರ ಸಮಸ್ಯೆಗಳನ್ನು ನೀಗಿಸಿ ಮುನ್ನಡೆಯಲು ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ದೊರೆಯಬೇಕಿದೆ ಎಂದರು.
ಕೊಡವ ಸಮಾಜಗಳ ಒಕ್ಕೂಟದ ಕಾರ್ಯದರ್ಶಿ ವಾಟೇರಿರ ಪೂವಯ್ಯ ಮಾತನಾಡಿ, ಜಿಲ್ಲೆಗೆ ನಮ್ಮದೆ ಸಚಿವರು ಹಾಗೂ ಉಸ್ತುವಾರಿ ಇದ್ದರೆ ಆಡಳಿತ ಸುಗಮವಾಗಿ ಸಾಗುತ್ತದೆ. ಆದ್ದರಿಂದ ಅಖಿಲ ಕೊಡವ ಸಮಾಜ ನೇತೃತ್ವದಲ್ಲಿ ಸಿಎಂ ಬಳಿ ನಿಯೋಗ ತೆರಳಿ ಬೇಡಿಕೆ ಸಲ್ಲಿಸೋಣ ಎಂದರು.
ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಮಾತನಾಡಿ, ನಾವು ಪಕ್ಷಾತೀತವಾಗಿ ಸಚಿವ ಸ್ಥಾನಕ್ಕೆ ಹೋರಾಟ ಮಾಡಬೇಕಿದೆ ಎಂದರು.
ಅಖಿಲ ಕೊಡವ ಸಮಾಜದ ಉಪಾಧ್ಯಕ್ಷ ಅಜ್ಜಿಕುಟ್ಟಿರ ಸುಬ್ರಮಣಿ ಮಾದಯ್ಯ, ಖಜಾಂಚಿ ಮಂಡೇಪಂಡ ಸುಗುಣ ಮುತ್ತಣ್ಣ ಮತ್ತು ಕಾರ್ಯದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ, ಜಬ್ಬೂಮಿ ಸಂಘಟನೆಯ ಸಂಚಾಲಕ ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ, ವಿರಾಜಪೇಟೆ ಕೊಡವ ಸಮಾಜದ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್, ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಮಾತನಾಡಿದರು.
ಪೊಮ್ಮಕ್ಕಡ ಪರಿಷತ್‌ನ ಮೂವೇರ ರೇಖಾ ಪ್ರಕಾಶ್, ಪೊನ್ನಂಪೇಟೆ ಕೊಡವ ಸಮಾಜದ ಗೌರವ ಕಾರ್ಯದರ್ಶಿ ಕೊಟೇರ ಕಿಶನ್ ಉತ್ತಪ್ಪ, ಕುಶಾಲನಗರ ಕೊಡವ ಸಮಾಜ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ, ವಿರಾಜಪೇಟೆ ಕೊಡವ ಸಮಾಜ ಅಧ್ಯಕ್ಷ ಕುಂಬೇರ ಮನು ಕುಮಾರ್, ಯುಕೋ ಸಂಘಟನೆ ಸಂಚಾಲಕ ಕೊಕ್ಕಲೇಮಾಡ ಮಂಜು ಚಿಣ್ಣಪ್ಪ, ಕೊಡವ ರೈಡರ್ಸ್ ಕ್ಲಬ್ ಸಂಚಾಲಕ ಅಜ್ಜಿಕುಟ್ಟಿರ ಸುಬ್ಬಯ್ಯ ಮತ್ತಿತರರು ಇದ್ದರು.