oplus_0 
ಜಿಲ್ಲೆ

ಶಾಸಕ ಪುಟ್ಟರಂಗಶೆಟ್ಟಿಯಿಂದ ಪರಿಹಾರ ವಿತರಣೆ

ಚಾಮರಾಜನಗರ: ತಾಲೂಕಿನ ಮಲ್ಲೇದೇವನಹಳ್ಳಿ ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ರೈತರಾದ ನಾಗೇಂದ್ರ, ಮಲ್ಲೇಶ್ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಹಿನ್ನೆಲೆಯಲ್ಲಿ ಅಯ್ಯನಪುರ ಗ್ರಾಮಕ್ಕೆ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಸೆಸ್ಕ್ ಎಂಜಿನಿಯರ್ ಗಳೊಂದಿಗೆ ತೆರಳಿ, ಕುಟುಂಬವರ್ಗದವರಿಗೆ ಸಾಂತ್ವನ ಹೇಳಿ ಶುಕ್ರವಾರ ವೈಯಕ್ತಿಕ ಪರಿಹಾರ ವಿತರಿಸಿದರು.

ಇದೇವೇಳೆ ಮೃತರ ಕುಟುಂಬದವರು ಶಾಸಕರ ಬಳಿ ತಮ್ಮ ಅಳಲನ್ನು ತೋಡಿಕೊಂಡರು. ಮೃತ ನಾಗೇಂದ್ರ ಅವರ ಪುತ್ರ ಡಿಪ್ಲೋಮಾ ಪದವೀಧರರಾಗಿದ್ದು, ಸೆಸ್ಕ್ ನಲ್ಲಿ ಸೂಕ್ತ ಉದ್ಯೋಗ ಒದಗಿಸಬೇಕು ಕುಟುಂಬದವರು ಮನವಿ ಮಾಡಿದರು. ಮಲ್ಲೇಶ್ ಅವರಿಗೆ ಚಿಕ್ಕಮಕ್ಕಳಿದ್ದು, ಅವರ ಕುಟುಂಬಕ್ಕೆ ಸೆಸ್ಕ್ ನಿಂದ ಹೆಚ್ಚಿನ ನೆರವು ಕೊಡಿಸಬೇಕು ಎಂದು ಕುಟುಂಬದವರು ಆಗ್ರಹಿಸಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಪ್ರತಿಕ್ರಿಯಿಸಿ, ಸೆಸ್ಕ್ ಮೇಲಾಧಿಕಾರಿಗಳ ಜತೆ ಚರ್ಚಿಸಿ, ಉದ್ಯೋಗ ಕೊಡಿಸುವ ಭರವಸೆ ನೀಡಿದರು. ಗುರುವಾರ ಸೆಸ್ಕ್ ವತಿಯಿಂದ ಮೃತರ ಕುಟುಂಬಗಳಿಗೆ ತಲಾ 5ಲಕ್ಷ ರೂ.ಗಳ ಚೆಕ್ ವಿತರಿಸಲಾಗಿದೆ. ಸೆಸ್ಕ್ ಮೇಲಧಿಕಾರಿಗಳ ಜತೆ ಚರ್ಚಿಸಿ, ಉದ್ಯೋಗ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು. ಮೃತರ ಕುಟುಂಬದವರು ಯಾವುದೇ ಸಮಯದಲ್ಲೂ ಧೈರ್ಯ ಕಳೆದುಕೊಳ್ಳಬಾರದು ಎಂದು ಸಾಂತ್ವನ ಹೇಳಿದರು.

ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಗಿರಿಜಾ ಮೃತರ ಪತ್ನಿಯರಿಗೆ ವಿಧವಾವೇತನ ಮಂಜೂರಾತಿಪತ್ರ ವಿತರಿಸಿದರು.

ಸೆಸ್ಕ್ ಇಇ ಪ್ರದೀಪ್, ಸೆಸ್ಕ್ ಎಇಇ ಮುತ್ತುರಾಜ್, ಎಪಿಎಂಸಿ ಸದಸ್ಯ ಎ.ಎಸ್.ಪ್ರದೀಪ್, ಮಾಜಿಅಧ್ಯಕ್ಷ ಬಿ.ಕೆ.ರವಿಕುಮಾರ್, ಕಾಗಲವಾಡಿಚಂದ್ರು, ಹೆಬ್ಬಸೂರುಮರಿಸ್ವಾಮಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಲಿಂಗಯ್ಯ, ವಿಜಯೇಂದ್ರ ಹಾಗೂ ಇತರರು ಹಾಜರಿದ್ದರು.