ಚಾಮರಾಜನಗರ : ಸಚಿವರಿಗೆ ತಲುಪಬೇಕಿದ್ದ 25.76 ಲಕ್ಷ ರೂ, ಹಣವನ್ನು ವಿಧಾನಸೌಧದಲ್ಲಿ ಜಪ್ತಿಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಮರು ತನಿಖೆಗೆ ಆದೇಶ ನೀಡಿದ್ದು, ಶಾಸಕ ಪುಟ್ಟರಂಗಶೆಟ್ಟಿ ನೈತಿಕ ಹೊಣೆ ಒತ್ತು ರಾಜೀನಾಮೆ ನೀಡಬೇಕು ಎಂದು ಕಾಡಾ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ನಿಜಗುಣರಾಜು ಒತ್ತಾಯಿಸಿದರು.
2019 ರ ಜ.4 ರಂದು ಅಂದಿನ ಸಚಿವ ಪುಟ್ಟರಂಗಶೆಟ್ಟಿ ಅವರ ಕಚೇರಿಯಲ್ಲಿ ಟೈಪಿಸ್ಟ್ ಎಸ್.ಜೆ.ಮೋಹನ್ ಕುಮಾರ್ ಬಳಿ 25.76 ಲಕ್ಷ ರೂ, ಇದ್ದ ಬ್ಯಾಗನ್ನು ಪೊಲೀಸರು ಜಪ್ತಿ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ಅಧಿಕಾರಿಗಳು ತನಿಖೆ ನಡೆಸಿದ್ದರು. 2023 ರಲ್ಲಿ ಈ ಪ್ರಕರಣ ಲೋಕಾಯುಕ್ತಕ್ಕೆ ಹಸ್ತಾಂತರವಾಗಿ ಮೋಹನ್‌ಕುಮಾರ್ ಆರೋಪಿಯನ್ನಾಗಿ ಪರಿಗಣಿಸಿತ್ತು. ಆ ಸಂದರ್ಭದಲ್ಲಿ ಈ ಹಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಪುಟ್ಟರಂಗಶೆಟ್ಟಿ ಹೇಳಿದ್ದರು. ಆದರೇ ಇತ್ತೀಚೆಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಹೆಚ್ಚಿನ ತನಿಖೆ ನಡೆಸುವಂತೆ ಆದೇಶಿಸಿದ್ದು, ಪುಟ್ಟರಂಗಶೆಟ್ಟಿ ಅವರು ನೈತಿಕ ಹೊಣೆಯನ್ನು ಒತ್ತು ಎಂಎಸ್‌ಐಎಲ್ ಅಧ್ಯಕ್ಷ ಸ್ಥಾನ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಅಂದಿನ ಹಿಂದುಳಿದ ವರ್ಗಗಳ ಸಚಿವರಾಗಿದ್ದ ಪುಟ್ಟರಂಗಶೆಟ್ಟಿ ಅವರು, ಇಲಾಖೆಯಿಂದ ನಡೆಯುತ್ತಿದ್ದ ಕಾಮಗಾರಿಗಳಿಗೆ ಕಮಿಷನ್ ಪಡೆಯುತ್ತಿದ್ದ ಹಣ ಇದಾಗಿತ್ತು ಎಂಬುದು ಜಗಜ್ಜಾಹೀರಾಗಿತ್ತು. ಈ ನಿಟ್ಟಿನಲ್ಲಿ ಶಾಸಕ ಪುಟ್ಟರಂಗಶೆಟ್ಟಿ ಅವರು ತನಿಖೆಗೆ ಯಾವುದೇ ಹಸ್ತಕ್ಷೇಪ ಮಾಡಬಾರದು ಎಂಬ ಕಾರಣಕ್ಕೆ ತಕ್ಷಣವೇ ರಾಜೀನಾಮೆ ಕೊಟ್ಟು ಅಧಿಕಾರ ದುರುಪಯೋಗ ಮಾಡುವುದನ್ನು ತಪ್ಪಿಸಬೇಕು ಎಂದು ಹೇಳಿದರು.
ಇತ್ತೀಚೆಗೆ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಕ್ಷೇತ್ರಕ್ಕೆ ಅನುದಾನ ತರುವಲ್ಲಿ ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ ವಿಫಲವಾಗಿದ್ದಾರೆ. ದೆಹಲಿಯ ಚುನಾವಣೆ ಫಲಿತಾಂಶ, ದೇಶದಲ್ಲಿ ಕಾಂಗ್ರೆಸ್ ಶಕ್ತಿ ಕ್ಷೀಣಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದರು. ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಎನ್.ಬಾಲರಾಜ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಜಿಲ್ಲಾ ಮಾಧ್ಯಮ ಸಹ ಪ್ರಮುಖ್ ಶಿವಣ್ಣ, ಮುಖಂಡ ವೇಣುಗೋಪಾಲ್ ಹಾಜರಿದ್ದರು.