ಕಲಘಟಗಿ: ಕಾರ್ವಿುಕ ಇಲಾಖೆಯ ಆಹಾರ ಧಾನ್ಯಗಳ ಕಿಟ್ಗಳನ್ನು ನಮಗೂ ವಿತರಿಸಬೇಕು ಎಂದು ಆಗ್ರಹಿಸಿ ಪಟ್ಟಣದ ನೂರಾರು ಕೂಲಿ ಕಾರ್ವಿುಕರು ಶಾಸಕ ಸಿ.ಎಂ. ನಿಂಬಣ್ಣವರ ನಿವಾಸಕ್ಕೆ ಮುಗಿಬಿದ್ದ ಘಟನೆ ಬುಧವಾರ ನಡೆಯಿತು.
ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ ಅವರು ಇಲಾಖೆ ಮೂಲಕ ನೀಡುತ್ತಿರುವ ಆಹಾರ ಧಾನ್ಯಗಳ ಕಿಟ್ಗಳನ್ನು ಮೇ 19ರಂದು ಪಟ್ಟಣದಲ್ಲಿ ಶಾಸಕರ ನಾಗರಿಕ ಸೇವಾ ಕೇಂದ್ರದಲ್ಲಿ ತಾಲೂಕು ಆಡಳಿತದೊಂದಿಗೆ ಸಾಂಕೇತಿಕವಾಗಿ ವಿತರಿಸಲಾಗಿತ್ತು. ಆದರೆ, ಆ ಸಂದರ್ಭದಲ್ಲಿ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ಬಡ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಹಾರ ಧಾನ್ಯಗಳ ಕಿಟ್ ಪಡೆಯಲು ಮುಗಿಬಿದ್ದಿದ್ದರು. ಮಾಸ್ಕ್ ಧರಿಸದೆ, ಪರಸ್ಪರ ಅಂತರ ಕಾಯ್ದುಕೊಳ್ಳದೇ ಗುಂಪುಗೂಡಿದ್ದ ಜನರನ್ನು ನಿಯಂತ್ರಿಸಲು ಸಾಧ್ಯವಾಗದೆ ಕಿಟ್ ವಿತರಣೆ ಸ್ಥಗಿತಗೊಳಿಸಲಾಯಿತು. ಆಗ ಶಾಸಕ ಸಿ.ಎಂ. ನಿಂಬಣ್ಣವರ ಮಾತನಾಡಿ, ಇನ್ನುಳಿದ ಕಿಟ್ಗಳನ್ನು ಅಧಿಕಾರಿಗಳು ಬಡ ಕೂಲಿ ಕಾರ್ವಿುಕರನ್ನು ಗುರುತಿಸಿ ವಿತರಿಸುವಂತೆ ಸೂಚಿಸಲಾಗಿದೆ ಎಂದು ಹೇಳಿ ಜನರನ್ನು ನಿಯಂತ್ರಿಸಿದರು.
ಖಾಸಗಿ ಕಟ್ಟಡದಲ್ಲಿ ಸಂಗ್ರಹದ ಆರೋಪ: ಸರ್ಕಾರದ ಆಹಾರ ಧಾನ್ಯಗಳ ಕಿಟ್ಗಳನ್ನು ಸರ್ಕಾರದ ಕಟ್ಟಡಗಳಲ್ಲಿರಿಸದೆ ತಮ್ಮ ಖಾಸಗಿ ಕಟ್ಟಡದಲ್ಲಿ ಸಂಗ್ರಹಿಸಿರುವುದು ಸರ್ಕಾರದ ನಿಯಮಕ್ಕೆ ವಿರುದ್ಧ. ಬಡ ಕೂಲಿ ಕಾರ್ವಿುಕರನ್ನು ಬಿಟ್ಟು ಬಿಜೆಪಿ ಕಾರ್ಯಕರ್ತರಿಗಷ್ಟೆ ಕಿಟ್ಗಳನ್ನು ವಿತರಿಸಲು ಮುಂದಾಗಿರುವುದು ಖಂಡನೀಯ ಎಂದು ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಮಂಜುನಾಥಗೌಡ ಮುರಳ್ಳಿ ಆರೋಪಿಸಿದ್ದರು. ಈ ಆರೋಪದ ಹಿನ್ನೆಲೆಯಲ್ಲಿ ಪಟ್ಟಣದ ಬಡಜನತೆ ಶಾಸಕರ ಮನೆಗೆ ಮುಗಿಬಿದ್ದು ತಮಗೂ ಸರ್ಕಾರದ ಆಹಾರ ಧಾನ್ಯಗಳ ಕಿಟ್ ನೀಡಬೇಕೆಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿಗಳಲ್ಲಿ ವಿತರಣೆ ಇಂದು: ಕಿಟ್ನಲ್ಲಿ ಅಕ್ಕಿ, ತೊಗರಿಬೇಳೆ, ಎಣ್ಣೆ, ಖಾರದಪುಡಿ, ಸಾಂಬಾರಪುಡಿ, ರಸಂಪುಡಿ, ಗೋಧಿ ಹಿಟ್ಟು, ಸಕ್ಕರೆ, ಉಪ್ಪಿನಕಾಯಿ, ರವಾ, ಸಾಬೂನು, ಕಡಲೆಕಾಳು ಸೇರಿ ಅವಶ್ಯಕ ಸಾಮಗ್ರಿ ಇವೆ. ತಾಲೂಕಿಗೆ ಒಟ್ಟು 3 ಸಾವಿರ ಕಿಟ್ ಬಂದಿದ್ದು, ಅವುಗಳಲ್ಲಿ 700 ಕಿಟ್ಗಳನ್ನು ಅಳ್ನಾವರ ಭಾಗಕ್ಕೆ ಕಳುಹಿಸಲಾಗಿದೆ. ಇನ್ನುಳಿದ 2300 ಕಿಟ್ಗಳಲ್ಲಿ ತಾಲೂಕಿನ ತಂಬೂರ, ಸಂಗಮೇಶ್ವರ, ಸೂಳಿಕಟ್ಟಿ, ಬೆಲವಂತರ, ತಾವರಗೆರೆ, ಬಮ್ಮಿಗಟ್ಟಿ, ದುಮ್ಮವಾಡ, ದೇವಲಿಂಗನಕೊಪ್ಪ, ಜಿ.ಬಸವನಕೊಪ್ಪ, ದಾಸ್ತಿಕೊಪ್ಪ, ಹಿರೇಹೊನ್ನಿಹಳ್ಳಿ ಸೇರಿ 15 ಗ್ರಾಪಂಗಳಿಗೆ ತಲಾ 30 ಕಿಟ್ನಂತೆ ಗುರುವಾರ ಆಯಾ ಪಿಡಿಒಗಳಿಗೆ ತಲುಪಿಸಲಾಗಿದೆ. ಅವರು ಅರ್ಹರ ಯಾದಿ ತಯಾರಿಸಿ ಮೇ 22ರಂದು ಆಯಾ ಗ್ರಾಪಂಗಳಲ್ಲಿ ಹಾಗೂ ಇನ್ನುಳಿದ ಕಿಟ್ಗಳನ್ನು ಪಪಂ ವ್ಯಾಪ್ತಿಯಲ್ಲೂ ಮುಖ್ಯಾಧಿಕಾರಿ ವಿತರಣೆ ಮಾಡಲಿದ್ದಾರೆ.
ಆಹಾರ ಧಾನ್ಯಗಳ ಕಿಟ್ಗಳು ಅಸಂಘಟಿತ ಕಾರ್ವಿುಕರಾದ ಕ್ಷೌರಿಕರು, ಅರ್ಚಕರು, ದ್ವಿಚಕ್ರ ವಾಹನಗಳ ದುರಸ್ತಿಗಾರರು ಸೇರಿ ಮುಂತಾದ ಕಾರ್ವಿುಕ ವಲಯಕ್ಕೆ ಮೀಸಲಾಗಿವೆ. ಅಗತ್ಯಬಿದ್ದರೆ ಕಾರ್ವಿುಕ ಸಚಿವರಲ್ಲಿ ಕೇಳಿ ಬಡ ಜನತೆಗೆ ಕೊಡಲಾಗುವುದು.| ಸಿ.ಎಂ. ನಿಂಬಣ್ಣವರ ಶಾಸಕ, ಕಲಘಟಗಿ