ಜಿಲ್ಲೆ

ಶಾಸಕ ನಾರಾಯಣರಾವ್ ನಿಧನಕ್ಕೆ ಹಲವರ ಕಂಬನಿ

ಶಾಸಕ ನಾರಾಯಣರಾವ್ ಬಡವರ ಬಂಧು, ಸರಳ, ಸಜ್ಜನಿಕೆಯ ನಾಯಕರು. ಅವರ ನಿಧನದ ಸುದ್ದಿ ಕೇಳಿ ತೀವ್ರ ಆಘಾತ ಆಗಿದೆ. ಅವರ ನಿಧನದಿಂದ ಬಸವಕಲ್ಯಾಣ ಅಲ್ಲದೆ ಕಲ್ಯಾಣಕ ಕರ್ನಾಟಕ ಭಾಗಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತ ಅವರ ಕುಟುಂಬಕ್ಕೆ ಹಾಗೂ ಅವರ ಅಪಾರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಕೊಡಲಿ. ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ.
| ಶ್ರೀ ಡಾ.ಚೆನ್ನವೀರ ಶಿವಾಚಾರ್ಯ, ಹಾರಕೂಡ ಸಂಸ್ಥಾನ

ನಾರಾಯಣರಾವ್ ಅವರು ಕಡು ಬಡತನದಿಂದ ಮುಂದೆ ಬಂದವರು. ಜನ ಸೇವೆಯೇ ಜನಾರ್ಧನ ಸೇವೆ ಎಂದು ತಿಳಿದು ದೀನ,ದಲಿತರ, ಬಡವರ ನಾಯಕರಾಗಿದ್ದರು. ಅನುಭವ ಮಂಟಪದ ಬಗ್ಗೆ ಅವರಲ್ಲಿದ್ದ ಕಾಳಜಿ ಮೆಚ್ಚುವಂಥದ್ದು. ಅನುಭವ ಮಂಟಪದ ಅಡಿಗಲ್ಲು ರಾಷ್ಟ್ರಪತಿಯಿಂದ ಮಾಡಬೇಕೆಂಬ ಕನಸ್ಸು ಕಂಡಿದ್ದರು. ಅವರ ಅಗಲಿಗೆ ಬಸವಭಕ್ತರಿಗೆ ನೋವು ತಂದಿದೆ.
| ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು
ಅನುಭವ ಮಂಟಪದ ಅಧ್ಯಕ್ಷರು

ಶಾಸಕ ನಾರಾಯಣರಾವ್ ಕರೊನಾಗೆ ಬಲಿಯಾಗಿರುವುದು ಆಘಾತ ತಂದಿದೆ. ಬಡವರ, ಶೋಷಿತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಬಸವಣ್ಣನವರ ತತ್ವದಲ್ಲಿ ನಂಬಿಕೆಯನ್ನು ಇಟ್ಟು ಬಸವಕಲ್ಯಾಣದ ಸರ್ವಾಂಗೀಣ ಅಭಿವೃದ್ಧಿಗೆ ಸತತ ಶ್ರಮಿಸುತ್ತಿದ್ದರು.
| ಶ್ರೀ ಡಾ.ರಾಜಶೇಖರ ಶಿವಾಚಾರ್ಯ
ಬೇಮಳಖೇಡ, ಗೋರ್ಟಾ

ಸರಳ ಸಜ್ಜನಿಕೆ ರಾಜಕಾರಣಿ ಶಾಸಕ ಬಿ.ನಾರಾಯಣರಾವ್ ಅಗಲಿಕೆ ನೋವು ತಂದಿದೆ. ಹುಟ್ಟು ಹೋರಾಟಗಾರರಾಗಿದ್ದ ಅವರು ಅತ್ಯಂತ ಕೆಳಮಟ್ಟದಿಂದ ಉನ್ನತ ಸ್ಥಾನಕ್ಕೆ ಏರಿದ್ದರು. ಪಕ್ಷಭೇದ ಮರೆತು ಎಲ್ಲರೊಂದಿಗೆ ಪ್ರೀತಿ ಪ್ರೇಮದಿಂದ ಇರುತ್ತಿದ್ದರು. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ.
| ಶ್ರೀ ಡಾ.ಶಿವಾನಂದ ಸ್ವಾಮೀಜಿ ಹುಲಸೂರು

ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದ ಶಾಸಕ ಬಿ.ನಾರಾಯಣರಾವ್ ಕರೊನಾಕ್ಕೆ ಬಲಿ ಆಗಿರುವುದು ದುಃಖದ ವಿಷಯ. ಅವರ ಅಗಲಿಕೆ ನೋವು ಸಹಿಸುವ ಸಾಮಥ್ರ್ಯವನ್ನು ದೇವರು ಕುಟುಂಬಕ್ಕೆ ದಯಪಾಲಿಸಲಿ.
| ಶ್ರೀ ಪ್ರಣವಾನಂದ ಸ್ವಾಮೀಜಿ, ಮುಚಳಂಬ

ಶಾಸಕ ಬಿ.ನಾರಾಯಣರಾವ್ ಅಗಲಿಕೆಯಿಂದ ಹುಲಸೂರು ಮತ್ತು ಬಸವಕಲ್ಯಾಣ ತಾಲೂಕಿನ ಜನರಿಗೆ ನುಂಗಲಾರದ ತುತ್ತಾಗಿದೆ. ಸದಾ ಬಡ ಮತ್ತು ಹಿಂದುಳಿದ ಜನಪರ ಧ್ವನಿ ಎತ್ತಿ ಅನೇಕ ಸೌಲಭ್ಯ ಒದಗಿಸಿದ್ದ ದಾನಿಯಾಗಿದ್ದರು. ಅವರ ನಿಧನದಿಂದ ನಮ್ಮ ಭಾಗದ ಜನರು ಸಜ್ಜನ ಶಾಸಕನನ್ನು ಕಳೆದುಕೊಂಡಂತಾಗಿದೆ.
| ಶ್ರೀ ಪಂಚಾಕ್ಷರಿ ಸ್ವಾಮೀಜಿ, ಬೇಲೂರ

ಕ್ರಿಯಾಶೀಲ ಹಾಗೂ ನೇರ ವ್ಯಕ್ತಿತ್ವವುಳ್ಳ ಶಾಸಕ ನಾರಾಯಣರಾವ್ ಅವರು ಬಡವರ ಬಗ್ಗೆ ಅತೀವ ಕಾಳಜಿ ಹೊಂದಿದ್ದರು. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಸದಾ ಮಾರ್ಗದರ್ಶನ ನೀಡುತ್ತಿದ್ದರು. ಬಸವಕಲ್ಯಾಣವನ್ನು ಉತ್ತಮ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು ಎಂಬ ಕನಸು ಹೊಂದಿದ್ದರು. ಅವರ ನಿಧನದಿಂದ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ.
| ಪ್ರಭು ಚವ್ಹಾಣ್ ಜಿಲ್ಲಾ ಉಸ್ತುವಾರಿ ಸಚಿವ

ಜನಪರ ಹೋರಾಟಗಳಲ್ಲಿ ಸತತ ಪಾಲ್ಗೊಂಡು, ತುಳಿತಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಿಕೊಡುವಲ್ಲಿ ನಾರಾಯಣರಾವ್ ಅವರು ಸದಾ ಮುಂದೆ ಇರುತ್ತಿದ್ದರು. ಕ್ರಿಯಾಶೀಲ ಜನಪ್ರತಿನಿಧಿಯ ನಿಧನದಿಂದ ಬಸವಣ್ಣನವರ ಕರ್ಮಭೂಮಿಗೆ ತುಂಬಲಾರದ ನಷ್ಟವಾಗಿದೆ.
| ಭಗವಂತ ಖೂಬಾ ಸಂಸದ

ಶಾಸಕ ನಾರಾಯಣರಾವ್ ಅವರು ಸಜ್ಜನ ರಾಜಕಾರಣಿ. ಸ್ನೇಹಜೀವಿಯಾಗಿದ್ದರು. ಬಡವರು, ಹಿಂದುಳಿದವರು, ಶೋಷಿತರ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಿ ಹೋರಾಟ ನಡೆಸುತ್ತಿದ್ದರು. ಬಸವಾದಿ ಶರಣರ ತತ್ವದಲ್ಲಿ ಅಪಾರ ನಂಬಿಕೆಯಿಟ್ಟುಕೊಂಡು ಕ್ಷೇತ್ರವನ್ನು ಮಾದರಿ ಮಾಡಲು ಕೆಲಸ ಮಾಡುತ್ತಿದ್ದರು. ಅವರ ಹಠಾತ್ ನಿಧನದಿಂದ ಜಿಲ್ಲೆಗೆ ದೊಡ್ಡ ನಷ್ಟವಾಗಿದೆ.
| ಈಶ್ವರ ಖಂಡ್ರೆ
ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಭಾಲ್ಕಿ ಶಾಸಕ

ಜನಪರ ಕಾಳಜಿ, ಬುದ್ಧ್ದ, ಬಸವ, ಅಂಬೇಡ್ಕರ್ ಅವರ ಸಮಾನತೆ ಸಿದ್ಧಾಂತದಲ್ಲಿ ನಾರಾಯಣರಾವ್ ಅವರು ನಂಬಿಕೆ ಹೊಂದಿದ್ದರು. ಅವರ ನಿಧನ ಕಲ್ಯಾಣ ಕರ್ನಾಟಕ ಭಾಗಕ್ಕೆ ಪೆಟ್ಟು ನೀಡಿದೆ. ಸಮಾಜದ ಹೋರಾಟದಲ್ಲಿ ನನಗೆ ಅಣ್ಣನ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ಮಾಡುತ್ತಿದ್ದರು.
| ಬಂಡೆಪ್ಪ ಖಾಶೆಂಪುರ
ಬೀದರ್ ದಕ್ಷಿಣ ಶಾಸಕ

ಹಿಂದುಳಿದ ವರ್ಗದವರ ಧ್ವನಿಯಾಗಿದ್ದ ಶಾಸಕ ನಾರಾಯಣರಾವ್ ನಿಧನದ ಸುದ್ದಿ ತಿಳಿದು ಅತೀವ ದುಃಖವಾಯಿತು. ಜಿಲ್ಲೆಯು ಒಬ್ಬ ದಿಟ್ಟ, ನೇರ ನುಡಿಯ ನಾಯಕನನ್ನು ಕಳೆದುಕೊಂಡಿದ್ದೇವೆ.
| ರಾಜಶೇಖರ ಪಾಟೀಲ್
ಹುಮನಾಬಾದ್ ಶಾಸಕ

ನಾರಾಯಣರಾವ್ ಅವರು ಜನರ ಸೇವೆ ಮಾಡುತ್ತ, ಸಂಘರ್ಷದ ಜೀವನ ನಡೆಸುತ್ತ ಸ್ವಂತ ಬಲದ ಮೇಲೆ ಶಾಸಕ ಸ್ಥಾನದವರೆಗೆ ಬೆಳೆದಿದ್ದರು. ರಾಜ್ಯದ ಅನೇಕ ಹಿರಿಯ ಹಾಗೂ ಮುತ್ಸದ್ಧಿ ರಾಜಕಾರಣಿಗಳ ಪ್ರೀತಿ, ವಿಶ್ವಾಸ ಗಳಿಸಿದ್ದರು. ಅವರು ಅಜಾತಶತ್ರು ತರಹ ಇದ್ದರು.
| ರಹೀಮ್ ಖಾನ್ ಬೀದರ್ ಶಾಸಕ

ನಾರಾಯಣರಾವ್ ಅವರ ನಿಧನ ಸುದ್ದಿ ಆಘಾತ ಉಂಟು ಮಾಡಿದೆ. ರಾಜಕೀಯ ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದ ಅವರು ಎಂದೋ ಶಾಸಕರಾಗಬೇಕಿತ್ತು. ಆದರೆ ತಡವಾಗಿ ಆ ಯೋಗ ಕೂಡಿ ಬಂದಿತ್ತು. ಅವರನ್ನು ಕಳೆದುಕೊಂಡು ಬಸವ ನಾಡು ಬಡವಾಗಿದೆ. ಕಾಂಗ್ರೆಸ್ ಪಕ್ಷಕ್ಕೂ ತುಂಬಲಾರದ ನಷ್ಟವಾಗಿದೆ.
| ವಿಜಯಸಿಂಗ್ ಎಂಎಲ್ಸಿ

ಶಾಸಕ ನಾರಾಯಣರಾವ್ ಬಡವರ ಬಗ್ಗೆ ಹೊಂದಿದ್ದ ಕಾಳಜಿ ಮಾದರಿ. ಅವರು ಜನರ ಸಮಸ್ಯೆಗಳನ್ನು ಪಕ್ಷಾತೀತವಾಗಿ ಬಗೆಹರಿಸುವ ಅಪರೂಪದ ನಾಯಕರಾಗಿದ್ದರು. ಸರಳ ವ್ಯಕ್ತಿತ್ವದಿಂದಾಗಿ ಜನಸಾಮಾನ್ಯರ ಮನ ಗೆದ್ದಿದ್ದರು. ಹಿರಿಯ ಹಾಗೂ ಕಿರಿಯ ರಾಜಕಾರಣಿಗಳ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತಿದ್ದರು.
| ಸೂರ್ಯಕಾಂತ ನಾಗಮಾರಪಳ್ಳಿ
ಬಿಜೆಪಿ ಮುಖಂಡ

ಶಾಸಕ ಬಿ.ನಾರಾಯಣರಾವ್ ವಯಸ್ಸಿನಿಂದ ಹಿರಿಯರಾಗಿದ್ದರೂ ಸ್ವಭಾವದಲ್ಲಿ ಮಗುವಾಗಿದ್ದರು. ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದ ಅಗಾಧ ಅನುಭವವುಳ್ಳ ಹಿರಿತಲೆ ರಾಜಕಾರಣಿಯನ್ನು ಕಳೆದುಕೊಂಡ ಬೀದರ್ ಜಿಲ್ಲೆ ರಾಜಕೀಯವಾಗಿ ಬಡವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ.
| ಶರಣು ಸಲಗರ
ಬಿಜೆಪಿ ಯುವ ಮುಖಂಡ, ಬಸವಕಲ್ಯಾಣ

ನಾರಾಯಣರಾವ ಅವರು ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಸಂಕಲ್ಪ ತೊಟ್ಟಿದ್ದರು. ಅದರ ಶಂಕುಸ್ಥಾಪನೆಗೆ ರಾಷ್ಟ್ರಪತಿಗೆ ಕರೆಸುವ ಕನಸು ಹೊತ್ತಿದ್ದರು. ಆದರೆ ಅದನ್ನು ಕಣ್ಣಾರೆ ಕಾಣುವ ಮೊದಲೇ ಬಿಟ್ಟು ಹೋಗಿದ್ದಾರೆ. ಅವರ ಈ ಕನಸು ನನಸುಗೊಳಿಸುವ ಮೂಲಕ ಸರ್ಕಾರ ಅವರ ಆತ್ಮಕ್ಕೆ ಶಾಂತಿ ನೀಡುವ ಕೆಲಸ ಮಾಡಬೇಕು.
| ಬಸವರಾಜ ಧನ್ನೂರ
ರಾಷ್ಟ್ರೀಯ ಬಸವ ದಳದ ಅಧ್ಯಕ್ಷ

ಶಾಸಕ ಬಿ.ನಾರಾಯಣರಾವ್ ನಿಧನದ ಸುದ್ದಿ ಸಿಡಿಲು ಬಡಿದಂತೆ ಮಾಡಿದೆ. ನಮ್ಮ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಈ ಸುದ್ದಿ ಕೇಳುವುದೇ ತೀರ ದುಃಖದಾಯಕ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಕುಟುಂಬ ಸದಸ್ಯರಿಗೆ ದೇವರು ಶಕ್ತಿ ತುಂಬಲಿ.
| ತಿಪ್ಪಣ್ಣರೆಡ್ಡಿ
ರಾಜ್ಯಾಧ್ಯಕ್ಷ, ಕೋಲಿ ಸಮಾಜ

  • ಶಾಸಕರ ನಿಧನಕ್ಕೆ ಹಲವರ ಕಂಬನಿ

ಬಸವಕಲ್ಯಾಣ: ಶಾಸಕ ಬಿ.ನಾರಾಯಣರಾವ್ ನಿಧನಕ್ಕೆ ಪೂಜ್ಯರು, ಗಣ್ಯರು ಸೇರಿ ಹಲವರು ಕಂಬನಿ ಮಿಡಿದಿದ್ದಾರೆ. ಅನುಭವ ಮಂಟಪ ನಿರ್ಮಾಣವೇ ನನ್ನ ಜೀವನದ ಗುರಿ ಎನ್ನುತಿದ್ದ ಅವರ ಬಾಯಲ್ಲಿ ಬಸವತತ್ವ ಸದಾ ಬರುತ್ತುತ್ತು. ಅವರ ಅಗಲಿಕೆಯಿಂದ ಅಪ್ಪಟ ಬಸವ ತತ್ವ ನಿಷ್ಠ ಶಾಸಕರನ್ನು ಕಳೆದುಕೊಂಡಿದ್ದೇವೆ ಎಂದು ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಶಾಸಕರು ನನಗೆ ಸಹೋದರನಂತೆ ಇದ್ದರು. ಕ್ಷೇತ್ರದ ಅಭಿವೃದ್ಧಿ ಹಿತದಿಂದ ಕೆಲವು ಸಂದರ್ಭಗಳಲ್ಲಿ ಮಾರ್ಗದರ್ಶನ ನೀಡುತ್ತಿದ್ದರು ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಅಲ್ಪ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದರು ಎಂದು ಮಾಜಿ ಸಚಿವ ಬಸವರಾಜ ಪಾಟೀಲ್ ಅಟ್ಟೂರ, ಮಾಜಿ ಶಾಸಕ ಎಂ.ಜಿ. ಮುಳೆ, ಕಾಂಗ್ರೆಸ್ ತಾಲೂಕು ಅಧ್ಯಕ್ಷ ನೀಲಕಂಠ ರಾಠೋಡ್ ಹೇಳಿದ್ದಾರೆ. ಹರಳಯ್ಯ ಗವಿಯ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ, ಅನುಭವ ಮಂಟಪ ಉಪಾಧ್ಯಕ್ಷ ವೈಜಿನಾಥ ಕಾಮಶೆಟ್ಟೆ, ನಗರಸಭೆ ಮಾಜಿ ಅಧ್ಯಕ್ಷ ಮೀರ್ ಅಜರ್ ಅಲಿ, ಬಿಜೆಪಿ ಮುಖಂಡ ಶಾಂತಪ್ಪ ಜಿ.ಪಾಟೀಲ್, ಕಾಂಗ್ರೆಸ್ ಮುಖಂಡರಾದ ಶಿವರಾಜ ನರಶೆಟ್ಟೆ, ಆನಂದ ದೇವಪ್ಪ, ಪ್ರಮುಖರಾದ ಬಸವರಾಜ ಸ್ವಾಮಿ, ಶಶಿಕಾಂತ ದುರ್ಗೆ, ಶಿವಕುಮಾರ ಬಿರಾದಾರ, ದೀಪಕ ಮಾಲಗಾರ, ಕಸಾಪ ತಾಲೂಕು ಅಧ್ಯಕ್ಷ ಡಾ.ರುದ್ರಮಣಿ ಮಠಪತಿ ಇತರರು ಶೋಕ ವ್ಯಕ್ತಪಡಿಸಿದ್ದಾರೆ.

  • ಬಡವಾದ ಕೋಲಿ ಸಮಾಜ

ಕಲಬುರಗಿ: ಬಸವಕಲ್ಯಾಣದ ಬಿ. ನಾರಾಯಣರಾವ್ ನಿಧನದಿಂದ ರಾಜ್ಯ ಒಬ್ಬ ಪ್ರತಿಭಾನ್ವಿತ ಶಾಸಕನನ್ನು ಕಳೆದುಕೊಂಡಂತಾಗಿದೆ ಎಂದು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಕಂಬನಿ ಮಿಡಿದಿದ್ದಾರೆ. ಸ್ನೇಹಜೀವಿಯಾಗಿದ್ದ ನಾರಾಯಣರಾವ್ ಪಕ್ಷಭೇದ ಮರೆತು ಎಲ್ಲರ ಜತೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದರು. ಕೋಲಿ ಸಮಾಜದ ದೊಡ್ಡ ಆಸ್ತಿಯಾಗಿದ್ದ ಅವರನ್ನು ಕಳೆದುಕೊಂಡ ಸಮಾಜವೂ ಅನಾಥವಾಗಿದೆ. ಹುಟ್ಟು ಹೋರಾಟಗಾರರಾಗಿದ್ದ ನಾರಾಯಣರಾವ್ ಹಿಂದುಳಿದ ವರ್ಗಗಳ ಜನರ ಏಳ್ಗೆಗೆ ಸಾಕಷ್ಟು ಹೋರಾಟ ಮಾಡಿದ್ದನ್ನು ಮರೆಯಲಾಗದು. ದೇವರು ಮೃತರ ಆತ್ಮಕ್ಕೆ ಶಾಂತಿ ನೀಡಲಿ, ಕುಟುಂಬ ಸದಸ್ಯರಿಗೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.