ವಿಜಯವಾಣಿ ಸುದ್ದಿಜಾಲ ಬೀದರ್
ಕರೊನಾ ಸೋಂಕಿನಿಂದ ಬಳಲುತ್ತಿರುವ ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾರಾಯಣರಾವ್ (65) ಅವರ ಆರೋಗ್ಯ ದಿಢೀರ್ ಬಿಗಡಾಯಿಸಿದ್ದು, ಸ್ಥಿತಿ ತೀವ್ರ ಚಿಂತಾಜನಕವಾಗಿದೆ.
ಶಾಸಕರಿಗೆ ಕಳೆದ ದಿ.31ರಂದು ಕರೊನಾ ಸೋಂಕು ತಗುಲಿತ್ತು. ಸೆ.1ರಿಂದ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ರಾತ್ರಿ ರಕ್ತದೊತ್ತಡ ತೀವ್ರ ಕಮ್ಮಿ (ಲೋ ಬಿಪಿ) ಆಗಿ ಆರೋಗ್ಯ ಹದಗೆಟ್ಟಿದೆ. ಹೀಗಾಗಿ ಇವರನ್ನು ಮತ್ತೆ ಕೃತಕ ಉಸಿರಾಟ (ವೆಂಟಿಲೇಟರ್) ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಅವರು ಯಾವುದೇ ಚಿಕಿತ್ಸೆಗೂ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ ಸ್ಥಿತಿ ತೀವ್ರ ನಾಜೂಕಿದೆ ಎಂದು ಮೂಲಗಳು ತಿಳಿಸಿವೆ.
ಕರೊನಾದಿಂದ ಇವರ ಶ್ವಾಸಕೋಶಕ್ಕೆ ಸೋಂಕು (ಲಂಗ್ಸ್ ಇನ್ಫೆಕ್ಶನ್) ಆಗಿತ್ತು. ನ್ಯೂಮೋನಿಯಾ, ರಕ್ತದೊತ್ತಡ ಹಾಗೂ ಶುಗರ್ನಲ್ಲಿ ಏರುಪೇರಾಗುತ್ತಿತ್ತು. ಹೀಗಾಗಿ ಆಸ್ಪತ್ರೆಗೆ ದಾಖಲಾದ ಎರಡನೇ ದಿನದಂದೇ ಇವರಿಗೆ ಕೃತಕ ಉಸಿರಾಟದ ವ್ಯವಸ್ಥೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇಡಲಾಗಿತ್ತು. ಎರಡು ವಾರದ ಬಳಿಕ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡಿತ್ತು. ವೆಂಟಿಲೇಟರ್ ಸಹ ತೆಗೆಯಲಾಗಿತ್ತು. ಸೋಂಕಿನಿಂದ ಗುಣಮುಖರಾಗಿ ಬೇಗ ಆಸ್ಪತ್ರೆಯಿಂದ ಹೊರಬರಲಿದ್ದಾರೆ ಎಂಬ ವಿಶ್ವಾಸ ಮೂಡಿರುವಾಗಲೇ ಅಚಾನಕ್ ಸ್ಥಿತಿ ಬಿಗಡಾಯಿಸಿದೆ. ಅವರಏನೂ ಹೇಳದ ಸ್ಥಿತಿಯಿದೆ ಎಂದು ಈ ಮೂಲಗಳು ಮಾಹಿತಿ ನೀಡಿವೆ.
ಶಾಸಕರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಆಸ್ಪತ್ರೆ ಮೂಲಗಳು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಶಾಸಕರ ಆರೋಗ್ಯ ಸ್ಥಿತಿ ತೀವ್ರ ಗಂಭೀರವಾಗಿದೆ (ವೇರಿ ಕ್ರಿಟಿಕಲ್) ಎಂದಷ್ಟೇ ತಿಳಿಸುತ್ತಿದ್ದಾರೆ. ಕಳೆದ 22 ದಿನಗಳಿಂದ ಕರೊನಾ ವಿರುದ್ಧ ಸೆಣೆಸುತ್ತಿದ್ದಾರೆ. ಸೋಂಕು ಶ್ವಾಸಕೋಶದ ಜತೆಗೆ ಕಿಡ್ನಿ ಇತರೆ ಪ್ರಮುಖ ಅಂಗಾಂಗಗಳಿಗೂ ಹಾನಿಗೊಳಿಸಿದ ಕಾರಣ ಸ್ಥಿತಿ ಒಮ್ಮೆಲೆ ಖರಾಬ್ ಆಗಿ ಕೋಮಾಗೆ ಜಾರಿದ್ದಾರೆ ಎನ್ನಲಾಗಿದೆ.
ನಾರಾಯಣರಾವ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ವಿಷಯ ಗೊತ್ತಾದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರು ಮಣಿಪಾಲ್ ಆಸ್ಪತ್ರೆ ವೈದ್ಯರೊಂದಿಗೆ ಸಂಪರ್ಕಿಸಿ ಮಾಹಿತಿ ಪಡೆದಿದ್ದಾರೆ. ವಿಡಿಯೋ ಕಾಲ್ ನಲ್ಲಿ ಚರ್ಚಿಸಿದ ವೇಳೆ ವೈದ್ಯರು ಸಹ ಆರೋಗ್ಯ ಬಹಳ ನಾಜೂಕು ಇದೆ ಎಂಬ ವಿಷಯ ಖಂಡ್ರೆಯವರ ಗಮನಕ್ಕೆ ತಂದಿದ್ದಾರೆ. ಅವರನ್ನು ಉಳಿಸಿಕೊಳ್ಳಲು ಕೈಲಾದಷ್ಟು ಪ್ರಯತ್ನ ಮಾಡಿ. ದೇವಿಚ್ಛೆಯಿದ್ದರೆ ಏನಾದರೂ ಪವಾಡ ಆಗಬಹುದು ಎಂದು ಖಂಡ್ರೆ ಅವರು ವೈದ್ಯರಿಗೆ ತಿಳಿಸಿದರು. ಶಾಸಕರು ಗುಣಮುಖರಾಗಲಿ ಎಂದು ಖಂಡ್ರೆ ಪ್ರಾರ್ಥಿಸಿದ್ದಾರೆ.
ವದಂತಿಗಳು ಹಬ್ಬಿಸಬೇಡಿ
ಶಾಸಕ ನಾರಾಯಣರಾವ್ ಅವರ ಆರೋಗ್ಯ ಸ್ಥಿತಿ ತೀವ್ರ ಚಿಂತಾಜನಕವಾಗಿದೆ ಎಂಬ ಮಾಹಿತಿ ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಅನೇಕ ವದಂತಿ ಸಹ ಹಬ್ಬಿವೆ. ಕೆಲವರು ರಿಪ್ ಎಂದು ಮತ್ತೆ ಕೆಲವರು ಭಾವಪೂರ್ಣ ಶೃದ್ಧಾಂಜಲಿ ಎಂಬ ಪೋಸ್ಟ್ ಹಾಕಿದರು. ಹೀಗಾಗಿ ದಿನವಿಡಿ ಶಾಸಕರ ಆರೋಗ್ಯ ವಿಷಯವು ಬಸವಕಲ್ಯಾಣ ಕ್ಷೇತ್ರ ಸೇರಿದಂತೆ ಜಿಲ್ಲಾದ್ಯಂತ ಚರ್ಚೆಗೆ ಗ್ರಾಸವಾಯಿತು. ಅನೇಕರು ಪತ್ರಿಕಾ ಕಚೇರಿಗೆ ಫೋನ್ ಮಾಡಿ ಮಾಹಿತಿ ಕೇಳಿದರು. ನಾನಾ ವದಂತಿಗಳ ಹಿನ್ನೆಲೆಯಲ್ಲಿ ಶಾಸಕರ ಪುತ್ರ ಗೌತಮ್ ಅವರು ಸಂಜೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೇಳಿಕೆ ಪೋಸ್ಟ್ ಮಾಡಿ, ತಂದೆ ಆರೋಗ್ಯದ ಬಗ್ಗೆ ಯಾರೂ ವದಂತಿ ಹಬ್ಬಿಸಬೇಡಿ ಎಂದು ಕೋರಿದ್ದಾರೆ. ತಂದೆಯವರು ಕರೊನಾದಿಂದ ಬಳಲುತ್ತಿದ್ದಾರೆ. ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಆದರೆ ಕೆಲವರು ಬಸವಕಲ್ಯಾಣ ಇತರೆಡೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ಸರಿಯಲ್ಲ. ಶಾಸಕರು ಬೇಗ ಗುಣಮುಖರಾಗಿ ಮತ್ತೆ ಜನಸೇವೆಗೆ ಮರಳುವಂತಾಗಲು ಎಲ್ಲರೂ ಪ್ರಾರ್ಥಿಸಿ ಎಂದು ಮನವಿ ಮಾಡಿದ್ದಾರೆ. ಈ ಮಧ್ಯೆ ಮಣಿಪಾಲ್ ಆಸ್ಪತ್ರೆ ನಿರ್ದೇಶಕ ಡಾ. ಮನೀಶ್ ರೈ ಅವರು ಸಹ ಶಾಸಕರ ಸ್ಥಿತಿ ತೀವ್ರ ಗಂಭೀರವಾಗಿದೆ. ಬಹು ಅಂಗಾಂಗ ವೈಫಲ್ಯ ಅವರಿಗೆ ಕಾಡುತ್ತಿದ್ದು, ಪರಿಣತ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ ಎಂದು ಹೇಳಿದ್ದಾರೆ.
63 ಜನರಿಗೆ ಪಾಸಿಟಿವ್
ಜಿಲ್ಲೆಯಲ್ಲಿ ಬುಧವಾರ 63 ಜನರಿಗೆ ಕರೊನಾ ಪಾಸಿಟಿವ್ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 5953 ಕ್ಕೇರಿದೆ. ಬುಧವಾರ 43 ಸೇರಿದಂತೆ ಈವರೆಗೆ 5346 ಸೋಂಕಿತರು ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಇನ್ನೂ 454 ಸಕ್ರಿಯ ಪ್ರಕರಣಗಳಿವೆ