ವಿಜಯಪುರ: ಮಾಜಿ ಸಚಿವ ಶಾಸಕ ದಿ.ಎಂ.ಸಿ. ಮನಗೂಳಿ ಅಂತಿಮ ದರ್ಶನಕ್ಕೆ ಜನಸಾಗರ ಹರಿದು ಬರುತ್ತಿದೆ.
ಸಿಂದಗಿಯ ಎಂ.ಸಿ. ಮನಗೂಳಿ ಕಾಲೇಜ್ ಆವರಣದಲ್ಲಿ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ದತೆ ಪೂರ್ಣಗೊಳಿಸಲಾಗಿದೆ. ಬೃಹತ್ ಪೆಂಡಾಲ್ ನಿರ್ಮಿಸಿ ಜನರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ನಾಡಿನ ನಾನಾಭಾಗಗಳಿಂದ ಗಣ್ಯರು, ಬಂಧುಗಳು ಹಾಗೂ ಅಭಿಮಾನಿಗಳು ಆಗಮಿಸಿದ್ದಾರೆ.
ಬಿಸಿಲು ಲೆಕ್ಕಿಸದೇ ಸಾವಿರಾರು ಜನ ಮೈದಾನದಲ್ಲಿ ಜಮಾಯಿಸಿದ್ದಾರೆ. ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.
ಬೆಳಗ್ಗೆ 9 ಕ್ಕೆ ನಗರದಲ್ಲೆಡೆ ವಿಶೇಷ ವಾಹನದ ಮೂಲಕ ನಡೆದ ಮೆರವಣಿಗೆಯಲ್ಲಿ ನೂರಾರು ಜನ ಭಾಗವಹಿಸಿದ್ದರು. ಮಾರ್ಗಮಧ್ಯೆ ಅಭಿಮಾನಿಗಳು ಪುಷ್ಪಾರ್ಚನೆ ಮಾಡಿ ಆತ್ಮಕ್ಕೆ ಶಾಂತಿ ಕೋರಿದರು. ವಿವಿಧ ಅಂಗಡಿಗಳ ಮಾಲೀಕರು, ವ್ಯಾಪಾರಸ್ಥರು, ಗಣ್ಯ ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಮುಚ್ಚಿ ಅಂತ್ಯ ಸಂಸ್ಕಾರದ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ವಿವಿಧ ಮಠಾಧೀಶರು, ಗಣ್ಯರು, ಅಭಿಮಾನಿಗಳು ನುಡಿನಮನ ಸಲ್ಲಿಸಿದರು.