ಬಾಗಲಕೋಟೆ: ಬಿಜೆಪಿ ನಾಯಕ, ಮಾಜಿ ಸಚಿವ ಬಿ.ಶ್ರೀರಾಮುಲು ಕುರಿತು ಹಗುರವಾಗಿ ಮಾತನಾಡಿರುವ ಶಾಸಕ ಜನಾರ್ಧನ ರೆಡ್ಡಿಯವರು ಕೂಡಲೇ ಕ್ಷಮೆ ಯಾಚಿಸಬೇಕು ಎಂದು ವಾಲ್ಮೀಕಿ ಸಮಾಜದ ಮುಖಂಡ, ಶ್ರೀರಾಮುಲು ಅಭಿಮಾನಿ ಬಳಗದ ನಾಯಕ ಪ್ರಕಾಶ ನಾಯ್ಕರ ಆಗ್ರಹಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಾರ್ಧನ ರೆಡ್ಡಿಯವರು ರಾಜಕೀಯದಲ್ಲಿ ಭದ್ರವಾಗಿ ಕಾಲೂರಲು ಹಾಗೂ ಉದ್ಯಮದಲ್ಲಿ ಹೆಸರು ಮಾಡಲು ರಾಮುಲು ಅವರು ಪ್ರಮುಖ ಕಾರಣ ಎಂಬುದು ಮರೆತು ಈಗ ರಾಮುಲು ಕುರಿತು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿರುವ ಜನಾರ್ಧನ ರೆಡ್ಡಿ ನಡೆ ಖಂಡನೀಯ ಎಂದರು.
ರಾಮುಲು ಒಬ್ಬ ವಾಲ್ಮೀಕಿ ಸಮಾಜದ ಪ್ರಬಲ ನಾಯಕ ಎಂದಿಗೂ ಯಾರಿಗೂ ಕೇಡು ಬಯಸದವರು ಮುಗ್ಧ ರಾಜಕಾರಣಿ. ರಾಜಕಾರಣದಲ್ಲಿಯೂ ಜಾತಿ ಮಾಡಿಲ್ಲ. ಇಂತಹ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿರುವ ಜನಾರ್ಧನ ರೆಡ್ಡಿ ಕ್ಷಮೆ ಕೇಳಲು ಮುಂದಾಗದಿದ್ದರೆ ರೆಡ್ಡಿಯವರು ಎಲ್ಲಿಯೂ ರಾಜಕೀಯವಾಗಿ ಚುನಾವಣೆ ಎದುರಿಸಲು ಸ್ಪರ್ಧೆ ಮಾಡುವ ಸ್ಥಳಕ್ಕೆ ಹೋಗಿ ಅವರ ವಿರುದ್ಧ ಚುನಾವಣೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಬಿ.ಶ್ರೀರಾಮುಲು ಅವರನ್ನು ದುಡಿಸಿಕೊಂಡು ಅವಮಾನಿಸುವ ಕೆಲಸ ಇದೇನು ಮೊದಲು ಅಲ್ಲ. ಬಿಜೆಪಿ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಘಟಿಸುವಲ್ಲಿ ಅವರ ಕೊಡುಗೆ ಅಪಾರವಿದೆ. ಇದನ್ನು ಬಿಜೆಪಿ ಮರೆತಿದೆ. ಇವರೊಬ್ಬ ಹಿಂದುಳಿದ ವರ್ಗದ ನಾಯಕರಾಗಿದ್ದು, ಇವರನ್ನು ತಾತ್ಸಾರದಿಂದ ನಡೆದುಕೊಳ್ಳುತ್ತಿರುವುದು ಯಾಕೆ? ೨೦೧೮ ರಲ್ಲಿ ಹಾಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಸ್ಪರ್ಧೆ ಮಾಡಲು ರಾಜ್ಯಮಟ್ಟದ ನಾಯಕನಾಗಿ ಸಿಕ್ಕಿರುವುದು ರಾಮುಲು. ರಾಜಕೀಯ ಭವಿಷ್ಯವನ್ನು ಚಿಂತಿಸದೇ ಪಕ್ಷ ಹೇಳಿದಂತೆ ನಡೆದುಕೊಂಡಿದ್ದಾರೆ. ಈಗ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದರೂ ಬಿಜೆಪಿ ರಾಜ್ಯಾಧ್ಯಕ್ಷರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ಕೂಡಲೇ ಗಾಲಿ ಜನಾರ್ಧನ ರೆಡ್ಡಿ ತಮ್ಮ ಮಾತುಗಳನ್ನು ವಾಪಸ್ ಪಡೆಯಬೇಕು. ರಾಮುಲುರ ಬಳಿ ಕ್ಷಮೆ ಕೇಳಬೇಕು. ಬಿಜೆಪಿ ಕೂಡ ತನ್ನ ನಿಲುವು ಸ್ಪಷ್ಟಪಡಿಸಬೇಕು. ಭವಿಷ್ಯದಲ್ಲಿ ವಾಲ್ಮೀಕಿ ಸಮಾಜದ ನಾಯಕರನ್ನು ಅವಮಾನಿಸುವ ಪರಿಪಾಠ ಕೈಬಿಡಬೇಕು. ಇಲ್ಲವಾದಲ್ಲಿ ಸಮಾಜದಿಂದ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ಎಂ.ವೈ.ವಡವಣಿ, ಹಣಮಂತ ತಳವಾರ, ರಾಮಣ್ಣ ನಾಯ್ಕರ, ಯಮನೂರ ಚುಂಗಿ, ನಿಂಗಪ್ಪ ಡಿವಟಗಿ ಇತರರು ಇದ್ದರು.