ಜಿಲ್ಲೆ

ಶಾಸಕ ಗೌರಿಶಂಕರ್ ವಿರುದ್ಧ ಕ್ಯಾತಸಂದ್ರ ಠಾಣೆಯಲ್ಲಿ ಎಫ್‌ಐಆರ್!

ತುಮಕೂರು: ಮಾಜಿ ಶಾಸಕ ಬಿ.ಸುರೇಶ್‌ಗೌಡ ಕೊಲೆಗೆ ಸುಫಾರಿ ನೀಡಿದ ಆರೋಪ ಹಿನ್ನೆಲೆಯಲ್ಲಿ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಶಾಸಕ ಡಿ.ಸಿ.ಗೌರಿಶಂಕರ್ ವಿರುದ್ಧ ಕ್ಯಾತಸಂದ್ರ ಠಾಣೆಯಲ್ಲಿ ಗುರುವಾರ ಎಫ್‌ಐಆರ್ ದಾಖಲಾಗಿದೆ.

ಶಾಸಕ ಡಿ.ಸಿ.ಗೌರಿಶಂಕರ್, ಉದ್ಯಮಿ ಬೊಮ್ಮನಹಳ್ಳಿ ಬಾಬು ಹಾಗೂ ವಕೀಲ ಹಿರೇಹಳ್ಳಿ ಮಹೇಶ್ ವಿರುದ್ಧ ಬಿ.ಸುರೇಶ್‌ಗೌಡ ಕೊಲೆಗೆ ಸುಫಾರಿ ನೀಡಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕ ರಾಹುಲ್‌ಕುಮಾರ್‌ಗೆ ದೂರು ನೀಡಿದ್ದರು.

ತುಮಕೂರು ತಾಲೂಕು ಅರೆಯೂರಿನಲ್ಲಿ ಇತ್ತೀಚೆಗೆ ನಡೆದಿದ್ದ ಕಾರ್ಯಕ್ರಮದಲ್ಲಿ ಕೊಲೆಗೆ ಸುಫಾರಿ ನೀಡಿದ್ದಾರೆ ಎಂದು ಸುರೇಶ್‌ಗೌಡ ಮಾಡಿದ ಆರೋಪ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಪರಸ್ಪರ ಆರೋಪ, ಪ್ರತ್ಯಾರೋಪದ ಜತೆಗೆ ದೂರು ಕೂಡ ದಾಖಲಿಸಿದ್ದರು.

ತುಮಕೂರು ಮಾಜಿ ಮೇಯರ್ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಆರೋಪಿಗೆ 5 ಕೋಟಿ ರೂ. ನೀಡಿ ಕೊಲೆಗೆ ಸುಫಾರಿ ನೀಡಿದ್ದಾರೆ ಎಂದು ಸುರೇಶ್‌ಗೌಡ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ.

ಈ ಘಟನೆ ಬಗ್ಗೆ ಕಳೆದ ಎರಡು ತಿಂಗಳ ಹಿಂದೆಯೇ ಸಿಎಂ ಬಸವರಾಜು ಬೊಮ್ಮಾಯಿ,
ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ಸುರೇಶ್‌ಗೌಡ ದೂರು ನೀಡಿದ್ದಾಗಿ ಹೇಳಿದ್ದರೂ ಪ್ರಕರಣ ಮಾತ್ರ ತಡವಾಗಿ ನ.24ರಂದು ದಾಖಲಾಗಿರುವುದು ಆಶ್ಚರ್ಯ ಮೂಡಿಸಿದೆ.

ಶಾಸಕ ಡಿ.ಸಿ.ಗೌರಿಶಂಕರ್ ಕೂಡ ಇದಕ್ಕೆ ಪ್ರತಿದೂರು ನೀಡಿದ್ದು ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸುರೇಶ್‌ಗೌಡ ನೀಡಿದ ದೂರು ಹಿನ್ನೆಲೆಯಲ್ಲಿ ಕಲಂ120(ಬಿ), 506, 109 ರ/ವಿ34 ಐಪಿಸಿ ರಿತ್ಯಾ ಪ್ರಕರಣ ದಾಖಲಾಗಿದೆ.