ಜಿಲ್ಲೆ

ಶಾಸಕ ಗಣೇಶ್‌ಪ್ರಸಾದ್ ವಿಡಿಯೋ ವೈರಲ್

ಗುಂಡ್ಲುಪೇಟೆ: ತಾಲೂಕಿನ ಹಿರೀಕಾಟಿ ಗ್ರಾಮದಲ್ಲಿ ಸಾರ್ವಜನಿಕರ ಅಹವಾಲು ಆಲಿಸುವ ವೇಳೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಅವರು, ಕ್ರಷರ್ ಮಾಲೀಕರನ್ನು ಬರಲು ಬಿಡಬೇಡಿ, ಲಾರಿಗಳಿಗೆ ಕಲ್ಲು ಹೊಡೆಯಿರಿ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.


ಹಿರೀಕಾಟಿ ಗ್ರಾಮಕ್ಕೆ ಆ.2ರಂದು ಗಣೇಶ್‌ಪ್ರಸಾದ್ ಭೇಟಿ ನೀಡಿದ್ದಾಗ ಟಿಪ್ಪರ್‌ಗಳ ಸಂಚಾರದಿಂದ ರಸ್ತೆಗಳು ಹಾಳಾಗುತ್ತಿವೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಸಮಸ್ಯೆ ಹೇಳಿಕೊಂಡರು. ಈ ವೇಳೆ ಶಾಸಕರು ಲಾರಿಗಳಿಗೆ ಕಲ್ಲು ಹೊಡೆಯಿರಿ. ಕ್ರಷರ್ ಮಾಲೀಕರನ್ನು ಇಲ್ಲಿಗೆ ಬರಲು ಬಿಡಬೇಡಿ. ನೀವು ತಲೆ ಕೆಡಿಸಿಕೊಳ್ಳಬೇಡಿ, ಪೊಲೀಸರಿಗೆ ನಾನು ಹೇಳುತ್ತೇನೆ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.


ಬಿಜೆಪಿಯ ನಾನಾ ಘಟಕಗಳು ಇದು ಶಾಸಕರ ಗೂಂಡಾ ವರ್ತನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿವೆ. ವಿಡಿಯೋ ಬಗ್ಗೆ ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಪ್ರತಿಕ್ರಿಯಿಸಿ, ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದೀರಾ. ಗೂಂಡಾ ಹಾಗೂ ಪ್ರಚೋದನಕಾರಿ ಹೇಳಿಕೆ ಕೊಡುವುದನ್ನು ಮೊದಲು ನಿಲ್ಲಿಸಿ. ಸಾರ್ವಜನಿಕರ ಮುಂದೆ ಮಾತನಾಡುವಾಗ ಸೌಜನ್ಯದಿಂದ ವರ್ತಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಜನರಿಗೆ ತಿಳಿವಳಿಕೆ ಹೇಳಬೇಕೆ ಹೊರತು ಕಲ್ಲುಹೊಡೆಯಿರಿ ಎಂದು ಹೇಳಬಾರದು. ಸಾರ್ವಜನಿಕರ ಮುಂದೆ ಶಾಸಕರಾಗಿ ವರ್ತಿಸಬೇಕೆ ಹೊರತು ಗೂಂಡಾ ಗುರುವಾಗಿ ಅಲ್ಲ ಎಂದು ಲೇವಡಿ ಮಾಡಿದ್ದಾರೆ.

ನಮ್ಮ ಮೇಲೆ ಹಲ್ಲೆ ನಡೆಸುವಂತೆ ಹೇಳುವ ಮೂಲಕ ಶಾಸಕರು ಗೂಂಡಾ ವರ್ತನೆ ಪ್ರದರ್ಶಿಸಿದ್ದಾರೆ. ತಾವು ಪೊಲೀಸರಿಗೆ ಹೇಳುವುದಾಗಿ ಭರವಸೆ ನೀಡಿ ಜನರನ್ನು ಪ್ರಚೋದಿಸಿದ್ದಾರೆ. ಇದರಿಂದ ನಮಗೆ ಸ್ಥಳೀಯ ಪೊಲೀಸರ ಮೇಲೆ ನಂಬಿಕೆಯಿಲ್ಲದಂತಾಗಿದೆ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗುವುದು ಎಂದು ಹಿರೀಕಾಟಿಯಲ್ಲಿ ಗಣಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ್‌‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಸೋಲಿನಿಂದ ಹತಾಶರಾದ ಬಿಜೆಪಿಯವರು ವಿಡಿಯೋ ವೈರಲ್ ಮಾಡಿದ್ದಾರೆ. ಅವರಂತೆ ನನಗೆ ಕೆಟ್ಟ ಬುದ್ಧಿಯಿಲ್ಲ. ನಾನು ಯಾರನ್ನೂ ಗುರಿಯಾಗಿಸಿ ಮಾತನಾಡಿಲ್ಲ. ಟಿಪ್ಪರ್‌ಗಳು ಬರುವ ದಾರಿಗೆ ಕಲ್ಲು ಹಾಕಿ ಎನ್ನಲು ಹೋಗಿ ಬಾಯ್ತಪ್ಪಿನಿಂದ ಕಲ್ಲು ಹೊಡೆಯಿರಿ ಎಂದಿದ್ದೇನೆ. ಬಿಜೆಪಿಯವರಂತೆ ವೈಯಕ್ತಿಕ ಟೀಕೆಗಳನ್ನು ಮಾಡುವುದಿಲ್ಲ ಎಂದು ಶಾಸಕ ಗಣೇಶ್‌ಪ್ರಸಾದ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.