ಜಿಲ್ಲೆ

ಶಾಸಕ ಕೋನರೆಡ್ಡಿ ರೈತರಿಗೆ ಕ್ಷಮೆ ಯಾಚಿಸಲಿ: ಇಂಗಲಗುಪ್ಪೆ ಕೃಷ್ಣೇಗೌಡ

Hassan - Ramesh H R

ಹಾಸನ: ರೈತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಶಾಸಕ ಎಚ್.ಎಚ್. ಕೋನರೆಡ್ಡಿ ಕೂಡಲೇ ರೈತರ ಕ್ಷಮೆ ಯಾಚಿಸಬೇಕು. ಇಲ್ಲದಿದ್ದಲ್ಲಿ ಅವರ ಮುಖಕ್ಕೆ ಕಂಡಲ್ಲಿ ಮಸಿ ಬಳಿಯುತ್ತೇವೆ. ಮತ್ತು ಅವರ ನಿವಾಸಕ್ಕೆ ಮುತ್ತಿಗೆ ಕಾರ್ಯಕ್ರಮವನ್ನು ಸೋಮವಾರದಿಂದ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಎಚ್ಚರಿಸಿದರು.
ನವಲಗುಂದ ತಾಲೂಕಿನ ಅಣ್ಣೀಗೇರಿ ಪಟ್ಟಣದ ಸರ್ಕಾರಿ ಉಗ್ರಾಣದದಲ್ಲಿ ಬೀಜ ಕಳ್ಳತನ ಪ್ರಕರಣ ಸರಿಯಾಗಿ ತನಿಖೆಯಾಗಬೇಕು ಎಂದು ಅಖಿಲ ಕರ್ನಾಟಕ ರೈತ ಸಂಘಟನೆಯ ಮಹಾ ಒಕ್ಕೂಟದ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷರಾಗಿರುವ ಮಹಾದೇವಿ ಹುಯಿಲಗೋಳ ಇವರ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಮನವಿ ಸ್ವೀಕರಿಸಲು ಆಗಮಿಸಿದ್ದ ನವಲಗುಂದ ಕಾಂಗ್ರೆಸ್ ಶಾಸಕ ಎನ್.ಹೆಚ್. ಕೋನರೆಡ್ಡಿ ಮನವಿ ಪತ್ರ ಪಡೆಯುವ ವೇಳೆ ಸ್ಥಿಮಿತ ಕಳೆದುಕೊಂಡ ರೀತಿಯಲ್ಲಿ ವರ್ತನೆ ಮಾಡಿ, ರೈತ ಮುಖಂಡರಿಗೆ ಅವಾಚ್ಯ ಶಬ್ದ ಉಪಯೋಗಿಸಿದ್ದಾರೆ. ಅವರು ಈ ಕೂಡಲೇ ರಾಜ್ಯದ ರೈತರ ಕ್ಷಮೆ ಯಾಚಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಸ್ವತಃ ಹಸಿರು ಟವಲ್ ಧರಿಸುವ ಶಾಸಕ ಕೋನರೆಡ್ಡಿ ರೈತರನ್ನು ಇಷ್ಟೊಂದು ಕೀಳು ಮಟ್ಟದಲ್ಲಿ ನಿಂದಿಸಿರುವುದನ್ನು ನೋಡಿದರೆ ಅವರ ಮನಸ್ಸಿನಲ್ಲಿ ರೈತರ ಬಗ್ಗೆ ಎಂತಹ ಕ್ರೋಧ ಇದೆ ಎಂಬುದನ್ನು ತಿಳಿಯಬಹುದು. ಹಸಿರು ಟವಲ್ ಅಭಿವೃದ್ಧಿಯ ಸಂಕೇತ, ರೈತರ ಗುರುತು. ಶಾಸಕ ಕೋನರೆಡ್ಡಿಗೆ ಹಸಿರು ಟವಲ್ ಧರಿಸುವ ನೈತಿಕತೆ, ಅರ್ಹತೆ ಇಲ್ಲ. ಕೂಡಲೇ ಅವರು ತಮ್ಮ ಹೆಗಲ ಮೇಲಿರುವ ಹಸಿರು ಟವಲ್ ತೆಗೆದು ಹಾಕಬೇಕೆಂದು ಒತ್ತಾಯಿಸಿದರು.
ಶಾಸಕ ಕೋನರೆಡ್ಡಿ ರೈತ ಹೋರಾಟಗಾರನಿಗೆ ಕೆಟ್ಟ ಪದದಿಂದ ನಿಂದಿಸಿರುವ ವೀಡಿಯೋ ಇದೀಗ ರಾಜ್ಯದೆಲ್ಲೆಡೆ ವೈರಲ್ ಆಗಿದೆ. ಈತನ ವಿಧಾನಸಭಾ ಸದಸ್ಯತ್ವ ಸ್ಥಾನದಿಂದಲೇ ಸ್ಪೀಕರ್ ವಜಾಗೊಳಿಸಬೇಕು. ಕೋನರೆಡ್ಡಿ ತಕ್ಷಣ ರೈತರ ಕ್ಷಮೆ ಯಾಚಿಸಬೇಕು. ಇಲ್ಲದಿದ್ದಲ್ಲಿ ಕಂಡಲಿ ಮಸಿ ಬಳಿಯುವ ಮತ್ತು ಅವರ ನಿವಾಸ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ರೈತ ಬಣದ ಜಿಲ್ಲಾಧ್ಯಕ್ಷ ದಯಾನಂದ್, ಮಹಿಳಾ ಘಟಕದ ಅಧ್ಯಕ್ಷೆ ನಾಗವೇಣಿ, ಜಿಲ್ಲಾ ಸಂಘಟನ ಕಾರ್ಯದರ್ಶಿ ನಾಗೇಶ್ ಪಟೇಲ್, ಸಂಚಾಲಕ ನಾಗರಾಜು, ಚಿಕ್ಕಮಗಳೂರು ಮಹಿಳಾ ಅಧ್ಯಕ್ಷೆ ಜಯಶೀಲಾ ಇತರರು ಉಪಸ್ಥಿತರಿದ್ದರು.