ಹಾಸನ : ಬಗರ್‌ಹುಕುಂ ಸಾಗುವಳಿ ಪತ್ರ ಹಂಚಿಕೆಯಲ್ಲಿ ಬಹುಕೋಟಿ ರೂ.ಗಳ ಹಗರಣ ಸಂಬಂಧ ಬೇಲೂರು ಶಾಸಕ ಕೆ.ಎಸ್.ಲಿಂಗೇಶ್, ಅಂದಿನ ತಹಸೀಲ್ದಾರ್ ಸೇರಿ 15 ಜನರ ಮೇಲೆ ಬೇಲೂರು ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ಬಗರ್‌ಹುಕುಂ ಸಾಗುವಳಿ ಪತ್ರ ವಿಲೇವಾರಿ ಸಮಿತಿಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಭೂಹಗರಣ ತನಿಖೆ ಕೈಗೊಂಡು ವರದಿ ಸಲ್ಲಿಸುವಂತೆ ಬೆಂಗಳೂರಿನ 42ನೇ ಶಾಸಕ/ಸಂಸದರ ವಿಶೇಷ ನ್ಯಾಯಾಲಯ ಆದೇಶಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ಕೋಲಾರ ಮೂಲದ ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಪರ ಹೈಕೋರ್ಟ್ ವಕೀಲ ಎಸ್.ಉಮಾಪತಿ ಸುಧಾ ಕಟ್ಟಾ ವಾದಿಸಿದ್ದು, ಶಾಸಕ, ತಹಸೀಲ್ದಾರ್ ಸೇರಿ ಸಮಿತಿಯ 15 ಜನರ ಮೇಲೆ ಮೇಲೆ ಎಫ್‌ಐ ಆರ್ ಹಾಕಲಾಗಿದೆ.
ತಾಲೂಕಿನ ಕಂದಾಯ ಇಲಾಖೆಯ ಬಗರ್‌ಹುಕುಂ ಅರ್ಜಿ ಸಮಿತಿಯ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಡವರಿಗೆ ಸೇರಬೇಕಾದ ಭೂಮಿಯನ್ನು ಅಕ್ರಮವಾಗಿ ಉಳ್ಳವರಿಗೆ, ಹೊರ ಜಿಲ್ಲೆಯ ಪ್ರಭಾವಿಗಳಿಗೆ ಮಂಜೂರು ಮಾಡಿದ್ದಾರೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೆ.ಸಿ.ರಾಜಣ್ಣ ಮಾಹಿತಿ ಹಕ್ಕಿನಲ್ಲಿ ದಾಖಲೆ ಸಂಗ್ರಹಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಶಾಸಕ ಕೆ.ಎಸ್.ಲಿಂಗೇಶ್, ಜಿ.ಕೆ.ಕುಮಾರ್, ಸದಸ್ಯರಾದ ಶಾನೀಲಿ ಮೋಹನ್, ಟಿ.ಆರ್.ರಮೇಶ್, ಪರ್ವತೇಗೌಡ, ಚೇತನ್, ಈಶ್ವರ್ ಪ್ರಸಾದ್, ಎಸ್.ಎನ್.ಲಿಂಗೇಶ್, ರಂಗನಾಥ್, ಭಾಗ್ಯಮ್ಮ, ತಹಸೀಲ್ದಾರ್‌ಗಳಾದ ಜಗದೀಶ್, ಪರಮೇಶ್, ಉಮೇಶ್, ಪುಟ್ಟಶೆಟ್ಟಿ, ಯು.ಬಿ.ಮೋಹನ್‌ಕುಮಾರ್ ಆರೋಪಿಗಳಾಗಿದ್ದಾರೆ.
ನನ್ನ ಮೇಲೆ ಭೂ ಹಗರಣದ ಷಡ್ಯಂತ್ರ
ಬಗರ್‌ಹುಕುಂ ಸಮಿತಿ 2016ರಿಂದಲೇ ಜಾರಿಗೆ ಬಂದಿದೆ. ನಾನು ಶಾಸಕನಾಗಿ ಬಗರ್‌ಹುಕುಂ ಸಮಿತಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಿದ್ದು 2019ರಲ್ಲಿ, ನಾನು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಆರೋಪ ಮಾಡುತ್ತಿದ್ದಾರೆ. 2019 ರಿಂದ ನೀತಿ ಸಂಹಿತೆ ಹೊರಬೀಳುವ ತನಕ ಸಮಿತಿಯ 15 ಸಭೆ ನಡೆಸಿದ್ದು, ಯಾವುದೇ ಅಕ್ರಮ ನಡೆದಿಲ್ಲ. 562 ಅರ್ಹ ಫಲಾನುಭವಿಗಳಿಗೆ 720 ಎಕರೆ ಭೂಮಿಯನ್ನು ಅದರಲ್ಲೂ ಶೇ.80 ರಷ್ಟು ಬಡವರಿಗೆ ನೀಡಿದ ತೃಪ್ತಿ ಇದೆ. ಪುರಸಭಾ ವ್ಯಾಪ್ತಿಯ 3 ಕಿಮೀ ಅಂತರದಲ್ಲಿ ಯಾವುದೇ ಭೂ ಮಂಜೂರಾತಿ ನೀಡಿಲ್ಲ. ಎಚ್‌ಆರ್‌ಪಿ, ವೈಆರ್‌ಪಿ ಹಾಗೂ ಸೈನಿಕರಿಗೆ ಮೀಸಲಾದ ಭೂಮಿ ಮಂಜೂರಾತಿ ನಡೆಸಿಲ್ಲ. ಈ ಬಗ್ಗೆ ಸೂಕ್ತ ದಾಖಲೆ ನೀಡಲು ನಾವುಗಳು ಸಿದ್ಧವಿದ್ದು, ಚುನಾವಣೆ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ನನ್ನ ಮೇಲೆ ಭೂಹಗರಣದ ಷಡ್ಯಂತ್ರ ರೂಪಿಸಿದ್ದಾರೆ ಎಂದು ಶಾಸಕ ಶಾಸಕ ಕೆ.ಎಸ್.ಲಿಂಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.