ಜಿಲ್ಲೆ

ಶಾಸಕ ಎಚ್.ಡಿ.ರೇವಣ್ಣ ಆರೋಪ ಸತ್ಯಕ್ಕೆ ದೂರ

ಚನ್ನರಾಯಪಟ್ಟಣ: ಶಾಸಕ ಎಚ್.ಡಿ.ರೇವಣ್ಣ ಅವರು ಚನ್ನರಾಯಪಟ್ಟಣ ತಾಲೂಕಿನಲ್ಲಿ ಗ್ಯಾರಂಟಿ ಯೋಜನೆ ಸಮಿತಿ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ, ಕೆಲವು ಜನರನ್ನು ಯೋಜನೆಯಿಂದ ಕೈಬಿಡಲಾಗಿದೆ ಎಂಬುದಾಗಿ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದದ್ದು, ರೇವಣ್ಣಗೆ ಮಾಹಿತಿ ಕೊರತೆಯಿಂದ ಈ ಹೇಳಿಕೆ ನೀಡಿದ್ದಾರೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಲ್.ಪಿ.ಪ್ರಕಾಶ್‌ಗೌಡ ಹೇಳಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಫೆ.4 ರಂದು ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುವಾಗ ವಿನಾಕಾರಣ ರಾಜಕೀಯ ದುರುದ್ದೇಶದಿಂದ ಗ್ಯಾರಂಟಿ ಸಮಿತಿಯ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಕಾರ್ಯವೈಖರಿಯ ಬಗ್ಗೆ ಮಾತನಾಡುವ ಮೊದಲು ಅಂಕಿ-ಅಂಶಗಳನ್ನು ಪಡೆದುಕೊಂಡು ಮಾತನಾಡಲಿ. ಚನ್ನರಾಯಪಟ್ಟಣ ತಾಲೂಕಿನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಜಾರಿಗೆ ತಂದಿರುವ 5 ಯೋಜನೆಗಳು ಪಕ್ಷಾತೀತವಾಗಿ ಎಲ್ಲ ಫಲಾನುಭವಿಗಳಿಗೆ ತಲುಪುತ್ತಿದ್ದು, ಈ ಸಂಬಂಧ ಅಧ್ಯಕ್ಷರು ಮತ್ತು ಸಮಿತಿಯ ಸದಸ್ಯರು ಸೇರಿ ತಾಲೂಕಿನಲ್ಲಿ ಪ್ರವಾಸ ಮಾಡಿ, ಸದರಿ ಯೋಜನೆಗಳ ಪರಾಮರ್ಶೆ ನಡೆಸಿ, ಅತ್ಯಂತ ಪ್ರಮಾಣಿಕತೆಯಿಂದ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ.

ಸದರಿ ಯೋಜನೆಯು ತಾಲೂಕಿನಲ್ಲಿ ಶೇ.96.5 ರಷ್ಟು ಫಲಾನುಭವಿಗಳಿಗೆ ತಲುಪಿದ್ದು, 2024ರ ಡಿಸೆಂಬರ್‌ವರೆಗೆ ಗೃಹಲಕ್ಷ್ಮಿ ಯೋಜನೆಯಡಿ ತಾಲೂಕಿನಲ್ಲಿ 81,111 ಫಲಾನುಭವಿಗಳು, ಅನ್ನಭಾಗ್ಯ ಯೋಜನೆಯಡಿ 82,301 ಫಲಾನುಭವಿಗಳು, ಗೃಹಜ್ಯೋತಿ ಯೋಜನೆಯಡಿ 82,310 ಫಲಾನುಭವಿಗಳು, ಯುವನಿಧಿ ಯೋಜನೆಯಡಿ 451 ಫಲಾನುಭವಿಗಳು, ಶಕ್ತಿ ಯೋಜನೆಯಡಿ 25,030 ಪ್ರಯಾಣಿಕರು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದರು.

ಸಮಿತಿ ಸದಸ್ಯ ನವೀನ್ ಮಾತನಾಡಿದರು. ಸಮಿತಿ ಸದಸ್ಯರಾದ ಎ.ಆರ್.ನಾಗೇಶ್, ಬಿ.ಆರ್.ಕೆಂಪೇಗೌಡ, ಕೆ.ಎನ್.ನಾಗೇಶ್, ಎ.ಪಿ.ರಂಗಸ್ವಾಮಿ, ಎಸ್.ಎಂ.ಜನಾರ್ದನ್, ಸಿ.ಎನ್.ಗಣೇಶ್, ಎಚ್.ಕೆ.ರಂಗಸ್ವಾಮಿ, ಮಿಲ್ಟ್ರಿ ಮಂಜು ಇದ್ದರು.