ಜಿಲ್ಲೆ

ಶಾಸಕ ಎಂ.ಬಿ. ಪಾಟೀಲಗೆ ಬಹಿರಂಗ ಸವಾಲು, ಯಶವಂತರಾಯಗೌಡ ಪಾಟೀಲ ಹೇಳಿಕೆ, ಒಂದೇ ಒಂದು ಆರೋಪ‌ ಸಾಬೀತಾದರೂ ರಾಜಕೀಯ ನಿವೃತ್ತಿ ಘೋಷಿಸುವೆ !

ವಿಜಯಪುರ: ಪುಣೆಯ ಹಡಪ್ಸರ್ ನಲ್ಲಿ ಬಂಥನಾಳ ಶ್ರೀಗಳ ಜಮೀನು ಗಡಪ್ ಆಗಿದೆ ಎಂಬ ಶಾಸಕ ಎಂ.ಬಿ. ಪಾಟೀಲ ಆರೋಪಕ್ಕೆ ತಿರುಗೇಟು ನೀಡಿರುವ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೊಂದು ವೇಳೆ ಆ ಆರೋಪ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವೆ ಎಂದರು.

ನಾನು ಆ ಸಂಸ್ಥೆ ಸದಸ್ಯಲ್ಲ. ಸುಖಾ ಸುಮ್ಮನೆ ಜನರ ದಿಕ್ಕು ತಪ್ಪಿಸುವುದು ಸರಿಯಲ್ಲ ಎಂದರು.

ಇನ್ನು ಭೀಮಾತೀರದ ಮರಳಿನ ವಿಷಯಕ್ಕೆ ಸಂಬಂಧಿಸಿದಂತೆ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಹಾಗೊಂದು ವೇಳೆ ಇವರ ಬಳಿ ಏನಾದರೂ ಇದ್ದರೆ ಸಾಬೀತು ಪಡಿಸಲಿ ಎಂದ ಅವರು, ಮರಳಿನ ಅಕ್ರಮ ತಡೆಯುವಲ್ಲಿ ನನ್ನ ಪಾತ್ರವೇ ಪ್ರಮುಖವಾಗಿದೆ. ಅಸಲು ಹಲವು ವರ್ಷಗಳಿಂದ ಮರಳು ಗಣಿಗಾರಿಕೆಗೆ ಅವಕಾಶವೇ ಇಲ್ಲ. ಇದೀಗ ತಡೆಯಾಜ್ಞೆ ತೆರವಾಗಿದೆ‌. ಸುಖಾ ಸುಮ್ಮನೇ ಆರೋಪ ಸರಿಯಲ್ಲ ಎಂದರು.

ಇನ್ನು ಭೀಮಾಶಂಕರ‌ ಸಹಕಾರಿ ಸಕ್ಕರೆ‌ ಕಾರ್ಖಾನೆ ಯಲ್ಲಿ‌ ನಯಾ ಪೈಸೆ ವ್ಯತ್ಯಾಸ ಆಗಿದ್ದರೂ ಅರ್ಧ ಗಂಟೆ ಆ ಸ್ಥಾನದಲ್ಲಿ ಇರಲ್ಲ ಎಂದರು.

ಧರ್ಮ ವಿಭಜನೆ ವಿಷಯದಲ್ಲಿ ಕೈ ಹಾಕಿಲ್ಲ ಎಂದಿದ್ದಾರೆ. ಆದರೆ, ಸಿದ್ದರಾಮಯ್ಯ ಅವರು ಎಲ್ಲ ಸರ್ಕಾರಿ ಕಚೇರಿಯಲ್ಲಿ ಬಸವೇಶ್ವರ ಫೋಟೋ ಅಳವಡಿಸಲು ಆದೇಶಿಸಿದರು. ಅದಕ್ಕಾಗಿ ವೀರಶೈವ ಲಿಂಗಾಯತ ಮಹಾ ಸಭಾ ಅಭಿನಂದನೆ ಸಲ್ಲಿಸಿತು. ಅದಕ್ಕಾಗಿ ಕಮಿಟಿ ಮಾಡಿ ಮನವಿ ಕೂಡ ಸಲ್ಲಿಸಿತು‌. ಆದರೆ ವಿಷಯ ಅದಲ್ಲ ಅವರೆಲ್ಲೂ ಲಿಂಗಾಯತ ಪ್ರತ್ಯೇಕ ಧರ್ಮ ಮಾಡಿ ಎಂದು ಹೇಳಿಲ್ಲ. ಅದು ಮಾಡಿದ್ದು ನೀವು ಎಂದು ಎಂ.ಬಿ. ಪಾಟೀಲರ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಧರ್ಮಾಧಾರಿತ ರಾಜಕಾರಣ ಮಾಡುವುದು ಬೇಡ. ಜನರು ತಮಗೆ ಬೇಕಾದ ಧರ್ಮ ತಮ್ಮ ಮನೆಯಲ್ಲಿ ಆಚರಿಸಲಿ. ನಾವು ಅಭಿವೃದ್ಧಿ ಪರ ರಾಜಕೀಯ ಮಾಡಬೇಕೆಂದು ತಿಳಿಹೇಳಿದರು.

ಇನ್ನು ಬಾಜಾಭಜಂತ್ರಿ ಯಾವಾಗ ಬೇಕೆಂದಾಗ ಬಾರಿಸಲು ಬರಲ್ಲ. ಚುನಾವಣೆ ಬಂದಾಗ ಯಾರು ಏನು ಬಾರಿಸುತ್ತಾರೋ ನೋಡೋಣ ಎಂದು ತಿರುಗೇಟು ನೀಡಿದರು.

ಬಿಎಲ್ ಡಿಇ ಸಂಸ್ಥೆ ಬಗ್ಗೆ ಜನಜಾಗೃತಿ ಮೂಡಿಸಬೇಕಿದೆ. ಬರುವ ದಿನಗಳಲ್ಲಿ ಆ ಬಗ್ಗೆ ಜನರಿಗೆ ಮನವರಿಕೆ ಮಾಡುವೆ ಎಂದರು.

ಇನ್ನು ನಿಮ್ಮಿಂದ ಮಂತ್ರಿಯಾಗಿಲ್ಲ ಎಂದಿದ್ದಾರೆ. ಆದರೆ‌‌ ನಮ್ಮಿಂದ ಸರ್ಕಾರ ರಚನೆಯಾಗಿದೆ ಎಂಬುದು ಅರಿವಿರಲಿ. ಸರ್ಕಾರವೇ ಬರದಿದ್ದರೆ ಮಂತ್ರಿ ಎಲ್ಲಿ ಆಗುತ್ತಿದ್ದೀರಿ? ಎಂದು ಎಂ.ಬಿ. ಪಾಟೀಲರನ್ನು ಪ್ರಶ್ನಿಸಿದರು.

ನಿಮಗೆ ಸಹಾಯ ಮಾಡಿದವರನ್ನು‌ ನೆನಪಿಸಿಕೊಳ್ಳಿ. ಪರಮೇಶ್ವರ ಅಂಥವರನ್ನು ಸ್ಮರಿಸಿ ಎಂದರಲ್ಲದೇ‌ ನಾವು ಮಂತ್ರಿ ಮಾಡಿದ್ದೇವೆಂದು ಹೇಳಿಲ್ಲ. ಬದಲಾಗಿ ಸಾಕಷ್ಟು ಸಹಕಾರ ನೀಡಿದ್ದೇವೆ ಎಂಬುದು‌ ನೆನಪಿರಲಿ ಎಂದರು.

2013, 2018 ರ ಚುನಾವಣೆಯಲ್ಲಿ ನೀವು ಏನೆಲ್ಲ‌ ಕಸರತ್ತು ಮಾಡಿದರೂ ನಾನು‌ ಗೆದ್ದೆ. ನೀವು ಕಾಡಿದಂತೆಲ್ಲ‌ ಜನ ಹೆಚ್ಚಿನ ಪ್ರಮಾಣದಲ್ಲಿ ನನ್ನ ಕೈ ಹಿಡಿದಿದ್ದಾರೆ. ಮುಂದಿನ ಚುನಾವಣೆಯಲ್ಲೂ ಅದು ಮರುಕಳಿಸಲಿದೆ ಎಂದರು.

ಲಿಂಬೆ ಅಭಿವೃದ್ಧಿ ಮಂಡಳಿ ಮಾಡಿದಾಗ ದ್ರಾಕ್ಷಿ ಅಭಿವೃದ್ಧಿ ಮಂಡಳಿ‌ ಮಾಡಿ ಎಂದು ಸಿಎಂ ಬಳಿ ಹೋದಾಗ ಸಿಎಂ ಸಹ ಏ‌ ಪುಣ್ಯಾತ್ಮ ಲಿಂಬೆ ಅಭಿವೃದ್ಧಿ ಮಾಡಿದ್ದು ಸಹ ನಿನಗೆ ಸಹಿಸಿಕೊಳ್ಳಲು ಆಗುವುದಿಲ್ಲೇನು ಎಂದು ವಾಪಸ್ ಕಳುಹಿಸಿದರು.

ಹೀಗೆ ಎಲ್ಲ‌ವೂ ನನ್ನಿಂದಲೇ ಆಗಬೇಕು, ನಾನೇ‌ ಎಲ್ಲ‌ ಎಂಬುದು ಬಿಡಬೇಕು. ಸಿದ್ದೇಶ್ವರ ಸ್ವಾಮೀಜಿಗಳ ಹೆಸರು ಹೇಳಿಕೊಂಡು ಪ್ರಚಾರ ಪಡೆಯುವುದು ಬಿಡಬೇಕು. ಅವರ ಆದರ್ಶಗಳನ್ನು‌ ಕಿಂಚಿತ್ತಾದರೂ ಅಳವಡಿಸಿಕೊಳ್ಳಿ. ಅವರೊಬ್ಬ ದೇವರು. ಅವರು ಒಳ್ಳೆಯದಾಗಲಿ‌ ಎಂದು ಬಯಸುತ್ತಾರಷ್ಟೆ. ಅದನ್ನೇ ನೀವು ಯಾವುದಕ್ಕೋ ಬಳಸಿಕೊಳ್ಳುವುದು‌ ಸರಿಯಲ್ಲ ಎಂದರು.

ಇನ್ನು ಜಿಲ್ಲಾ ಪಂಚಾಯಿತಿ‌ ಚುನಾವಣೆಯಲ್ಲಿ ನನಗೆ ಟಿಕೆಟ್ ಕೊಡಿಸಿದ ಬಗ್ಗೆ ಹೇಳಿದವರಿಗೆ ಗೊತ್ತಿರಲಿ ಇವರಿಗಿಂತ ಮೊದಲೇ ನನ್ನ ಕುಟುಂಬ ಜಿಲ್ಲಾ ಪಂಚಾಯಿತಿ ರಾಜಕಾರಣದಲ್ಲಿದ್ದರು.

ಹೊಸದಾಗಿ‌ ಜಿಲ್ಲಾ ಪರಿಷತ್ ರಚನೆಯಾದಾಗ ಕಾಂಗ್ರೆಸ್ ಕಟ್ಟಾಳು

ನಮ್ಮ ತಂದೆ ದಿ.ವಿಠಲಗೌಡ ಪಾಡೀಲರು ಅಗರಖೇಡ ಜಿಪಂನಿಂದ ಪಕ್ಷದ ಏಕೈಕ ಅಭ್ಯರ್ಥಿಯಾಗಿ ಆಯ್ಕೆಯಾದರು ಎಂದು ಸೂಚ್ಯವಾಗಿ ತಿಳಿಸಿದರು.

ಸಂಸದ ರಮೇಶ ಹೇಳಿಕೆಗೆ ಪ್ರತಿಕ್ರಿಯೆ:

ನೀರಾವರಿ ವಿಷಯದಲ್ಲಿ ಈವರೆಗೂ ಸುಮ್ಮನಿದ್ದ ಬಿಜೆಪಿ ಅವರು ಇದೀಗ ಎಚ್ಚರವಾಗಿದ್ದಾರೆ. ಸಂಸದರು ಇಂಡಿ ಕ್ಷೇತ್ರಕ್ಕೆ ಹೋಗಿ‌ ನೀರಾವರಿ ಯೋಜನೆ ಬಿಜೆಪಿಯಿಂದ ಎಂದಿದ್ದಾರೆ. ಅದನ್ನು ನಾವೆಲ್ಲಿ ಅಲ್ಲಗಳೆದಿದ್ದೇವೆ. ಹಾಗಂತ ನಿಮ್ಮೊಬ್ಬರಿಂದಲೇ ಆಗಿಲ್ಲ‌. ಎಲ್ಲ‌ ಸರ್ಕಾರಗಳ ಪಾಲೂ ಇದೆ. ದೇವೇಗೌಡರು, ಯಡಿಯೂರಪ್ಪ ಸಹ ನೀರಾವರಿಗೆ ಕೊಡುಗೆ ನೀಡಿದ್ದಾರೆ. ನಾವದನ್ನು ಮುಕ್ತವಾಗಿ ಒಪ್ಪಿಕೊಳ್ಳಬೇಕೆಂದರು.