ಜಿಲ್ಲೆ

ಶಾಸಕ ಎಂ.ಬಿ. ಪಾಟೀಲ ವಿರುದ್ಧ ಹೇಳಿಕೆ, ಮಾತಿನ ಭರದಲ್ಲಿ ಸಿಕ್ಕಿಬಿದ್ದ ಕೂಚಬಾಳ, ಮುಜುಗರ ತಂದಿತೆ ಬಿಜೆಪಿಯ ಇಬ್ಬಗೆ ನೀತಿ?

ವಿಜಯಪುರ: ಕಾಂಗ್ರೆಸ್ ಶಾಸಕ ಡಾ.ಎಂ.ಬಿ. ಪಾಟೀಲರ ನೀರಾವರಿ ಯೋಜನೆಗಳ ಬಗ್ಗೆ ಟೀಕಿಸುವ ಭರದಲ್ಲಿ ಬಿಜೆಪಿ ಜಿಲ್ಲಾ ಘಟಕ ತನ್ನ ಕೈಯನ್ನು ತಾನೇ ಕಟ್ಟಿಸಿಕೊಂಡಂತಾಯಿತು.

ಶುಕ್ರವಾರ ಇಲ್ಲಿನ ರಾಣಿ ಚನ್ನಮ್ಮ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಎಂ.ಬಿ. ಪಾಟೀಲರನ್ನು ಟೀಕಿಸುವ ಭರಾಟೆಯಲ್ಲಿ ತಮ್ಮದೇ ಶಾಸಕರ ಹೇಳಿಕೆ ಹಾಗೂ ನಡೆ ಬಗ್ಗೆ ಉತ್ತರಿಸಲಾಗದೆ ಪೇಚಿಗೆ ಸಿಲುಕಿಕೊಂಡರು. ನೀರಾವರಿ ವಿಷಯದಲ್ಲಿ ಎಂ.ಬಿ. ಪಾಟೀಲರ ಸಾಧನೆ ಪ್ರಶ್ನಿಸಲು ಮುಂದಾದ ಆರ್.ಎಸ್. ಪಾಟೀಲ ಕೂಚಬಾಳ ತಮ್ಮದೇ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳರ ನಡೆಗೆ ನಿರುತ್ತರರಾದರು.

ಏನಿದು ಪ್ರಕರಣ?

ಕಳೆದೆರಡು ದಿನಗಳ ಹಿಂದೆ ಶಾಸಕ ಎಂ.ಬಿ. ಪಾಟೀಲ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳರನ್ನು ಬಿಜೆಪಿಯ ಪಾಪದ ಕೂಸು ಎಂದು ಟೀಕಿಸಿದ್ದರು. ನೀರಾವರಿ ಯೋಜನೆಗಳ ಬಗ್ಗೆ ಕಾಂಗ್ರೆಸ್ ಸಾಕಷ್ಟು ಸಾಧನೆ ಮೆರೆದಿದೆ. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕೃಷ್ಣಾ ಮೇಲ್ದಂಡೆ ಯೋಜನೆ ಕಾಂಗ್ರೆಸ್‌ನ ಪಾಪದ ಕೂಸು ಎಂದಿದ್ದಾರೆ. ಆದರೆ, ಬಿಜೆಪಿಯೇ ಅನೈತಿಕ ಸರ್ಕಾರವಾಗಿದ್ದು, ಗೋವಿಂದ ಕಾರಜೋಳ ಅವರು ಈ ಅನೈತಿಕ ಸರ್ಕಾರದ ಪಾಪದ ಕೂಸು ಎಂದಿದ್ದರು.

ತಡವಾಗಿ ಎಚ್ಚೆತ್ತುಕೊಂಡ ಬಿಜೆಪಿ ನಾಯಕರು ಎಂ.ಬಿ. ಪಾಟೀಲರಿಗೆ ತಿರುಗೇಟು ನೀಡಲು ಮುಂದಾದರು. ನೀರಾವರಿ ಯೋಜನೆಗಳಿಗೆ ವರ್ಷಕ್ಕೆ 10 ಸಾವಿರ ಕೋಟಿ ರೂ.ನೀಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಮಾತಿಗೆ ತಪ್ಪಿದೆ. ನಿಜವಾಗಿ ನೀರಾವರಿ ಆಗಿದ್ದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಂದು ಕೂಚಬಾಳ ಸಮರ್ಥಿಸಿಕೊಳ್ಳಲು ಮುಂದಾದರು.

ಮುಜುಗರಕ್ಕೆ ಕಾರಣವಾಗಿದ್ದೇನು?

ಇದೇ ವೇಳೆ ಸುದ್ದಿಗಾರರು ‘ಎಂ.ಬಿ. ಪಾಟೀಲರ ನೀರಾವರಿ ಯೋಜನೆಗಳ ಬಗ್ಗೆ ಮೆಚ್ಚಿ ನಿಮ್ಮದೇ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶಸ್ತಿ ನೀಡಿದ್ದಾರಲ್ಲ’ ಎನ್ನುತ್ತಿದ್ದಂತೆ ಕೂಚಬಾಳ ಪೇಚಿಗೆ ಸಿಲುಕಿಕೊಂಡರು. ಒಂದೆಡೆ ಬಿಜೆಪಿ ಕಾಂಗ್ರೆಸ್ ಅವಧಿಯಲ್ಲಿ ನೀರಾವರಿ ಯೋಜನೆ ಸಮರ್ಪಕವಾಗಿಲ್ಲ ಎಂದರೆ ಇನ್ನೊಂದೆಡೆ ತಮ್ಮದೇ ಪಕ್ಷದ ಶಾಸಕರು ಮುಕ್ತ ಕಂಠದಿಂದ ಎಂ.ಬಿ. ಪಾಟೀಲರ ಸಾಧನೆ ಕೊಂಡಾಡುತ್ತಾರೆ. ಎರಡರಲ್ಲಿ ಯಾವುದು ಸತ್ಯ? ಎಂಬ ಪ್ರಶ್ನೆಗೆ ಕೂಚಬಾಳ ಮೌನಕ್ಕೆ ಶರಣಾದರು. ಮುಂದುವರಿದು ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದರು.

ಹಾಗಾದರೆ ಬಿಜೆಪಿಯಲ್ಲಿ ಎಷ್ಟು ಘಟಕಗಳಿವೆ? ಯಾರ ಹೇಳಿಕೆ ಸರಿ? ಎಂಬ ಪ್ರಶ್ನೆಗೆ ಯಾವುದೇ ಉತ್ತರ ಲಭಿಸಲಿಲ್ಲ. ಸುದ್ದಿಗೋಷ್ಠಿಯಲ್ಲಿ ಪ್ರಮುಖ ನಾಯಕರು ಮೌನಕ್ಕೆ ಶರಣಾಗಿದ್ದರು. ಇನ್ನು ವಿಜಯಪುರ ನಗರದ ಅಭಿವೃದ್ಧಿ ವಿಚಾರದಲ್ಲೂ ಇಂಥದ್ದೇ ಸನ್ನಿವೇಶ ಎದುರಾಯಿತು. ನಗರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ, ರಸ್ತೆಗಳು ಹದಗೆಟ್ಟಿವೆ, ನಿಮ್ಮ ಶಾಸಕರು ಏನು ಮಾಡುತ್ತಿದ್ದಾರೆಂದು? ಸುದ್ದಿಗಾರರು ಪ್ರಶ್ನಿಸಿದಾಗ ಕೂಚಬಾಳ ಸಮರ್ಥನೆಗೆ ಮುಂದಾದರು. ತಮ್ಮದೇ ಪಕ್ಷದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ನಗರದ ಅಭಿವೃದ್ಧಿ ಹಳ್ಳ ಹಿಡಿದಿದೆ ಎಂದು ಬಹಿರಂಗವಾಗಿ ಹೇಳಿದ್ದಾರೆ ಆದರೂ ಸಮರ್ಥನೆ ಮಾಡಿಕೊಳ್ಳುತ್ತೀರಲ್ಲ...ಎಂಬ ಸುದ್ದಿಗಾರರ ಪ್ರಶ್ನೆಗೆ ಕೂಚಬಾಳ ಮತ್ತೊಮ್ಮೆ ಮೌನವಾದರು.

ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ಅರುಣ ಶಹಾಪುರ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಪ್ರಕಾಶ ಅಕ್ಕಲಕೋಟ, ಚಂದ್ರಶೇಖರ ಕವಟಗಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ದಯಾಸಾಗರ ಪಾಟೀಲ, ರಮೇಶ ಭೂಸನೂರ, ವಿವೇಕಾನಂದ ಡಬ್ಬಿ ಮತ್ತಿತರರಿದ್ದರು.