ಅರಕಲಗೂಡು: ಬಗರ್ ಹುಕುಂ ಯೋಜನೆಯಡಿ ಅರ್ಹರಿಗೆ ಭೂಮಿ ಮಂಜೂರು ಮಾಡದೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ತಾಲೂಕು ಕಚೇರಿ ಆವರಣದಲ್ಲಿ ಜನತೆ ಶಾಸಕ ಎ.ಮಂಜು ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ಬಗರ್ ಹುಕುಂ ಸಮಿತಿ ಸಭೆ ನಡೆಸಿ ಹೊರಬಂದ ಶಾಸಕರ ವಿರುದ್ಧ ಹೆತ್ತಗೌಡನಹಳ್ಳಿ ಗ್ರಾಮದ ಕೆಲವರು ಮುಗಿಬಿದ್ದು ವಾಗ್ವಾದ ನಡೆಸಿದರು. ಗ್ರಾಮದ ಸರ್ವೇ ನಂ.36ರಲ್ಲಿ 33.31 ಎಕೆರೆ ಭೂಮಿ ಇದ್ದು, ಅದನ್ನು ಸರ್ಕಾರಿ ಗೋಮಾಳವಾಗಿ ಮೀಸಲಿರಿಸಲಾಗಿದೆ. ಇದನ್ನು ಗ್ರಾಮಸ್ಥರು ಗೋಮಾಳವಾಗಿ ಉಪಯೋಗಿಸುತ್ತಿದ್ದು ಇದನ್ನು ಯಾರಿಗೂ ಮಂಜೂರು ಮಾಡದಂತೆ ಅರ್ಜಿ ಸಲ್ಲಿಸಿದ್ದರೂ ಶಾಸಕರು ತಮ್ಮ ಬೆಂಬಲಿಗರಿಗೆ ಮಂಜೂರಾತಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮದ ಕೆಲವರು, ಶಾಸಕ ಎ.ಮಂಜು ಹಾಗೂ ತಹಸೀಲ್ದಾರ್ ವಿರುದ್ಧ ಘೋಷಣೆಗಳನ್ನು ಕೂಗಿದರು.
ಭೂಮಿ ಕೋರಿ ಅರ್ಜಿ ಸಲ್ಲಿಸಿರುವವರಲ್ಲಿ ಭೂರಹಿತರು ಇಲ್ಲ, ಗ್ರಾಮದ ಸರ್ಕಾರಿ ಜಮೀನನ್ನು ಉಳಿಸಬೇಕು ಎಂದು ಏರುಧ್ವನಿಯಲ್ಲಿ ಕೆಲವರು ಶಾಸಕರರೊಂದಿಗೆ ಮಾತಿನ ಚಕಮಕಿ ನಡೆಸಿದರು.
ಇದರಿಂದ ಕುಪಿತರಾದ ಶಾಸಕರು, ವಾಗ್ವಾದಕ್ಕಿಳಿದ ಯುವಕರೊಂದಿಗೆ ತಿರುಗಿ ಬಿದ್ದರು. ಮಾತನಾಡುವುದನ್ನು ಸರಿಯಾಗಿ ಕಲಿತುಕೋ ನಾನು ನಿನ್ನ ತರಹ ಹೋರಾಟ ಮಾಡಿ ಬಂದವನು, ನಿಮ್ಮ ಊರಿಗೆ ಬರುತ್ತೇನೆ ನಡಿಯೋ ಎಂದು ಗದರಿಸಿದರು. ಗ್ರಾಮಸ್ಥರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಶಾಸಕರು ಅಲ್ಲಿಂದ ಕಾಲ್ಕಿತ್ತರು. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಭೂಮಿ ಮಂಜೂರಿಗೆ ಕ್ರಮ: ಇದಕ್ಕೂ ಮೊದಲು ಶಾಸಕ ಎ.ಮಂಜು ಅವರು ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಬಗರ್ ಹುಕುಂ ಯೋಜನೆಯ ಫಾರಂ ನಂ.53ರಲ್ಲಿ ಜಮೀನು ಸಕ್ರಮ ಕೋರಿ 10650 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳನ್ನು ಪರಿಶೀಲಿಸಿ ಅರ್ಹರಿಗೆ ಜಮೀನು ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಅಧಿಕಾರಿಗಳು ಸ್ಥಳಕ್ಕೆ ತೆರಳಿದಾಗ ಅರ್ಜಿದಾರರು ಅನುಭವದಲ್ಲಿ ಇದ್ದಾರೆಯೇ, ಕ್ರಮಬದ್ಧವಾಗಿ ಅರ್ಜಿ ಸಲ್ಲಿಸಿದ್ದಾರೆಯೇ ಎಂಬ ವಿಷಯಗಳ ಕುರಿತು ಪರಿಶೀಲಿಸಿ ಕಡತ ಸಿದ್ಧಪಡಿಸುವಂತೆ ಸೂಚಿಸಿದರು.
ೋಬಳಿ ಹೆತ್ತಗೌಡನಹಳ್ಳಿ ಗ್ರಾಮದ ರ‌್ವೆ ನಂ 36ರಲ್ಲಿ 11 ಮಂದಿ ಅರ್ಜಿ ಸಲ್ಲಿಸಿದ್ದು ಇದರಲ್ಲಿ 5 ಮಂದಿಗೆ 3.28ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಉಳಿದ 6 ಅರ್ಜಿಗಳನ್ನು ಪರಿಶಿಲನೆಗಾಗಿ ಬಾಕಿ ಇರಿಸಲಾಗಿದೆ. ಮಲ್ಲಿಪಟ್ಟಣ ಹೋಬಳಿ ಬಬ್ಬಗಳಲೆ ಗ್ರಾಮದ ಇಬ್ಬರಿಗೆ ಭೂಮಿ ಮಂಜೂರು ಮಾಡಿರುವುದಾಗಿ ಹೇಳಿದರು. ಅರ್ಜಿ ವಿಲೆವಾರಿ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದ್ದು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಹರ್ ಹುಕುಂ ಸಮಿತಿ ಸದಸ್ಯರಾದ ಎಸ್.ಎಲ್.ಗಣಪತಿ, ಪುಟ್ಟಯ್ಯ, ವೇದಾವತಿ, ತಹಸೀಲ್ದಾರ್ ಕೆ.ಸಿ.ಸೌಮ್ಯಾ, ಗ್ರೇಡ್-2 ತಹಸೀಲ್ದಾರ್ ಸಿ.ಸ್ವಾಮಿ ಕಂದಾಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.