ಹಾಸನ: ಅರಕಲಗೂಡು ಕ್ಷೇತ್ರದ ಜೆಡಿಎಸ್ ಶಾಸಕ ಎ.ಟಿ. ರಾಮಸ್ವಾಮಿ ಅವರಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಜೆಡಿಎಸ್ ಟಿಕೆಟ್ ನೀಡಬಾರದು ಎಂದು ಆಗ್ರಹಿಸಿ ಅರಕಲಗೂಡು ಕ್ಷೇತ್ರದ ಜೆಡಿಎಸ್‌ನ ನೂರಾರು ಕಾರ್ಯಕರ್ತರು ಶನಿವಾರ ಹೊಳೆನರಸೀಪುರದಲ್ಲಿ ಶಾಸಕ ಎಚ್.ಡಿ. ರೇವಣ್ಣ ಅವರ ಮನೆಗೆ ಮುತ್ತಿಗೆ ಹಾಕಿದರು.
ಬೇರೆ ಪಕ್ಷಗಳ ನಾಯಕರ ಮನೆಯ ಕದ ತಟ್ಟಿ ಅಲ್ಲಿ ಅವಕಾಶ ಸಿಗದೆ ಮತ್ತೆ ಜೆಡಿಎಸ್‌ನಿಂದಲೇ ಕಣಕ್ಕಿಳಿಯಲು ಮುಂದಾಗಿರುವ ಎ.ಟಿ. ರಾಮಸ್ವಾಮಿ ಅವರಿಗೆ ಜೆಡಿಎಸ್ ಟಿಕೆಟ್ ನೀಡಿದರೆ, ನಿಷ್ಟಾವಂತ ಕಾರ್ಯಕರ್ತರು ಪಕ್ಷ ತೊರೆಯಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದರು.
ಪಕ್ಷದ ಯಾವುದೇ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಎ.ಟಿ. ರಾಮಸ್ವಾಮಿ ಅವರು ಸರ್ವಾಧಿಕಾರಿ ಧೋರಣೆ ತೋರಿದ್ದಾರೆ. ಪಕ್ಷ ಸಂಘಟನೆಯನ್ನೂ ಮಾಡಿಲ್ಲ, ಅಭಿವೃದ್ಧಿ ಕೆಲಸವನ್ನೂ ಕೈಗೊಂಡಿಲ್ಲ. ಆದ್ದರಿಂದ ಅವರಿಗೆ ಯಾವುದೇ ಕಾರಣಕ್ಕೂ ಜೆಡಿಎಸ್ ಟಿಕೆಟ್ ನೀಡಬಾರದು. ಅವರ ಬದಲಿಗೆ ಯಾರಾದರೂ ಯುವಕರಿಗೆ ಟಿಕೆಟ್ ನೀಡಿದರೆ 50 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬರುತ್ತೇವೆ ಎಂಬುದಾಗಿ ಪಟ್ಟು ಹಿಡಿದರು.
ಕಾರ್ಯಕರ್ತರನ್ನು ಸಮಾಧಾನಪಡಿಸಿ ಮಾತನಾಡಿದ ಎಚ್.ಡಿ. ರೇವಣ್ಣ, ಅರಕಲಗೂಡು ಕ್ಷೇತ್ರದ ಟಿಕೆಟ್ ವಿಚಾರವನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮತ್ತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಪಕ್ಷದ ಮುಖಂಡರೊಂದಿಗೆ ಕುಳಿತು ಚರ್ಚಿಸಿ ನಿರ್ಧಾರ ಮಾಡಲಿದ್ದಾರೆ. ನಮ್ಮ ಕುಟುಂಬದಿಂದ ಯಾರೂ ಅರಕಲಗೂಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಬಯಸಿಲ್ಲ ಎಂದು ಸ್ಪಷ್ಟಪಡಿಸಿದರು.
ಅರಕಲಗೂಡು ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಆಗಿರುವ ಜಿಪಂ ಮಾಜಿ ಸದಸ್ಯ ಪಾಪಣ್ಣಿ, ಮುಖಂಡರಾದ ಶಂಕರ್, ಸತೀಶ್ ಮತ್ತಿತರರು ರೇವಣ್ಣ ಮನೆಗೆ ಮುತ್ತಿಗೆ ಹಾಕಿದ ಕಾರ್ಯಕರ್ತರ ನೇತೃತ್ವ ವಹಿಸಿದ್ದರು. ಮೊನ್ನೆ ಅರಕಲಗೂಡಿನಲ್ಲಿ ಸುದ್ದಿಗೋಷ್ಟಿ ನಡೆಸಿ ಬಹಿರಂಗವಾಗಿಯೇ ಎಟಿಆರ್ ವಿರುದ್ಧ ಹರಿಹಾಯ್ದಿದ್ದ ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಅನಿಲ್ ಕುಮಾರ್ ಬೆಂಬಲಿಗರು ಸಹ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಶಾಸಕ ಎಟಿಆರ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಇತ್ತೀಚೆಗೆ ತಣ್ಣಗಾಗಿತ್ತು. ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ರೇವಣ್ಣ ಅವರು ಎಟಿಆರ್ ಮನವೊಲಿಸಿ ಜೆಡಿಎಸ್‌ನಲ್ಲೇ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಪಕ್ಷದೊಳಗಿನ ಈ ದಿಢೀರ್ ಬೆಳವಣಿಗೆ ಅಚ್ಚರಿ ಉಂಟು ಮಾಡಿದೆ. ಅಲ್ಲದೆ ಭಾನುವಾರ ಶಾಸಕ ಎ.ಟಿ. ರಾಮಸ್ವಾಮಿ ಅರಕಲಗೂಡಿನಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದರಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸಹ ಭಾಗವಹಿಸಲಿದ್ದಾರೆ. ಅದಕ್ಕೆ ಮುನ್ನಾ ದಿನದ ಈ ಘಟನೆ ಎಟಿಆರ್ ಆತಂಕಕ್ಕೆ ಕಾರಣವಾಗಿದೆ.