ಕಲಬುರಗಿ: ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕನ್ನಡ ಮಾಧ್ಯಮ ಶಾಲೆ ಮತ್ತು ಶಿಕ್ಷಕರಿಗೆ ತರಬೇತಿಗಾಗಿ ೨೦೦೫ರಲ್ಲಿ ನಿವೇಶನ ಪಡೆದಿದ್ದ ಶಾಸಕ ಅಲ್ಲಮಪ್ರಭು ಪಾಟೀಲ್ ಅಧ್ಯಕ್ಷತೆಯ ಶ್ರೀ ಗೊಲ್ಲಾಳೇಶ್ವರ ವಿದ್ಯಾವರ್ಧಕ ಸಂಘವೂ ನಿಯಮ ಮೀರಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ ಎಂದು ಜೆಡಿಎಸ್ ಮುಖಂಡ ಕೃಷ್ಣಾರಡ್ಡಿ ಆರೋಪಿಸಿದರು.
ನಗರದ ಧರಿಯಾಪುರ ಕೋಟನೂರ ಯೋಜನೆಯಲ್ಲಿ ಸಿಎ ನಿವೇಶನವನ್ನು ಗುತ್ತಿಗೆ ಆಧಾರದಲ್ಲಿ ಕನ್ನಡ ಮಾಧ್ಯಮ ಶಾಲೆ, ಶಿಕ್ಷಕರ ತರಬೇತಿಗಾಗಿ ಪಡೆದಿದ್ದಾರೆ. ಆದರೆ ಇದೀಗ ಅನುಮತಿ ಇಲ್ಲದೆ ನಳಂದಾ ಪದವಿಪೂರ್ವ ಮಹಾವಿದ್ಯಾಲಯ ಆರಂಭಿಸಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
೨೦೧೧ರಲ್ಲಿ ಶಾಸಕ ಅಲ್ಲಮಪ್ರಭು ಅವರು ಕೂಡಾಕ್ಕೆ ಹೆಚ್ಚಿನ ಶೈಕ್ಷಣಿಕ ಚಟುವಟಿಕೆ ನಡೆಸಲು ಅನುಮತಿ ಕೋರಿದ್ದರು. ಆ ಸಂದರ್ಭದಲ್ಲಿ ಅವರ ಮನವಿಯನ್ನು ಕೂಡಾ ತಿರಸ್ಕರಿಸಿತ್ತು. ಆದರು ಯಾವ ಉz್ದÉÃಶಕ್ಕೆ ನಿವೇಶನ ಪಡೆದಿದ್ದರೋ ಅದನ್ನು ಮೀರಿ ಕಳೆದ ೧೦ ವರ್ಷದಿಂದ ಅಕ್ರಮವಾಗಿ ನಳಂದಾ ಪದವಿ ಪೂರ್ವ ಕಾಲೇಜು ನಡೆಸುತ್ತಿದ್ದಾರೆ ಎಂದರು.
ಶಿಕ್ಷಕರ ತರಬೇತಿಗಾಗಿ ಪಡೆದ ನಿವೇಶನದಲ್ಲಿ ಪ್ರಸ್ತುತ ಶಿಕ್ಷಕರ ತರಬೇತಿಯೂ ನಡೆಯುತ್ತಿಲ್ಲ. ಹೀಗೆ ಕೂಡಾಕ್ಕೆ ಮೋಸ ಮಾಡುತ್ತಿರುವ, ವಿಷಯ ಮರೆಮಾಚುತ್ತಿರುವ ಶಾಸಕ ಅಲ್ಲಮಪ್ರಭು ವಿರುದ್ಧ ಕೂಡಾದವರು ಕ್ರಮ ಕೈಗೊಳ್ಳಬೇಕು, ಕೂಡಲೇ ಅವರಿಗೆ ನೀಡಿರುವ ನಿವೇಶನವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಡಾ.ಸಿದ್ದಣ್ಣ ಪಾಟೀಲ್, ಸುನೀಲ ಗಾಜರೆ, ಸಂಜೀವಕುಮಾರ, ಜಾಕೀರ ಹುಸೇನ್, ಹಣಮಂತ ಕಂದಳ್ಳಿ ಇತರರಿದ್ದರು.