ಹುಬ್ಬಳ್ಳಿ: ಮಹಾನಗರ ಜಿಲ್ಲಾ ಕಾಂಗ್ರೆಸ್ ಕಾರ್ವಿುಕ ಘಟಕದ ಅಧ್ಯಕ್ಷರಾಗಿದ್ದ ವಿಜಯ ಗುಂಟ್ರಾಳ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ನಡುವಿನ ತಿಕ್ಕಾಟ ಮತ್ತೊಂದು ಹಂತಕ್ಕೆ ತಲುಪಿದೆ.
2 ವರ್ಷಗಳ ಹಿಂದಿನವರೆಗೆ ಗುಂಟ್ರಾಳಗೆ ‘ಅಭಯ’ ವಾಗಿದ್ದ ಪ್ರಸಾದ ಈಗ ಅವರನ್ನು ಪಕ್ಷದಿಂದ ಉಚ್ಚಾಟಿಸಲು ಕಾರಣರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಗುಂಟ್ರಾಳ, ಶಾಸಕರ ವಿರುದ್ಧ ನೇರವಾಗಿ ಆರೋಪ ಮಾಡಿದ್ದರು. ಆರೋಪಗಳ ಸರಣಿಯು ಉಚ್ಚಾಟನೆಯಲ್ಲಿ ಕೊನೆಗೊಂಡಿದೆ.
ಪೌರ ಕಾರ್ವಿುಕರ ನೇರ ನೇಮಕಾತಿ ಹಾಗೂ ನೇರ ವೇತನ ಪಾವತಿಗೆ ಸಂಬಂಧಿಸಿದಂತೆ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ವಿರುದ್ಧ ಗುಂಟ್ರಾಳ ಹೋರಾಟ ರೂಪಿಸಿದ್ದರು. ಅದು ವಿಕೋಪಕ್ಕೆ ತಿರುಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಆಗ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿತ್ತು. ಈ ಹಂತದಲ್ಲಿ ಗುಂಟ್ರಾಳ ಬಂಧನಕ್ಕೆ ಒಳಗಾಗದಂತೆ ಪ್ರಸಾದ ಅಬ್ಬಯ್ಯ ರಕ್ಷಣೆ ಮಾಡಿಕೊಂಡು ಬಂದಿದ್ದು ಸುಳ್ಳಲ್ಲ.
3 ವರ್ಷದ ಹಿಂದೆ ಪಾಲಿಕೆಯ ಮಹಿಳಾ ಅಧಿಕಾರಿಯೊಬ್ಬರು ತಾನು ಕರ್ತವ್ಯದಲ್ಲಿದ್ದಾಗ ಕಾರ್ವಿುಕರಿಗೆ ನಿರ್ದೇಶನ ನೀಡಿದ್ದಕ್ಕೆ ಸಂಬಂಧಿಸಿ ವಿಜಯ ಗುಂಟ್ರಾಳ ಜಗಳ ತೆಗೆದು, ದಂಡುಪಾಳ್ಯದವರ ರೀತಿಯಲ್ಲಿ ಹಲ್ಲೆ ಮಾಡುವ ಬೆದರಿಕೆ ಹಾಕಿದ್ದಾಗಿ ಪೊಲೀಸ್ ದೂರು ನೀಡಿದ್ದರು. ಆಗಲೂ ವಿಜಯ ಗುಂಟ್ರಾಳ ಬಂಧನವಾಗದಂತೆ ಶಾಸಕರು ಅಭಯ ನೀಡಿದ್ದರು ಎಂದು ಕೇಳಿಬಂದಿತ್ತು.
ಇತ್ತೀಚೆಗೆ 2 ತಿಂಗಳಿಂದ ಗುಂಟ್ರಾಳ, ಶಾಸಕರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಗುತ್ತಿಗೆ ಪೌರ ಕಾರ್ವಿುಕ ಪದ್ಧತಿ ರದ್ದುಪಡಿಸಿ ನೇರ ನೇಮಕಾತಿ ಮಾಡುವ ಸರ್ಕಾರದ ಆದೇಶ ಅನುಷ್ಠಾನಗೊಳ್ಳುವ ಹಂತದಲ್ಲಿ ಇರುವಾಗ ನಮ್ಮ ಹೋರಾಟದ ಲಾಭವನ್ನು ಪಡೆಯಲು ಶಾಸಕರು ಕುತಂತ್ರ ನಡೆಸಿದ್ದಾರೆ ಎಂದು ಗುಂಟ್ರಾಳ ನೇರವಾಗಿ ಆರೋಪಿಸಿದ್ದರು, ಶನಿವಾರ ಸುದ್ದಿಗೋಷ್ಠಿ ನಡೆಸಿ ಶಾಸಕರಿಗೆ ನೇರ ಸವಾಲು ಹಾಕಿ, ಕೆಂಗಣ್ಣಿಗೆ ಗುರಿಯಾಗಿದ್ದರು.
* ಕಾನೂನು ಬಾಹಿರ: ಕಾಂಗ್ರೆಸ್ನಿಂದ ಉಚ್ಚಾಟನೆ ಮಾಡಿರುವ ಸಂಗತಿಯನ್ನು ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರ ಗಮನಕ್ಕೆ ತಂದು ಪಕ್ಷದಲ್ಲಿ ಮುಂದುವರಿಯುತ್ತೇನೆ. ನನ್ನನ್ನು ಉಚ್ಚಾಟನೆ ಮಾಡುವ ಅಧಿಕಾರ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗಿಲ್ಲ. ನೋಟಿಸ್ ನೀಡದೇ ಏಕಾಏಕಿ ಉಚ್ಚಾಟನೆ ಮಾಡಿರುವುದು ಕಾನೂನು ಬಾಹಿರ ಎಂದು ಗುಂಟ್ರಾಳ ಹೇಳಿದ್ದಾರೆ.