ಜಿಲ್ಲೆ

ಶಾಶ್ವತ ಮಳಿಗೆ ಕೇಂದ್ರ ನಿರ್ಮಿಸೋಣ

ಕಲಬುರಗಿ: ಸಣ್ಣ, ಮಧ್ಯಮ ಉದ್ಯಮ ಮಾಡುವವರಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ನಗರದಲ್ಲಿ ಶಾಶ್ವತ ಮಾರುಕಟ್ಟೆ ಒದಗಿಸಲು ಅನುದಾನ ನೀಡಲಾಗುವುದು. ಸರ್ಕಾರದ ಮಟ್ಟದಲ್ಲಿ ನಿವೇಶನಕ್ಕೆ ಪ್ರಯತ್ನಿಸಲಾಗುವುದು ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಭರವಸೆ ನೀಡಿದರು.

ನಗರದ ಬಾಪುಗೌಡ ದರ್ಶನಾಪುರ ರಂಗಮಂದಿರದಲ್ಲಿ ಎಸ್‌ಐಡಿಬಿಐ, ಅವೇಕ್ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಯೋಗದಲ್ಲಿ ಹಮ್ಮಿಕೊಂಡಿರುವ ಮೂರು ದಿನದ ಸ್ವಾವಲಂಬನ ಮೇಳವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಮನೆಯಲ್ಲಿ ಸಿದ್ಧಪಡಿಸಿ, ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸುವ ಜತೆಗೆ ಗುಣಮಟ್ಟವನ್ನು ಕಾಪಾಡುತ್ತಾರೆ. ಅವರಿಗೆ ಸೂಕ್ತ ಪ್ರೋತ್ಸಾಹ ಅವಶ್ಯ ಎಂದು ಹೇಳಿದರು.

ಜೀವನ ರೂಪಿಸಿಕೊಳ್ಳುವ ಜತೆಗೆ ಇತರರಿಗೆ ಉದ್ಯೋಗ ಒದಗಿಸಿ ಅವರ ಜೀವನಕ್ಕೂ ಆಸರೆಯಾಗುವ ಮಹಿಳೆಯರು ಗುಣಮಟ್ಟದ ಸಾಮಗ್ರಿ ಸಿದ್ಧಪಡಿಸುತ್ತಾರೆ. ಸ್ವದೇಶಿ ಚಿಂತನೆ ಇಲ್ಲಿಂದಲೇ ಪ್ರಾರಂಭವಾಗುತ್ತದೆ. ಸಾರ್ವಜನಿಕರು ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿ, ಪ್ರೋತ್ಸಾಹಿಸಿದರೆ ಸ್ವದೇಶಿ ಉಳಿಯುತ್ತದೆ ಎಂದು ಹೇಳಿದರು.

ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಪಾಟೀಲ್ ಮಾತನಾಡಿ, ಸಣ್ಣ ಮಧ್ಯಮ ಕೈಗಾರಿಕೆಗಳಿಗೆ ಉತ್ತಮ ಅವಕಾಶಗಳಿವೆ. ಮಹಿಳೆಯರು ಸಿದ್ಧಪಡಿಸುವ ಉತ್ಪನ್ನಗಳಿಗೆ ಮಾರುಕಟ್ಟೆ, ಹಣಕಾಸಿನ ನೆರವು ದೊರೆಯಬೇಕು. ಕೇಂದ್ರ ಸರ್ಕಾರದ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಮೇಳ ಮಾಡಲು ಕೆಕೆಸಿಸಿಐನಿಂದ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಅವೇಕ್ ಜಂಟಿ ಕಾರ್ಯದರ್ಶಿ ರೇಣುಕಾ ಮನೋಜ ಅಧ್ಯಕ್ಷತೆ ವಹಿಸಿದ್ದರು. ಸಿಡ್ಬಿ ಡಿಜಿಎಂ ಬಿ.ಉಳಗಿಯನ್, ಪ್ರಾದೇಶಿಕ ಅಧಿಕಾರಿ ಸಿ.ಮಹೇಶ, ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಸತೀಶಕುಮಾರ, ನಮೃತಾ ಪಟಾಟೆ ಇತರರಿದ್ದರು. ಉಷಾ ಸುರೇಶ ಸ್ವಾಗತಿಸಿದರು.