ಚಿತ್ರದುರ್ಗ: ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಪೂರ್ಣ ಮಾಹಿತಿ ಸಂಗ್ರಹಿಸಿ, ವಿವಿಧ ಕಾರ್ಯತಂತ್ರದ ಮೂಲಕ ಮುಖ್ಯವಾಹಿನಿಗೆ ತನ್ನಿ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಸಕ್ತ ಸಾಲಿನ 2ನೇ ತ್ರೈಮಾಸಿಕ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.
ಶಾಲೆಯಿಂದ ಹೊರಗುಳಿದ ಮಕ್ಕಳು ಬಾಲ್ಯವಿವಾಹ, ಬಾಲ ಕಾರ್ಮಿಕರಾಗುವ ಸಾಧ್ಯತೆ ಇದೆ. ಆದ್ದರಿಂದ ಹೊರಗುಳಿಯಲು ಕಾರಣವೇನು ಎಂಬ ಕುರಿತು ಹೆಚ್ಚು ಗಮನ ಹರಿಸಬೇಕು ಎಂದರು.
ಹೊರಗುಳಿದ ಮಕ್ಕಳ ಮಾಹಿತಿ ತಾಲೂಕುವಾರು ಸಂಗ್ರಹಿಸಿ, ವಾರದೊಳಗೆ ವರದಿ ನೀಡಿ. ಜಿಲ್ಲೆಯಲ್ಲಿ ಯಾವ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಈ ಕುರಿತು ಕ್ರಮವಹಿಸಿ ಎಂದು ತಾಕೀತು ಮಾಡಿದರು.
ಶಿಕ್ಷಣ ಇಲಾಖೆಯ ಡಿವೈಪಿಸಿ ವೆಂಕಟೇಶ್ ಮಾತನಾಡಿ, ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಕ್ರಮವಹಿಸಲಾಗಿದ್ದು, ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ 489ರ ಪೈಕಿ 27 ಮಕ್ಕಳು ಮಾತ್ರ ಪ್ರವೇಶಾತಿ ಪಡೆಯುವುದು ಬಾಕಿ ಇದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್ ಮಾತನಾಡಿ, ಶಾಲೆಯಿಂದ ಹೊರಗುಳಿದ 11ರಿಂದ 18 ವರ್ಷದ ಕಿಶೋರಿಯರ ಮಾಹಿತಿ ಸಂಗ್ರಹಿಸಲು ಈಗಾಗಲೇ ಸಿಡಿಪಿಒಗಳಿಗೆ ಸೂಚಿಸಲಾಗಿದೆ. ತ್ವರಿತವಾಗಿ ನೀಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ ಮಾತನಾಡಿ, ಮಕ್ಕಳ ಕಲ್ಯಾಣ ಸಮಿತಿ ಮುಂದೆ 2023-24ನೇ ಸಾಲಿನಲ್ಲಿ 16 ಮಕ್ಕಳು ಹಾಜರಾಗಿದ್ದು, ಅದರಲ್ಲಿ ಇಬ್ಬರಿಗೆ 18 ವರ್ಷ ಪೂರ್ಣಗೊಂಡಿದೆ. 13 ಮಕ್ಕಳು ಪೋಷಕರ ವಶದಲ್ಲಿದ್ದು, ವಿದ್ಯಾಭ್ಯಾಸದ ಕುರಿತು ಸಮಿತಿಗೆ ವರದಿ ಸಲ್ಲಿಸಲಾಗಿದೆ. 1 ಮಗು ಪಶ್ಚಿಮ ಬಂಗಾಳ ರಾಜ್ಯದ ಕುಚ್ ಬಿಹಾರ್ ಜಿಲ್ಲೆಯಲ್ಲಿನ ಸಮಿತಿಗೆ ವರ್ಗಾಯಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಮಿತಿ ಸದಸ್ಯ ಹೇಮೇಗೌಡರು ಮಾತನಾಡಿ, ನಿಗಮ ಮಂಡಳಿಯಲ್ಲಿರುವ ವಿವಿಧ ಯೋಜನೆಗಳ, ಫಲಾನುಭವಿ ಆಗಲು ಇರಬೇಕಾದ ಅರ್ಹತೆ, ಮಾನದಂಡಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ಕೊರತೆ ಇದೆ. ಆದ್ದರಿಂದ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಒತ್ತಾಯಿಸಿದರು.
ಫಲಾನುಭವಿ ಯೋಜನೆಯಿಂದ ಹೊರಗುಳಿಯದಂತೆ ಎಚ್ಚರವಹಿಸಿ. ನಿಗಮ ಮಂಡಳಿಗಳಲ್ಲಿನ ಯೋಜನೆಗಳ ಕುರಿತು ಗ್ರಾಪಂ ಪ್ರಕಟಣೆ ಫಲಕ, ಪತ್ರಿಕೆಗಳಲ್ಲಿ ಪ್ರಕಟವಾದ ವರದಿ ನೀಡುವಂತೆ ನಿಗಮ ಮಂಡಳಿ ಜಿಲ್ಲಾ ವ್ಯವಸ್ಥಾಪಕರಿಗೆ ಡಿಸಿ ಸೂಚಿಸಿದರು.
ಗ್ರಾಮೀಣ ಪ್ರದೇಶಗಳ ಕೆಲ ಅಂಗಡಿಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡಲಾಗುತ್ತ್ತಿದೆ. ಇದರಿಂದ ಎಸ್ಸಿ ಸಮುದಾಯದ ಶೇ. 90ರಷ್ಟು ಜನ ದುಶ್ಚಟಕ್ಕೆ ಒಳಗಾಗುತ್ತಿದ್ದಾರೆ. ಇದನ್ನು ತಡೆಯಲು ಕ್ರಮವಹಿಸಬೇಕು ಎಂದು ಮನವಿ ಮಾಡಿದರು.
ಬಾಲಕಾರ್ಮಿಕರ ಪತ್ತೆ ತ್ವರಿತವಾಗಲಿ: ಬಾಲಕಾರ್ಮಿಕರ ಪತ್ತೆ ತ್ವರಿತವಾಗಿ ಆಗಬೇಕು. ಅದಕ್ಕಾಗಿ ಕಾರ್ಮಿಕಾಧಿಕಾರಿ ವಿವಿಧ ಇಲಾಖೆ ಅಧಿಕಾರಿಗಳ ಸಮನ್ವಯದೊಂದಿಗೆ ತಪಾಸಣೆ ಕಾರ್ಯ ನಡೆಸಬೇಕು ಎಂದು ಡಿಸಿ ಸೂಚಿಸಿದರು.
ಯಾವ್ಯಾವ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗಿದೆ. ಎಷ್ಟು ಮಕ್ಕಳನ್ನು ರಕ್ಷಿಸಲಾಗಿದೆ. ಈವರೆಗೂ ಎಷ್ಟು ಪ್ರಕರಣ ದಾಖಲಿಸಲಾಗಿದೆ. ಮುನ್ನೆಚ್ಚರಿಕೆಯಾಗಿ ಕೈಗೊಂಡ ಕ್ರಮಗಳೇನು ಎಂದು ವೆಂಕಟೇಶ್ ಪ್ರಶ್ನಿಸಿದರು. ಕಳೆದ 15 ದಿನಗಳಿಂದ ಬಾಲಕಾರ್ಮಿಕರು ಕಂಡು ಬಂದಿಲ್ಲ ಎಂದು ಕಾರ್ಮಿಕ ಅಧಿಕಾರಿಗಳು ಮಾಹಿತಿ ನೀಡಿದರು.
ಎಡಿಸಿ ಬಿ.ಟಿ.ಕುಮಾರಸ್ವಾಮಿ, ಎಸ್‌ಪಿ ಧರ್ಮೇಂದರ್‌ಕುಮಾರ್ ಮೀನಾ, ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಮಂಜುನಾಥ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್, ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್, ಸಮಿತಿ ಸದಸ್ಯರಾದ ಚಿನ್ನಪ್ಪ, ಗುಜ್ಜಾರಪ್ಪ ಇತರರಿದ್ದರು.