ಜಿಲ್ಲೆ

ಶಾಲೆಯಲ್ಲಿ ‘ಓದುವ ಹವ್ಯಾಸ ಜ್ಞಾನದ ವಿಕಾಸ’

ಮಂಜುನಾಥ ತಿಮ್ಮಯ್ಯ ಮೈಸೂರು

ಶಾಲಾ ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸಲು ‘ಓದುವ ಹವ್ಯಾಸ ಜ್ಞಾನದ ವಿಕಾಸ’ ಕಾರ್ಯಕ್ರಮ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ಬಂದಿದೆ. ಪ್ರತಿ ತರಗತಿಗೆ ವಾರಕ್ಕೆ ಒಂದು ಗ್ರಂಥಾಲಯ ಅವಧಿ ನಿಗದಿಪಡಿಸಲಾಗಿದೆ.

ಪ್ರತಿ ಶಾಲೆಯಲ್ಲೂ ಕಡ್ಡಾಯವಾಗಿ ಗ್ರಂಥಾಲಯವನ್ನು ಸ್ಥಾಪಿಸಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಅದನ್ನು ಮಕ್ಕಳು ನಿರಂತರವಾಗಿ ಬಳಸಿಕೊಳ್ಳುವಂತೆ ನೋಡಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಮಕ್ಕಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ವಿದ್ಯಾರ್ಥಿಗಳ ಜ್ಞಾನ, ಬುದ್ಧಿ, ಮೌಲ್ಯದ ಕ್ರಿಯಾಶೀಲ ವಿಕಸನಕ್ಕಾಗಿ ಪಠ್ಯಕ್ರಮಗಳ ಓದಿನ ಜತೆಗೆ ಇತರ ಪೂರಕ ಪುಸ್ತಕಗಳನ್ನು ಓದುವುದು ಅವಶ್ಯವಾಗಿದೆ. ಪುಸ್ತಕ ಓದುವ ಹವ್ಯಾಸವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವಲ್ಲಿ ಶಾಲಾ ಗ್ರಂಥಾಲಯಗಳು ಮಹತ್ವದ ಪಾತ್ರ ವಹಿಸುತ್ತದೆ.

ಗ್ರಂಥಾಲಯಗಳು ಜ್ಞಾನ ಭಂಡಾರ ಅಷ್ಟೇ ಅಲ್ಲ, ಬದಲಿಗೆ ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಪೂರಕವಾಗಿವೆ. ಜತೆಗೆ ಓದುವ ಹವ್ಯಾಸವು ಮಕ್ಕಳಲ್ಲಿ ಶಬ್ದ ಭಂಡಾರ ವೃದ್ಧಿಸಿ, ನಿರರ್ಗಳತೆ, ಗ್ರಹಿಕಾ ಸಾಮರ್ಥ್ಯ, ಏಕಾಗ್ರತೆಯ ಶಕ್ತಿ, ಭಾಷಾ ಕೌಶಲ, ಸೃಜನಾತ್ಮಕ ಬರವಣಿಗೂ ಪೂರಕವಾಗಿದೆ.

ಬೌದ್ಧಿಕ ಕೌಶಲಗಳಾದ ವಿಮರ್ಶಾತ್ಮಕ ಚಿಂತನೆ, ತಾರ್ಕಿಕತೆ, ವಿಶ್ಲೇಷಣಾತ್ಮಕ ಸಾಮರ್ಥ್ಯ, ಸಾರಾಂಶ ಮಾಡುವ ಕ್ಷಮತೆ, ಕಲ್ಪನಾ ಶಕ್ತಿ, ಸೃಜನಶೀಲತೆ, ಸಹಾನುಭೂತಿ ಬೆಳೆಸುತ್ತದೆ. ಈ ಎಲ್ಲ ಉದ್ದೇಶ, ಗುರಿಯನ್ನು ಸಾಧಿಸಲು ಶಾಲಾ ಶಿಕ್ಷಣ ಇಲಾಖೆ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ.

ಕೆಲ ಕಡೆ ತೊಡಕು:

ಸರ್ಕಾರಿ ಶಾಲೆಗಳಲ್ಲಿ ಈ ಕಾರ್ಯಕ್ರಮ ಜಾರಿ ಮಾಡಲಾಗುತ್ತಿದ್ದು, ಈಗಾಗಲೇ ಖಾಸಗಿ ಶಾಲೆಗಳಲ್ಲಿ ಗ್ರಂಥಾಲಯ ಸೌಲಭ್ಯ ಇದೆ. ಅದರ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳುತ್ತಿದ್ದಾರೆ. ಅದೇ ರೀತಿ ಸರ್ಕಾರಿ ಶಾಲಾ ಮಕ್ಕಳು ಗ್ರಂಥಾಲಯ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳುವುದರೊಂದಿಗೆ ಓದುವ ಸಂಸ್ಕೃತಿ ಮೈಗೂಡಿಸಿಕೊಳ್ಳಲು ಉತ್ತೇಜನ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಅಧೀನದಲ್ಲಿ 2,112 ಸರ್ಕಾರಿ, 267 ಅನುದಾನಿತ ಶಾಲೆಗಳಿವೆ. ಈ ಸ್ಕೂಲ್‌ಗಳನ್ನು ಹೆಚ್ಚು ಕೇಂದ್ರೀಕರಿಸಲಾಗಿದೆ. ಎಲ್ಲ ಶಾಲೆಗಳಲ್ಲೂ ಈ ಕಾರ್ಯಕ್ರಮವನ್ನು ಶುರು ಮಾಡಲಾಗುತ್ತಿದೆ. ಕೆಲವೆಡೆ ಪುಸ್ತಕ ಕೊರತೆ, ಕೊಠಡಿಗಳ ಅಲಭ್ಯತೆ, ಜಾಗದ ಸಮಸ್ಯೆ ಎದುರಾಗಿವೆ. ಹೀಗೆ ವಿವಿಧ ರೀತಿಯ ತೊಡಕಗಳ ನಡುವೆ ಕಾರ್ಯಕ್ರಮ ಹಂತಹಂತವಾಗಿ ಕಾರ್ಯರೂಪಕ್ಕೆ ಬರುತ್ತಿದೆ.

ಕವಿತೆ, ನಾಟಕ, ಕಾಮಿಕ್..!

ಕಾಲ್ಪನಿಕ, ವಾಸ್ತವಿಕ, ಅವಾಸ್ತವಿಕ, ಪರಿಕಲ್ಪನೆ, ಜಾನಪದ, ಕವನ, ಕವಿತೆ, ನಾಟಕ, ಕಾಮಿಕ್ ಹೀಗೆ ಎಲ್ಲ ಪ್ರಕಾರಗಳ ಪುಸ್ತಕಗಳು ಗ್ರಂಥಾಲಯಗಳು ಅಥವಾ ಓದುವ ಮೂಲೆಗಳಲ್ಲಿ ಲಭ್ಯ ಇರುವಂತೆ ನೋಡಿಕೊಳ್ಳಲಾಗಿದೆ.

10ನೇ ತರಗತಿಯ ಮಕ್ಕಳಿಗೆ ‘ಎಸ್ಸೆಸ್ಸೆಲ್ಸಿ ನಂತರ ಮುಂದೇನು?’ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನಗಳು ನಡೆದಿದ್ದು, ಭವಿಷ್ಯದ ವ್ಯಾಸಂಗಕ್ಕೆ ಮಾರ್ಗದರ್ಶನವಾಗಿ, ಸ್ವಾತಂತ್ರೃವಾಗಿ ನಿರ್ಧರಿಸಲು ಸಹಾಯವಾಗುವಂತಹ ಪೂರಕ ಪುಸ್ತಕ, ದಾಖಲೆ ಸಂಗ್ರಹಿಸಿಡಲಾಗಿದೆ.

ಗ್ರಂಥಾಲಯ ಅನುದಾನ, ವಿದ್ಯಾರ್ಥಿಗಳಿಂದ ಸಂಗ್ರಹಿಸಿರುವ ರೀಡಿಂಗ್ ರೂಂ ನಿಧಿಯ ಹಣವನ್ನು ಬಳಸಿ ಗುಣಮಟ್ಟದ ಓದುವ ಸಾಮಗ್ರಿ ಖರೀದಿಸಲು ಆಯಾ ಶಾಲೆಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಶಿಕ್ಷಣ ಇಲಾಖೆ ಸಹ ಗುಣಮಟ್ಟದ ಪುಸ್ತಕಗಳ ಪಟ್ಟಿಯನ್ನು ನೀಡಿದೆ. ಸರ್ಕಾರೇತರ ಸಂಸ್ಥೆಗಳ ಸಹಕಾರ ಪಡೆದುಕೊಳ್ಳಲು ಸಹ ಸೂಚಿಸಲಾಗಿದೆ.

ಮಕ್ಕಳ ಕೈಗೆ ಸಿಗುವಂತಿರಬೇಕು:

ಶಾಲೆಯಲ್ಲಿ ಮಕ್ಕಳಸ್ನೇಹಿ ಗ್ರಂಥಾಲಯ ಸ್ಥಾಪಿಸಲು ಒಂದು ಸ್ಥಳ ನಿಗದಿ ಪಡಿಸಲಾಗಿದೆ. ಯಾವುದೇ ಅಡಚಣೆ ಇಲ್ಲದೆ ಸ್ವಾತಂತ್ರೃವಾಗಿ ಈ ಸ್ಥಳವನ್ನು ಮಕ್ಕಳು ಬಳಸಿಕೊಳ್ಳುವಂತೆ ನೋಡಿಕೊಳ್ಳಲಾಗುತ್ತಿದೆ. ಪುಸ್ತಕ ಸಾಮಗ್ರಿಯನ್ನು ಕಪಾಟುಗಳಲ್ಲಿ ಮುಚ್ಚಿಡುವುದು, ಕೀಲಿ ಹಾಕುವುದನ್ನು ನಿರ್ಬಂಧಿಸಲಾಗಿದೆ. ಪುಸ್ತಕಗಳು ಮಕ್ಕಳ ಕೈಗೆ ಸುಲಭವಾಗಿ ದೊರೆಯುವಂತೆ ಪ್ರದರ್ಶಿಸಬೇಕು ಎಂಬ ನಿರ್ದೇಶನ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಡಿಡಿಪಿಐ ಎಸ್.ಟಿ.ಜವರೇಗೌಡ ತಿಳಿಸಿದ್ದಾರೆ.

ಶಾಲಾ ವೇಳಾಪಟ್ಟಿಯಲ್ಲೂ ಬದಲು:

ಈ ಕಾರ್ಯಕ್ರಮಕ್ಕಾಗಿ ಶಾಲಾ ವೇಳಾಪಟ್ಟಿಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. 1ರಿಂದ 3ನೇ ತರಗತಿಯ ಮಕ್ಕಳಿಗೆ ಪ್ರತಿ ಶುಕ್ರವಾರ ಮಧ್ಯಾಹ್ನ 3.10ಕ್ಕೆ, 4ನೇ ತರಗತಿಗೆ ಪ್ರತಿ ಸೋಮವಾರ ಮಧ್ಯಾಹ್ನ 3.50ಕ್ಕೆ, 5ನೇ ತರಗತಿಗೆ ಪ್ರತಿ ಶುಕ್ರವಾರ ಮಧ್ಯಾಹ್ನ 3.50ಕ್ಕೆ, 6,7,8ನೇ ತರಗತಿಗೆ ಪ್ರತಿ ಗುರುವಾರ ಮಧ್ಯಾಹ್ನ 3.50ಕ್ಕೆ, 9, 10ನೇ ತರಗತಿಗೆ ಪ್ರತಿ ಮಂಗಳವಾರ ಮಧ್ಯಾಹ್ನ 3.50ಕ್ಕೆ ಗ್ರಂಥಾಲಯ ಅವಧಿಯನ್ನು ನಿಗದಿಪಡಿಸಲಾಗಿದೆ. ಗ್ರಂಥಾಲಯ ಅವಧಿ 30ರಿಂದ 40 ನಿಮಿಷದವರೆಗೆ ಇರುತ್ತದೆ.

ಮನೆಗೂ ತೆಗೆದುಕೊಂಡು ಹೋಗಬಹುದು?

ಮುಖ್ಯ ಶಿಕ್ಷಕರು ಇದನ್ನು ನಿರ್ವಹಣೆ ಮಾಡುತ್ತಿದ್ದು, 1ರಿಂದ 3ನೇ ತರಗತಿಯ ನಲಿಕಲಿ ಶಿಕ್ಷಕರು, 4ರಿಂದ 10ನೇ ತರಗತಿಯ ಭಾಷಾ ಶಿಕ್ಷಕರು ಇದರ ನಿರ್ವಹಣಾ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಪುಸ್ತಕಗಳ ನಿರ್ವಹಣೆ ವಹಿ, ರಿಜಿಸ್ಟರ್ ಪಾಲನೆ ಮಾಡಬೇಕಿದೆ. ಮನೆೆಗೆ ಪುಸ್ತಕಗಳನ್ನು ಮಕ್ಕಳಿಗೆ ತೆಗೆದುಕೊಂಡು ಹೋಗಲು ಅವಕಾಶ ನೀಡಿದ್ದು, ಅದಕ್ಕಾಗಿ ಪ್ರತಿ ಮಗುವಿಗೆ ಪುಸ್ತಕ ವಿತರಣಾ ಕಾರ್ಡ್ ನಿರ್ವಹಿಸಲಾಗುತ್ತಿದೆ. ಆದರೆ ಇದು ಶಿಕ್ಷಕರಿಗೆ ಹೆಚ್ಚಿನ ಹೊರೆಯಾಗಿದೆ ಎಂದು ಶಿಕ್ಷಕರೊಬ್ಬರು ತಿಳಿಸಿದ್ದಾರೆ.

ಪುಸ್ತಕ ಕಳೆದರೆ ಏನು?

ಪುಸ್ತಕ ಕಳೆದು ಹೋದರೆ ಏನು ಮಾಡುವುದು ಎಂಬ ಪ್ರಶ್ನೆಗೂ ಉತ್ತರ ಕಂಡುಕೊಳ್ಳಲಾಗಿದೆ. ಪ್ರತಿ ವರ್ಷದಲ್ಲಿ ಒಂದು ಸಾವಿರ ಪುಸ್ತಕ ಎರವಲು ನೀಡಿದರೆ ಮೂರು ಪುಸ್ತಕ ಕಳೆದುಹೋದರೆ ದಾಸ್ತಾನಿನಿಂದ ವಜಾ ಮಾಡಲು ಅನುಮತಿ ಇದೆ.

200 ರೂ.ಗೆ ಮೇಲ್ಪಟ್ಟ ಮೊತ್ತದ ಪುಸ್ತಕವಾಗಿದ್ದಲ್ಲಿ, ಅತಿ ಅಗತ್ಯವಾದ, ಮುದ್ರಣ ಸ್ಥಗಿತವಾಗಿರುವ ಪುಸ್ತಕವಾಗಿದ್ದಲ್ಲಿ ಆ ಪುಸ್ತಕಗಳ ಹೊಣೆ ಮುಖ್ಯಶಿಕ್ಷಕರು ತೆಗೆದುಕೊಳ್ಳಬೇಕಾಗುತ್ತದೆ. ಶಿಕ್ಷಕರ ತಪ್ಪು ಇಲ್ಲದಿದ್ದಲ್ಲಿ ಪುಸ್ತಕಗಳನ್ನು ದಾಸ್ತಾನು ರಿಜಿಸ್ಟರ್‌ನಿಂದ ತೆಗೆದುಹಾಕಬಹುದಾಗಿದೆ.
‘ಓದುವ ಹವ್ಯಾಸ ಜ್ಞಾನದ ವಿಕಾಸ’ ಕಾರ್ಯಕ್ರಮವನ್ನು ಎಲ್ಲ ಶಾಲೆಯಲ್ಲಿ ಅನುಷ್ಠಾನಗೊಳಿಸಲು ಸೂಚನೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಕ್ರಮ ವಹಿಸಿದ್ದು, ಈ ಕಾರ್ಯಕ್ರಮಕ್ಕೆ ಮಕ್ಕಳಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಅವರೆಲ್ಲ ಸಂತಸಗೊಂಡಿದ್ದಾರೆ. ಎಸ್.ಟಿ. ಜವರೇಗೌಡ ಉಪನಿರ್ದೇಶಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ