ಜಗದೀಶ ಖೊಬ್ರಿ ತೆಲಸಂಗ: ಪ್ರತಿ ದಿನ 16 ಕಿ.ಮೀ ನಡೆದು ಶಾಲೆಗೆ ಹೋಗಿ ಬರುವ ಮೂಲಕ ವಿದ್ಯಾಭ್ಯಾಸ ಕಲಿಯಬೇಕಾದ ದುಸ್ಥಿತಿ ಸಮೀಪದ ಖಿಲಾರದಡ್ಡಿ ಗ್ರಾಮದ ಮಕ್ಕಳದ್ದಾಗಿದೆ.
2,800 ಜನರಿರುವ ಗ್ರಾಮದಲ್ಲಿ ಇಲ್ಲಿಯವರೆಗೆ ಬಸ್ ವ್ಯವಸ್ಥೆ ಇಲ್ಲದ ಕಾರಣ, ಗ್ರಾಮದ 280 ವಿದ್ಯಾರ್ಥಿಗಳು ಪ್ರತಿದಿನ ನಡೆದುಕೊಂಡು ಶಾಲೆಗೆ ಹೋಗಬೇಕಾಗಿದೆ. ಕಾರಣ, ಅನೇಕ ಮಕ್ಕಳು ಶಾಲೆಗಳನ್ನು ತೊರೆಯಲು ಮುಂದಾಗಿದ್ದಾರೆ.
ಗ್ರಾಮದಲ್ಲಿ 5ನೇ ತರಗತಿ ವರೆಗೆ ಮಾತ್ರ ಶಾಲೆ ಇದೆ. ನಂತರದ ಶಿಕ್ಷಣಕ್ಕೆ ತೆಲಸಂಗ, ಐಗಳಿ, ಅಥಣಿ, ವಿಜಯಪುರ ಹೀಗೆ ಬೇರೆ ಬೇರೆ ಕಡೆ ತೆರಳಬೇಕಾದ ಅನಿವಾರ್ಯತೆ ಗ್ರಾಮದ ಮಕ್ಕಳದ್ದು. ಗ್ರಾಮದಿಂದ 1 ಕಿ.ಮೀ ನಡೆದು ಕೊಂಡು ಹೋಗಿ ರಾಜ್ಯ ಹೆದ್ದಾರಿ ತಲುಪಬೇಕು. ಆದರೆ, ಅಲ್ಲಿ ಬಸ್ ನಿಲ್ಲಿಸುವುದಿಲ್ಲ. ಇದರಿಂದ ವಿದ್ಯಾರ್ಥಿಗಳು ಪ್ರತಿದಿನ 8 ಕಿ.ಮೀ ನಡೆಯಲೇಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಹೆಚ್ಚಿಗೆ ದುಡ್ಡು ಖರ್ಚು ಮಾಡಿ ಖಾಸಗಿ ವಾಹನದ ಮೂಲಕ ಪ್ರಯಾಣಿಸಬೇಕು, ಅಥವಾ 8 ಕಿ.ಮೀ ನಡಿಗೆ ಅನಿವಾರ್ಯವಾಗಿದೆ.
ಹುಡುಗಿಯರು ತೋಟ ಪಟ್ಟಿಯ ಮೂಲಕ ಹಾದು ಹೋಗಬೇಕಾಗುತ್ತದೆ. ಅಲ್ಲಿ ರಸ್ತೆ ಪಕ್ಕದ ಕುಳಿತ ಪುಂಡರು ಯುವತಿಯರನ್ನು ಚುಡಾಯಿಸುತ್ತಾರೆ. ಇದರಿಂದ ಒಬ್ಬೊಬ್ಬ ಹುಡುಗಿಯರು ನಡೆದುಕೊಂಡ ಹೋಗದ ಸ್ಥಿತಿ ಎದುರಾಗಿದೆ. ಇಂತಹ ಕಷ್ಟದಲ್ಲಿ ವಿದ್ಯಾರ್ಥಿನಿಯರು ಶಾಲೆ ತೊರೆದು ಜಮೀನುಗಳಲ್ಲಿ ಕೆಲಸಕ್ಕೆ ತೆರಳುತ್ತಿದ್ದಾರೆ.