ಮುಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಡೀಪ್ ಕ್ಲೀನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಲಾ ವಿದ್ಯಾರ್ಥಿಗಳು. 
ಜಿಲ್ಲೆ

ಶಾಲೆಗಳಲ್ಲಿ ಡೀಪ್ ಕ್ಲೀನ್ ಕಾರ್ಯಕ್ರಮ

ಶನಿವಾರಸಂತೆ: ಮೇ 31 ರಿಂದ ಪ್ರಸ್ತುತ ಶೈಕ್ಷಣಿಕ ಸಾಲಿನ ತರಗತಿಗಳ ಪ್ರಾರಂಭೋತ್ಸವ ಹಿನ್ನೆಲೆಯಲ್ಲಿ ಸೋಮವಾರ ಶನಿವಾರಸಂತೆ ವ್ಯಾಪ್ತಿಯ ವಿವಿಧ ಸರ್ಕಾರಿ ಶಾಲೆಗಳಲ್ಲಿ ಡೀಪ್ ಕ್ಲೀನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಳೆದ ಒಂದೂವರೆ ತಿಂಗಳಿನಿಂದ ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿ ಬೇಸಿಗೆ ರಜೆಯಲ್ಲಿದ್ದರು. ಈ ಹಿನ್ನೆಲೆ ಶಾಲೆಗಳಲ್ಲಿ ಡೀಪ್ ಕ್ಲೀನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು. ಶಾಲಾ ಆವರಣ, ಕೊಠಡಿ, ನೀರಿನ ಟ್ಯಾಂಕ್, ಶೌಚಗೃಹಗಳನ್ನು ಸ್ವಚ್ಛಗೊಳಿಸಲಾಯಿತು. ನಿಡ್ತ ಗ್ರಾ.ಪಂ.ವ್ಯಾಪ್ತಿಯ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಬೆಳಗ್ಗೆ ಶಾಲಾ ಶಿಕ್ಷಕರು, ಸಿಬ್ಬಂದಿ. ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಅಕ್ಷರ ದಾಸೋಹದ ಅಡುಗೆ ಸಿಬ್ಬಂದಿ, ಪಾಲಕರು ಮತ್ತು ಶಾಲೆಯ ವಿದ್ಯಾರ್ಥಿಗಳು ಸೇರಿಕೊಂಡು ಶಾಲಾ ಆವರಣ, ಶಾಲಾ ಕೊಠಡಿಗಳು, ಕುಡಿಯುವ ನೀರಿನ ಟ್ಯಾಂಕ್, ಶೌಚಗೃಹ, ಅಕ್ಷರ ದಾಸೋಹದ ಕೊಠಡಿ, ಅಡುಗೆ ತಯಾರಿಕಾ ಸಾಮಗ್ರಿಗಳನ್ನು ಸ್ವಚ್ಛಗೊಳಿಸಿದರು.
ಶಾಲಾ ಡೀಪ್ ಕ್ಲೀನ್ ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷೆ ಬಿಂದು ಸುರೇಶ್, ಮುಖ್ಯ ಶಿಕ್ಷಕ ಸಿ.ಎಸ್.ಸತೀಶ್, ಸಹ ಶಿಕ್ಷಕ ಮಂಜುನಾಥ್, ಅಕ್ಷರ ದಾಸೋಹ ಸಿಬ್ಬಂದಿ ಬಿಂದು, ಸ್ವಾತಿ , ಪಾಲಕರಾದ ಲಕ್ಷ್ಮೀ ದಿನೇಶ್ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ಶನಿವಾರಸಂತೆ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ತ್ಯಾಗರಾಜ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನಿಡ್ತ, ಮಾಲಂಬಿ, ಗೋಪಾಲಪುರ, ಆಲೂರುಸಿದ್ದಾಪುರ ಮುಂತಾದ ಸರ್ಕಾರಿ ಪ್ರಾಥಮಿಕ, ಪ್ರೌಢ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಡೀಪ್ ಕ್ಲೀನ್ ಕಾರ್ಯಕ್ರಮ ಹಮ್ಮಿಕೊಂಡಿದ್ದರು.