ಚಾಮರಾಜನಗರ: ಜಿಲ್ಲೆಯ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಶಾಲಾ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಲ್ಲಿ ಯೋಜನೆಯ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ತಿಳಿಸಿದರು.
ತಾಲೂಕಿನ ಮಲೆಯೂರು ಗ್ರಾಮದ ಕನಕಗಿರಿ ಭವನದಲ್ಲಿ ಮಹಾತ್ಮ ಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ, ಭೇರ್ ಪುಟ್ ಟೆಕ್ನಿಷಿಯನ್ ಹಾಗೂ ಗ್ರಾಮ ಕಾಯಕ ಮಿತ್ರ ಸಂಘದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ನರೇಗಾ ದಿವಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 2024-25ನೇ ಸಾಲಿನಲ್ಲಿ 25.28 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಿ ಶೇ. 101.13 ರಷ್ಟು ಗುರಿಸಾಧನೆ ಮಾಡಿ, ನಿಗದಿತ ಗುರಿಗಿಂತ ಹೆಚ್ಚಿನ ಪ್ರಗತಿ ಸಾಧಿಸಿ, ಹೆಚ್ಚು ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ 64,640 ಕುಟುಂಬಗಳಿಗೆ ಉದ್ಯೋಗ ನೀಡಿ 1,04,764 ಕಾರ್ಮಿಕರಿಗೆ ಯೋಜನೆಯಡಿ ಉದ್ಯೋಗ ನೀಡಲಾಗಿದೆ ಎಂದು ತಿಳಿಸಿದರು.
ನರೇಗಾ ಯೋಜನೆಯಡಿ ಸಾಧಿಸಿರುವ ಪ್ರಗತಿಯಲ್ಲಿ ಜಿಲ್ಲೆಯು ರಾಜ್ಯದಲ್ಲಿಯೇ ಅತ್ಯಾಧಿಕ ಪರಿಶಿಷ್ಟರಿಗೆ ಉದ್ಯೋಗ ನೀಡಿದ ಹಿರಿಮೆ ಹೊಂದಿದೆ. ಜಿಲ್ಲೆಯಲ್ಲಿ ಶೇ.29.7 ರಷ್ಟು ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ ಕುಟುಂಬಗಳು ಭಾಗವಹಿಸುವಿಕೆ ಮತ್ತು ಶೇ 8.97 ರಷ್ಟು ಪರಿಶಿಷ್ಟ ಪಂಗಡದ ಕಾರ್ಮಿಕರ ಭಾಗವಹಿಸುವಿಕೆಯಲ್ಲಿ 13ನೇ ಸ್ಥಾನ ಹಾಗೂ 56.67 ಮಹಿಳಾ ಕಾರ್ಮಿಕರ ಭಾಗವಹಿಸುವಿಕೆಯಲ್ಲಿ 4ನೇ ಸ್ಥಾನ ಪಡೆದಿದೆ ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮಿ ಮಾತನಾಡಿ,ನರೇಗಾ ಯೋಜನೆಯಡಿ ಏ.1 ರಿಂದ ಕೂಲಿ ಹೆಚ್ಚಳವಾಗಿರುವುದರಿಂದ ಪ್ರತಿಯೊಂದು ಕುಟುಂಬವು 100 ದಿನಗಳ ಕೂಲಿ ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ನರೇಗಾ ನೌಕರರ ಸಂಘದಿಂದ ಮಲೆಯೂರು ಗ್ರಾ.ಪಂ ವ್ಯಾಪ್ತಿಯಲ್ಲಿ 2024-25 ನೇ ಸಾಲಿನಲ್ಲಿ 100 ದಿನ ಕೂಲಿ ಪೂರೈಸಿದ, ವಿಶೇಷ ಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ಸನ್ಮಾನಿಸಲಾಯಿತು. ಮಲೆಯೂರು ಗ್ರಾಮದ ಸರ್ಕಾರಿ ಶಾಲೆ ಕುಡಿಯುವ ನೀರಿನ ಘಟಕ, ಅಂಗನವಾಡಿ ಕೇಂದ್ರದ ಮಕ್ಕಳಿಗೆ ಆಟಿಕೆ ಸಾಮಾಗ್ರಿ, ಕೂಲಿ ಕಾರ್ಮಿಕರಿಗೆ ಸಲಕರಣೆಗಳನ್ನು ವಿತರಿಸಿ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಯಿತು. 2024-25ನೇ ಸಾಲಿನಲ್ಲಿ ತೆರಿಗೆ ವಸೂಲಾತಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದ ಜಿಲ್ಲೆಯ ವಿವಿಧ ತಾಲೂಕಿನ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಿಗೆ ಅಭಿನಂದನ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಮಹಾಲಕ್ಷ್ಮಿ, ಜಿಲ್ಲಾ ಪಂಚಾಯಿತಿಯ ಮುಖ್ಯ ಲೆಕ್ಕಾಧಿಕಾರಿ ಸಿ.ಬಸವರಾಜು, ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ರವೀಂದ್ರ, ಗೋಪಾಲಕೃಷ್ಣ, ಪ್ರಕಾಶ್, ನಾಗಭೂಷಣ್, ಪಿಡಿಓ ಕುಮಾರಸ್ವಾಮಿ, ಶೃತಿ, ನವೀನ್ ಕುಮಾರ್ ಉಪಸ್ಥಿತರಿದ್ದರು.