ಬೇಲೂರು: ಮುಖ್ಯ ಶಿಕ್ಷಕರು ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಶಾಲೆಗಳು ಅಭಿವೃದ್ಧಿಯಾಗುತ್ತವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಮುಖ್ಯಶಿಕ್ಷಕರ ಸಭೆಯಲ್ಲಿ ಮಾತನಾಡಿ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಅತಿ ಕಡಿಮೆ ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳನ್ನು ಹೋಬಳಿ ಕೇಂದ್ರದಲ್ಲಿ ಒಟ್ಟಾಗಿ ಸೇರಿಸಿ ತಾಲೂಕಿನ ಶಿಕ್ಷಣ ಸಂಯೋಜನಾಧಿಕಾರಿಗಳಿಂದ ವಿದ್ಯಾರ್ಥಿಗಳಿಗೆ ಪಾಠ ಮಾಡಿಸಬೇಕು. ನಂತರ ಮಾಡಿದ ಪಾಠಗಳಿಗೆ ಮಧ್ಯಾಹ್ನ ರಸ ಪ್ರಶ್ನೆ ಕಾರ್ಯಕ್ರಮ ಆಯೋಜಿಸುವುದರಿಂದ ಬೇರೆ ಬೇರೆ ಶಾಲೆಗಳಿಂದ ಆಗಮಿಸುವ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ನಿರ್ಧರಿಸಬಹುದು ಹಾಗೂ ಫಲಿತಾಂಶವನ್ನು ಉತ್ತಮ ಪಡಿಸಲು ರೂಪುರೇಷೆ ಸಿದ್ಧಪಡಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಸಹೃದಯಿ ಶಿಕ್ಷಕರ ಸಹಕಾರದಿಂದ ಟಾರ್ಗೆಟ್-40 ಕಿರು ಪುಸ್ತಕ ಹೊರತರಲು ನಿರ್ಧರಿಸಲಾಗಿದೆ. ಆದ್ದರಿಂದ ಎಲ್ಲ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ತುಂಬಿ ಅವರು ಹೆಚ್ಚು ಪರಿಶ್ರಮ ವಹಿಸಿ ವಿದ್ಯೆಯತ್ತ ಗಮನ ಹರಿಸುವಂತೆ ರೂಪಿಸಬೇಕಿದೆ. ಇದಕ್ಕಾಗಿ ಶಿಕ್ಷಕರು ಹೆಚ್ಚು ಸಮಯವನ್ನು ಶಾಲೆಗಳಲ್ಲೇ ಕಳೆಯಲು ಮೀಸಲಿಡಬೇಕು ಎಂದು ಸಲಹೆ ನೀಡಿದರು.
ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಜಗದೀಶ್ ನಾಯಕ್, ದೈಹಿಕ ಶಿಕ್ಷಣ ಪರಿವೀಕ್ಷಕ ಪಾಲಾಕ್ಷಮೂರ್ತಿ, ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಹೇಮಂತ್, ಪದಾಧಿಕಾರಿಗಳಾದ ಜೆ.ವೆಂಕಟೇಶ್, ಮುಳ್ಳಯ್ಯ, ಇಸಿಒಗಳಾದ ರವಿಕುಮಾರ್, ಮಂಜುನಾಥ್, ಶಿವಪ್ಪ ಇತರರು ಇದ್ದರು.