ಚಿತ್ರದುರ್ಗ: ನಗರದ ಹೊರವಲಯ ಪಿಳ್ಳೇಕೆರೆನಹಳ್ಳಿಯಲ್ಲಿ ಇರುವ ನಗರಸಭೆ ಜಮೀನನ್ನು ಸರ್ಕಾರಿ ಶಾಲೆಗೆ, ಬಡವರ ವಸತಿ ಅನುಕೂಲಕ್ಕೆ ಹಾಗೂ ಹಿಂದು ರುದ್ರಭೂಮಿಗೆ ಮಂಜೂರು ಮಾಡುವಂತೆ ಒತ್ತಾಯಿಸಿ ಪಿಳ್ಳೇಕೆರೆನಹಳ್ಳಿ ಗ್ರಾಮಸ್ಥರು, ಗುರುವಾರ ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ನಗರಸಭೆಯ ಈ ಜಮೀನನ್ನು ಕೆಲವರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿ, ಜಮೀನನ್ನು ಶಾಲೆ ನಿರ್ಮಾಣ ಹಾಗೂ ಬಡವರಿಗೆ ನಿವೇಶನಕ್ಕೆ ಬಳಸಬೇಕು ಎಂದು ಒತ್ತಾಯಿಸಿದರು.
ಚಿತ್ರದುರ್ಗ ತಾಲೂಕು ಮದಕರಿಪುರ ಗ್ರಾಪಂ ವ್ಯಾಪ್ತಿ ಪಿಳ್ಳೇಕೆರೆನಹಳ್ಳಿ ಗ್ರಾಮ, ನಗರಕ್ಕೆ ಹೊಂದಿಕೊಂಡಿದೆ. ಇಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮಲ್ಲಾಪುರ ಕೆರೆ ಅಂಚಿನಲ್ಲಿದ್ದು, ಬಹಳಷ್ಟು ಬಾರಿ ಮುಳುಗಡೆ ಆಗಿದೆ. ಆದ್ದರಿಂದ ನಗರಸಭೆಯ ರಿ.ಸ.ನಂ. 38/1ರಲ್ಲಿ 4.28 ಎಕರೆ ಮತ್ತು ರಿ.ಸ.ನಂ.38/2ರಲ್ಲಿ 4.36 ಗುಂಟೆ ಜಮೀನನ್ನು ಶಾಲೆಗೆ, ಉಳಿದ ಜಾಗವನ್ನು ಬಡವರ ವಸತಿಗೆ ಹಾಗೂ ಹಿಂದು ರುದ್ರಭೂಮಿಗೆ ಮಂಜೂರು ಮಾಡುವಂತೆ ಆಗ್ರಹಿಸಿದರು.
ನಗರಸಭೆ 2005ರ ವರೆಗೆ ಈ ಜಮೀನನ್ನು ಹರಾಜು ಮುಖಾಂತರ ಸೊಪ್ಪು-ತರಕಾರಿ ಬೆಳೆಯಲು ಮಂಜೂರು ಮಾಡುತ್ತಾ ಬಂದಿದ್ದು, ಕೆಲ ಅಧಿಕಾರಿಗಳು ಖಾಸಗಿಯವರಿಗೆ ಖಾತೆ ಮಾಡಿಕೊಟ್ಟಿದ್ದಾರೆಂದು ಆರೋಪಿಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಗ್ರಾಮದ ಆರ್.ಪ್ರಕಾಶ್, ಈಶಣ್ಣ, ಚನ್ನಪ್ಪ, ಭರತ್, ಶ್ರೀನಿವಾಸ್, ಅನುಸೂಯಮ್ಮ, ಲಕ್ಷ್ಮೀದೇವಿ, ನಾಗವೇಣಿ, ಪ್ರಸನ್ನ, ಪಾಲೇಶ್, ಸುಶ್ಮಿತಾ, ನಾಗರಾಜ, ಭೋರೇಶ್, ಇಂದಿರಾ, ಸುಶೀಲಾ, ಮಂಜಮ್ಮ, ಶ್ರುತಿ, ರತ್ನಮ್ಮ ಇತರರು ಪಾಲ್ಗೊಂಡಿದ್ದರು.