ಕಡೂರು: ಹಡಗಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆಟದ ಮೈದಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದನ್ನು ವಿರೋಧಿಸಿ ವಿದ್ಯಾರ್ಥಿಗಳು ಹಾಗೂ ಪಾಲಕರು ಗುರುವಾರ ಪ್ರತಿಭಟನೆ ನಡೆಸಿದರು.
ಶಾಲೆಯಲ್ಲಿ 37 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಶಾಲೆಗೆ ಹೊಂದಿಕೊಂಡಂತಿರುವ ಸರ್ಕಾರಿ ಗೋಮಾಳ 18 ಗುಂಟೆ ಜಾಗ ಆಟದ ಮೈದಾನವಾಗಿದೆ. ಈ ಜಾಗವನ್ನು ಶಾಲಾ ಆಟದ ಮೈದಾನ ಎಂದು ದಾಖಲಿಸಲು ಹಲವಾರು ವರ್ಷಗಳಿಂದ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸದ್ಯದಲ್ಲಿಯೇ ಗ್ರಾಮದ ಮುಖಂಡರೊಬ್ಬರ ಗೃಹಪ್ರವೇಶವಿದ್ದು, ಅಲ್ಲಿಗೆ ತೆರಳಲು ಮೈದಾನದಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದರು. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು, ಪಾಲಕರು ಜೆಸಿಬಿಗೆ ಅಡ್ಡ ನಿಂತು ಪ್ರತಿಭಟನೆ ನಡೆಸಿದರು. ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳು ಸಾಥ್ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ನಿರ್ಮಿಸಲು ಯತ್ನಿಸಿದವರು ಕಾಂಗ್ರೆಸ್ ಕಾರ್ಯಕರ್ತ ಹಾಗೂ ಶಾಸಕರ ಆಪ್ತರಾಗಿದ್ದರಿಂದ ಅಧಿಕಾರಿಗಳು ಮೌನವಾಗಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆಯಿಂದ ಬಿಗುವಿನ ವಾತಾವರಣ ಉಂಟಾಗಿತ್ತು. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಎಚ್ಚರ ವಹಿಸಿದರು. ಪ್ರತಿಭಟನೆ ತೀವ್ರವಾಗಿದ್ದರಿಂದ ರಸ್ತೆ ಕಾಮಗಾರಿ ಸ್ಥಗಿತಗೊಳಿಸಿದರು.
ಹಡಗಲು ಗ್ರಾಮದ ಸರ್ವೇ ನಂಬರ್ 56ರಲ್ಲಿರುವ ಜಾಗ ಸರ್ಕಾರಿ ಗೋಮಾಳವಾಗಿದ್ದು, 4.18 ಎಕರೆ ವಿಸ್ತೀರ್ಣವಿದೆ. ಇದೇ ಜಾಗದಲ್ಲಿ ಸರ್ಕಾರಿ ಶಾಲೆಯಿದೆ. ಹಿಂದೊಮ್ಮೆ ಇಲ್ಲಿನ 18 ಗುಂಟೆ ಜಾಗವನ್ನು ಶಾಲಾ ಮೈದಾನವೆಂದು ಜಾಗದಲ್ಲಿ ತಂತಿಬೇಲಿ ಹಾಕಿದಾಗ ತಹಸೀಲ್ದಾರ್ ಅವರು ಸಿಪಿಆರ್‌ಪಿ 145 ಪ್ರಕಾರ ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿದ್ದರು. ಆದ್ದರಿಂದ ತಂತಿಬೇಲಿ ತೆರವುಗೊಳಿಸಲಾಗಿತ್ತು. ಗುರುವಾರ ಆ ಜಾಗದಲ್ಲಿ ನಾಲ್ಕೈದು ಲೋಡ್ ಮಣ್ಣು ಹಾಕಿದ್ದನ್ನು ಗಮನಿಸಿ ಯಥಾಸ್ಥಿತಿ ಕಾಪಾಡುವ ಉದ್ದೇಶದಿಂದ ಜೆಸಿಬಿಯಿಂದ ಮಣ್ಣು ತೆರವುಗೊಳಿಸಲು ಮುಂದಾಗಿದ್ದೆವು. ರಸ್ತೆ ನಿರ್ಮಾಣ ಮಾಡಲು ಯತ್ನಿಸಿಲ್ಲ. ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಗ್ರಾಮದ ಕೆಲವರು ಪ್ರತಿಭಟನೆ ನಡೆಸಿದರು ಎಂದು ಅಧಿಕಾರಿಯೊಬ್ಬರು ವಿಜಯವಾಣಿಗೆ ಮಾಹಿತಿ ನೀಡಿದರು.