ಜಿಲ್ಲೆ

ಶಾಲೆ ಬಿಟ್ಟ ಮಕ್ಕಳನ್ನು ಮುಖ್ಯ ವಾಹಿನಿಗೆ ತನ್ನಿ

ಬಾಗಲಕೋಟೆ: ಶಾಲೆ ಬಿಟ್ಟ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವ ಕಾರ್ಯವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹ್ಮದ ಮೊಸಿನ್ ಸೂಚಿಸಿದರು.

ಜಿಲ್ಲಾ ಪಂಚಾಯತ್ ನೂತನ ಸಭಾಂಗಣದಲ್ಲಿ ಸೋಮವಾರ ದಂದು ಜರುಗಿದ ಪ್ರಥಮ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರತಿಷ್ಟಿತ ಶಾಲೆಗಳಿಗೆ ಪ್ರವೇಶ ಪರೀಕ್ಷೆ ಮೂಲಕ ದಾಖಲಾದ ಬಡ ಮಕ್ಕಳು ಮುಂದೆ ಶಾಲೆಯ ಇತರ ಮಕ್ಕಳೊಂದಿಗೆ ಬೆರೆಯಲು ಹಿಂಜರಿದು ಶಾಲೆ ಬಿಟ್ಟ ವಿಷಯ ಮಾನ್ಯ ಮುಖ್ಯಮಂತ್ರಿಗಳು ಪ್ರಸ್ಥಾಪಿಸಿದ್ದು, ಶಾಲೆ ಬಿಡುವ ಮಕ್ಕಳಿಗೆ ಸಮಾಲೋಚನೆ ಮತ್ತು ಇತರೆ ಚಟುವಟಿಕೆಗಳ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಿ ಎಂದರು.

ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆಯ ಸ್ಥಾನ ಕೂಡ ಕುಸಿತಗೊಂಡಿದೆ. ಈ ಹಿನ್ನಲೆಯಲ್ಲಿ ಕಳೆದ ಮೂರು ವರ್ಷದಿಂದ ಸತತವಾಗಿ ಕಡಿಮೆ ಫಲಿತಾಂಶವನ್ನು ಸಾಧಿಸಿರುವ ಜಿಲ್ಲೆಯ ಸರಕಾರಿ, ಖಾಸಗಿ ಅಥವಾ ಅನುದಾನಿತ ಶಾಲೆಯಾಗಿದ್ದರು ಕೂಡ ಆ ಶಾಲೆಗಳಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಬೇಕು ಮತ್ತು ವಿಷಯವಾರು ಶಿಕ್ಷಕರಿಗೂ ಗೈಡ್ ಮಾಡಲು ಸೂಚಿಸಬೇಕು ಎಂದು ತಿಳಿಸಿದರು.

ವಿವಿಧ ಇಲಾಖೆಗಳ ಗುರಿ ಮತ್ತು ಸಾಧನೆ ಪರೀಶೀಲಿಸುತ್ತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿಲ್ಲಿ, ಹೊಸ ಅಂಗನವಾಡಿ ಕಟ್ಟಡಗಳ ನಿರ್ಮಾಣ, ನಿವೇಶನ , ಪೋಕ್ಸೋ ಹಾಗೂ ಮಹಿಳಾ ದೌರ್ಜನ್ಯ ಪ್ರಕರಣಗಳ ಅಂಕಿಅಂಶಗಳನ್ನು ಪರಿಶೀಲಿಸಿ ಫೋಕ್ಸೋ ಪ್ರಕರಣಗಳ ಸಂತ್ರಸ್ತರಿಗೆ ಪರಿಹಾರ ಧನ ವಿತರಿಸದೆ ಇರುವುದು ಸಾಕಷ್ಟು ಸಂಖ್ಯೆಯಲ್ಲಿ ಕಂಡುಬರುತ್ತಿದ್ದು, ಸಂತ್ರಸ್ತರಿಗೆ ಈ ಕುರಿತು ಸೂಕ್ತ ತಿಳುವಳಿಕೆ ನೀಡಿ ಅವರಿಗೆ ಪರಿಹಾರ ಮೊತ್ತ ವಿತರಿಸುವ ಕಾರ್ಯ ಮಾಡಬೇಕು. ಮಾಜಿ ದೇವದಾಸಿಯರ ನಿವೇಶನ ಮಂಜೂರ ಮಾಡುವ ಕೆಲಸ ಕೂಡ ಹಾಗೇ ಇದ್ದು ಸಂಬಂದಿಸಿದ ಇಲಾಖೆ ಅಧಿಕಾರಿಗಳು ಮಾಜಿ ದೇವದಾಸಿಯರಿಗೆ ಇರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕು ಎಂದರು.

ಆರೋಗ್ಯ ಇಲಾಖೆಯ ಬ್ಲಡ್ ಬ್ಯಾಂಕ್ ಶಿಬಿರಗಳಿಗೆ ಅನುಕೂಲವಾಗಲು ಸಂಚಾರಿ ಸೌಲಭ್ಯ ಒದಗಿಸಬೇಕು. ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿ ನಿಲಯಗಳಿಗೆ ಹಾಸಿಗೆ, ಪೂರೈಕೆ, ಅಟ್ರಾಸಿಟಿ ಪ್ರಕರಣಗಳ ಕುರಿತಂತೆ ಚರ್ಚಿಸಿದ ಅವರು ಸಿಂದುತ್ವ ನೀಡುವ ಹಳೆಯ ಪ್ರಕರಣಗಳು ಬಾಕಿ ಇದ್ದಲ್ಲಿ ಅವುಗಳನ್ನೆಲ್ಲ ಶೀಘ್ರ ವಿಲೇವಾರಿ ಮಾಡಬೇಕು ಎಂದು ಹೇಳಿದರು.

ಪಶು ಸಂಗೋಪನೆ, ಕೃಷಿ, ತೋಟಗಾರಿಕೆ, ರೇಷ್ಮೆ ,ಅಲ್ಪಸಂಖ್ಯಾತರ ಕಲ್ಯಾಣ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅರಣ್ಯ, ಸಾಮಾಜಿಕ ಅರಣ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸೇರಿ ವಿವಿಧ ಇಲಾಖೆಗಳ ಪ್ರಗತಿ ಕುರಿತು ಈ ಸಂದರ್ಭದಲ್ಲಿ ಸಂಬಂದಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಚರ್ಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ್ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಧರ ಕುರೇರ್ ಸೇರಿ ಇತರರು ಇದ್ದರು.