ಜಿಲ್ಲೆ

ಶಾಲೆ ನಿರ್ಮಾಣಕ್ಕೆ ಭೂದಾನ ಶ್ಲಾಘನೀಯ

ಮಳವಳ್ಳಿ: ತಾಲೂಕಿನ ಹೊಸದೊಡ್ಡಿ ಗ್ರಾಮದಲ್ಲಿ ಹೊಂಗಿರಣ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ನಿರ್ಮಾಣಗೊಂಡಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟನೆ ಮತ್ತು ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮ ಸೋಮವಾರ ನಡೆಯಿತು.

ಆದಿಚುಂಚನಗಿರಿ ಮಹಾ ಸಂಸ್ಥಾನದ ಬೆಂಗಳೂರು ಶಾಖಾ ಮಠದ ಶ್ರೀ ಸೌಮ್ಯನಾಥಾನಂದ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ, ಒಂದು ಗುಂಟೆ ಜಾಗಕ್ಕೂ ಸಹೋದರರ ನಡುವೆಯೇ ಜಗಳ, ಕಿತ್ತಾಟ ನಡೆದು ಕೋರ್ಟ್, ಕಚೇರಿ ಅಲೆಯುವ ಪ್ರಸ್ತುತ ಕಾಲಘಟ್ಟದಲ್ಲಿ ಸ್ವಂತ ನಿವೇಶನವನ್ನು ಸರ್ಕಾರಿ ಶಾಲೆಗೆ ಬಿಟ್ಟು ಕೊಡುವುದರ ಜತೆಗೆ ಸ್ನೇಹಿತರೊಡಗೂಡಿ ಹೊಂಗಿರಣ ಪ್ರತಿಷ್ಠಾನ ಸ್ಥಾಪಿಸಿ ಸುಸಜ್ಜಿತ ಶಾಲಾ ಕಟ್ಟಡವನ್ನು ನಿರ್ಮಿಸಿ ಗ್ರಾಮೀಣ ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಪ್ರತಿಷ್ಠಾನದ ಅಧ್ಯಕ್ಷ ಮಹದೇವ್ ಹಾಗೂ ಸಂಗಡಿಗರ ಕಾರ್ಯ ಶ್ಲಾಘನೀಯ ಎಂದರು.

ವೃದ್ಧಾಶ್ರಮ ಕಟ್ಟಿಸಿದ್ದರೆ ವಯಸ್ಸಾದ ತಂದೆ-ತಾಯಿ ಸೇರಿಸಿ ಮಕ್ಕಳು ತಮ್ಮ ಜವಾಬ್ದಾರಿಯಿಂದ ಜಾರಿಕೊಳ್ಳಲು ದಾರಿಯಾಗುತ್ತಿದ್ದರು. ಈ ಕಾರಣಕ್ಕಾಗಿ ಶಾಲೆ ಕಟ್ಟಿರುವುದರಿಂದ ವಿದ್ಯೆಯಿಂದ ಮಕ್ಕಳು ಸಂಸ್ಕಾರವಂತರಾಗಿ ತಮ್ಮ ತಂದೆ-ತಾಯಿಗಳ ಜತೆ ನೂರಾರು ಜನರನ್ನು ಸಾಕಲು ಮುಂದಾಗುತ್ತಾರೆ ಎಂದು ತನ್ನ ಹುಟ್ಟೂರಿನಲ್ಲಿ ಶಾಲೆಯ ಅಭಿವೃದ್ಧಿಗೆ ಪಣ ತೊಟ್ಟಿರುವ ಮಹದೇವ್ ಅವರ ಗ್ರಾಮ ಪ್ರೇಮವನ್ನು ಶ್ರೀಗಳು ಪ್ರಶಂಸಿಸಿದರು.

ಹೊಂಗಿರಣ ಸಂಸ್ಥೆಯ ಅಧ್ಯಕ್ಷ ಮಹದೇವ್ ಮಾತನಾಡಿ, ಮೊದಲಿಗೆ ವೃದ್ಧಾಶ್ರಮ ಮಾಡಲು ಹೊರಟಿದ್ದ ನನಗೆ ಗ್ರಾಮದಲ್ಲಿ ಶಾಲಾ ಕಟ್ಟಡ ಕಟ್ಟಿಸಿಕೊಡುವಂತೆ ಶಿಕ್ಷಣ ಇಲಾಖೆ ಹಾಗೂ ಗ್ರಾಮಸ್ಥರು ಕೋರಿದರು. ಹಾಗಾಗಿ ನಮ್ಮ ಪ್ರತಿಷ್ಠಾನದ ಎಲ್ಲ ಪದಾಧಿಕಾರಿಗಳು ಸೇರಿ ಶಾಲಾ ಕಟ್ಟಡ ನಿರ್ಮಿಸಿದ್ದು, ಮುಂದೆಯೂ ಈ ಶಾಲೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಮಾತನಾಡಿ, ಪಾಲಕರು ಖಾಸಗಿ ಶಾಲಾ ವ್ಯಾಮೋಹ ಬಿಟ್ಟು ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಈ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸಿ. ಸರ್ಕಾರಿ ಶಾಲೆಯನ್ನು ಉಳಿಸಬೇಕೆಂದು ಕೋರಿದರು.

ಮಾಜಿ ಶಾಸಕ ಡಾ.ಕೆ. ಅನ್ನದಾನಿ, ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಕ್ಷೇತ್ರ ಸಮನ್ವಯಾಧಿಕಾರಿ ಶ್ರೀನಿವಾಸ್, ಅಕ್ಷರ ದಾಸೋಹ ನಿರ್ದೇಶಕ ಬಿ.ಮಹದೇವು, ಮುಖ್ಯ ಶಿಕ್ಷಕಿ ಬನಶಂಕರಿ, ಪ್ರತಿಷ್ಠಾನದ ಪದಾಧಿಕಾರಿಗಳು ಇದ್ದರು.