ಜಿಲ್ಲೆ

ಶಾಲೆ ಆವರಣದಲ್ಲಿ ಮದ್ಯಪಾನ ಮಾಡಿದರೆ ಕಾನೂನು ಕ್ರಮ

ಪಂಚನಹಳ್ಳಿ: ಬಾರ್​ಗಳಲ್ಲಿ ಮದ್ಯಪಾನ ಮಾಡಲು ಹಿಂಜರಿಯುವವರು ಕತ್ತಲಾಗುತ್ತಿದ್ದಂತೆ ಶಾಲೆ ಅಥವಾ ಎಪಿಎಂಸಿ ಆವರಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಪೊಲೀಸ್ ಇಲಾಖೆ ಗಮನಕ್ಕೆ ಬಂದಿದೆ. ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಎಸ್​ಐ ಕೆ.ಬಿ.ನರೇಂದ್ರ ಎಚ್ಚರಿಸಿದರು.

ಪಂಚನಹಳ್ಳಿ ಗ್ರಾಪಂ ಮತ್ತು ವಿವಿಧ ಶಾಲೆಗಳಿಂದ ಶುಕ್ರವಾರ ಆಯೋಜಿಸಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಹರ್ಷ ಮಾತನಾಡಿ, ರಾತ್ರಿ ವೇಳೆ ಶಾಲೆ ಆವರಣದಲ್ಲಿ ಮದ್ಯಪಾನ ಮಾಡುತ್ತಾರೆ. ಬೆಳಗ್ಗೆ ಶಾಲೆಗೆ ಬಂದಾಗ ನಾವು ಕುಡುಕರು ಬಿಟ್ಟುಹೋದ ಬಾಟಲಿಗಳನ್ನು ತೆರವುಗೊಳಿಸಬೇಕಿದೆ ಎಂದು ಗಮನಕ್ಕೆ ತಂದಾಗ ಎಎಸ್​ಐ ಹೀಗೆ ಪ್ರತಿಕ್ರಿಯಿಸಿದರು.

ಈ ಮೊದಲು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮದ್ಯಪಾನ ಮಾಡುವವರನ್ನು ಗುರುತಿಸಿ ದಂಡ ವಿಧಿಸಲಾಗಿದೆ. ಹಾಗಾಗಿ ಶಾಲಾ ಆವರಣ ದುರ್ಬಳಕೆ ಮಾಡಿಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಇನ್ನು ಮುಂದೆ ಶಾಲೆ ಆವರಣದಲ್ಲಿ ಗಸ್ತು ಅವಧಿ ಹೆಚ್ಚಿಸಲಾಗುವುದು ಎಂದರು.

ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಮಾನಸಾ ಮಾತನಾಡಿ, ಸೊಳ್ಳೆಗಳ ಕಾಟ ತೀವ್ರವಾಗಿದ್ದು, ಪರಿಹರಿಸುವಂತೆ ಕೋರಿದರು. ಇದಕ್ಕೆ ಉತ್ತರಿಸಿದ ಹಿರಿಯ ಆರೋಗ್ಯ ಪರೀಕ್ಷಕ ಕೆ.ಷಣ್ಮುಖಪ್ಪ, ರಾಸಾಯನಿಕ ಬಳಕೆಗಿಂತ ಸಾಂಪ್ರದಾಯಿಕ ರೀತಿಯಲ್ಲಿ ಸೊಳ್ಳೆಗಳನ್ನು ನಿಯಂತ್ರಿಸುವುದು ಒಳ್ಳೆಯದು. ಸ್ವಚ್ಛತೆಯಿಂದ ಸೊಳ್ಳೆಗಳ ನಿಯಂತ್ರಣ ಸಾಧ್ಯ ಎಂದರು. ಗ್ರಾಪಂ ಸದಸ್ಯ ಪಿ.ಎಸ್.ಸಂತೋಷ್ ಪ್ರತಿಕ್ರಿಯಿಸಿ, ಎಲ್ಲರೂ ಒಟ್ಟಾಗಿ ಶ್ರಮದಾನದ ಮೂಲಕ ಪರಿಸರ ಸ್ವಚ್ಛಗೊಳಿಸೋಣ ಎಂದು ತಿಳಿಸಿದರು.