ಎನ್.ಆರ್.ಪುರ: ಮಕ್ಕಳಿಗೆ ವಿದ್ಯಾರ್ಥಿ ದೆಸೆಯಲ್ಲಿಯೇ ಕೃಷಿ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು ಉತ್ತಮ ಎಂದು ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್‌ಕುಮಾರ್ ಹೇಳಿದರು.
ಶುಕ್ರವಾರ ಸೂಸಲವಾನಿ ಸರ್ಕಾರಿ ಶಾಲೆಯಲ್ಲಿ ನಡೆದ ಅನುಭವ ಆಧಾರಿತ ಕಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಲಾ ಆವರಣದಲ್ಲೇ ಭತ್ತ ಬೆಳೆದಿರುವುದು ಶ್ಲಾಘನೀಯ. ಕೆಲವು ಸರ್ಕಾರಿ ಶಾಲೆಗಳ ಕೈತೋಟದಲ್ಲಿ ತರಕಾರಿ, ಹಣ್ಣು, ಸೊಪ್ಪು ಬೆಳೆಯುತ್ತಾರೆ. ಆದರೆ ಭತ್ತ ಎಲ್ಲೂ ಬೆಳೆದಿಲ್ಲ. ಜಿಲ್ಲೆಯಲ್ಲಿಯೇ ಇದು ಪ್ರಥಮ. ಮಕ್ಕಳಿಗೆ ಜೀವನದಲ್ಲಿ ಉಪಯುಕ್ತ ಮಾಹಿತಿಗಳನ್ನು ಶಿಕ್ಷಣದ ಜೊತೆ ಕಲಿಸುವುದರಿಂದ ಓದಿನ ಕಡೆಗೂ ಹೆಚ್ಚು ಆಸಕ್ತಿ ಹೊಂದುತ್ತಾರೆ ಎಂದರು.
ಎನ್.ಆರ್.ಪುರ ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಬಿಂದು ವಿಜಯ್ ಮಾತನಾಡಿ, ಮಕ್ಕಳ ಆಸಕ್ತಿಗೆ ತಕ್ಕ ಶಿಕ್ಷಣ ಸಿಗುವಂತಾಗಬೇಕು. ಒತ್ತಡದಿಂದ ಶಿಕ್ಷಣ ನೀಡಬಾರದು ಎಂದರು.
ಗ್ರಾಪಂ ಸದಸ್ಯೆ ವಾಣಿ ನರೇಂದ್ರ ಮಾತನಾಡಿ, ಶಾಲೆಯಲ್ಲಿ ಭತ್ತ ಬೆಳೆದಿರುವುದು ಶಿಕ್ಷಕರ, ಪಾಲಕರ ಮತ್ತು ವಿದ್ಯಾರ್ಥಿಗಳ ಆಸಕ್ತಿ ತೋರಿಸುತ್ತದೆ ಎಂದರು.
ಸುಮಾರು 2 ಗುಂಟೆ ಪ್ರದೇಶದಲ್ಲಿ ಬೆಳೆದ ಭತ್ತದ ಪೈರನ್ನು ಗಣ್ಯರು ರೈತಗೀತೆಯನ್ನು ಹಾಡುವುದರೊಂದಿಗೆ ಕಟಾವು ಮಾಡಿದರು.
ಗ್ರಾಪಂ ಅಧ್ಯಕ್ಷೆ ಅಶ್ವಿನಿ, ಸದಸ್ಯೆ ಶೈಲಾ, ಪಿಡಿಒ ವಿಂದ್ಯಾ, ಎಸ್‌ಡಿಎಂಸಿ ಉಪಾಧ್ಯಕ್ಷೆ ಉಷಾ, ನೀತಾ, ರಾಜಪ್ಪ, ಸೌಮ್ಯಾ, ಪ್ರಭಾಕರ್, ಎನ್.ಎಸ್.ಜೋಯಿ, ರಾಹೀಲ್ ಶೇಖ್, ನಯನಾ ಇದ್ದರು.