ಜಿಲ್ಲೆ

ಶಾಲೆ ಆರಂಭಕ್ಕೆ ಸರ್ಕಾರಕ್ಕಿಲ್ಲ ಆತುರ

ಬೀದರ್: ಶಾಲಾ, ಕಾಲೇಜು ಆರಂಭಿಸುವ ಧಾವಂತ, ಆತುರ ಸರ್ಕಾರಕ್ಕಿಲ್ಲ. ಮಕ್ಕಳ ಹಿತ, ಪಾಲಕರ ಕಾಳಜಿ ದೃಷ್ಟಿಯಲ್ಲಿಟ್ಟುಕೊಂಡೇ ಈ ಬಗ್ಗೆ ಸೂಕ್ತ ಸಮಯದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶಕುಮಾರ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ಇಲ್ಲಿ ವಿವಿಧ ಶಾಲೆಗಳಿಗೆ ಭೇಟಿ ನೀಡಿದ ವೇಳೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಶಾಲಾ-ಕಾಲೇಜು ಆರಂಭಿಸುವ ಬಗ್ಗೆ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ವಿಷಯದಲ್ಲಿ ಯಾವುದೇ ಗೊಂದಲವಾಗಲಿ ಅಥವಾ ಧಾವಂತವಾಗಲಿ ನಮಗಿಲ್ಲ. ಎಲ್ಲ ಸಾದಕ, ಬಾಧಕ ಪರಾಮರ್ಶಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಕರೊನಾ ಸಮಸ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಯಾವ ಹೆಜ್ಜೆ ಇಡಬೇಕೆಂಬ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಬುಧವಾರ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜು ಶಿಕ್ಷಕರ ಸಂಘಟನೆ ಪ್ರಮುಖರ ಸಭೆ ನಡೆಸಲಾಗುತ್ತಿದೆ. ಸೋಮವಾರ (ಅ.5 ರಂದು) ಶಿಕ್ಷಣ ತಜ್ಞರೊಂದಿಗೆ ಮಹತ್ವದ ಚಿಂತನ-ಮಂಥನ ನಡೆಯಲಿದೆ. ಪಾಲಕರೂ ಅಭಿಪ್ರಾಯ ನೀಡುವಂತೆ ಇ-ಮೇಲ್ ಐಡಿ ಕೊಟ್ಟಿರುವೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ಮಕ್ಕಳ ಸುರಕ್ಷತೆ, ಆರೋಗ್ಯವೇ ನಮಗೆ ಮುಖ್ಯ ಎಂದರು.

ಶಾಲಾ-ಕಾಲೇಜು ಯಾವಾಗ ಪ್ರಾರಂಭಿಸಬಹುದು? ಆದ್ಯತೆ ಮೇಲೆ ಯಾವ ತರಗತಿಗಳು ನಡೆಸಬಹುದು? ಸಮುದಾಯದಿಂದ ಯಾವ ರೀತಿ ಸಹಕಾರ, ಸಹಭಾಗಿತ್ವ ಪಡೆಯಬಹುದು ಎಂಬಿತ್ಯಾದಿ ಕುರಿತು ರಾಜ್ಯದ ಎಲ್ಲ ಸಂಸದರು ಮತ್ತು ಶಾಸಕರಿಗೆ ಪತ್ರ ಬರೆದು ಅಭಿಪ್ರಾಯ ಕೋರಿರುವೆ. ಶಾಲೆ ನಡೆಯದ ಕಾರಣ ಕೆಲವೆಡೆ ಬಾಲ್ಯ ವಿವಾಹ, ಬಾಲ ಕಾರ್ಮಿಕರ ಸಂಖ್ಯೆಯಲ್ಲೂ ವೃದ್ಧಿಯಾಗುತ್ತಿರುವ ಅಂಶ ಬೆಳಕಿಗೆ ಬಂದಿವೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಅಭಿಪ್ರಾಯ ನೀಡಿ ಎಂದೂ ಕೋರಲಾಗಿದೆ. ಆದರೆ ಶಾಲೆಗಳ ಪ್ರಾರಂಭದ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸರ್ಕಾರಕ್ಕೆ ಇದರ ಆತುರವೂ ಇಲ್ಲ ಎಂದು ಹೇಳಿದರು.

ಶೂನ್ಯ ಶೈಕ್ಷಣಿಕ ವರ್ಷ
ಬಗ್ಗೆ ಚಿಂತನೆ ಮಾಡಿಲ್ಲ

ಶೂನ್ಯ ಶೈಕ್ಷಣಿಕ ವರ್ಷದ ಕುರಿತಾಗಿಯೂ ಚರ್ಚೆ ನಡೆದಿವೆ. ಆದರೆ ಇದು ಎಷ್ಟರ ಮಟ್ಟಿಗೆ ಸೂಕ್ತ ಎನ್ನುವ ಬಗ್ಗೆಯೂ ಶಿಕ್ಷಣ ತಜ್ಞರ, ಜನಪ್ರತಿನಿಧಿಗಳ, ಸಾರ್ವಜನಿಕರ ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆ ಇಡಲಾಗುವುದು. ಶೂನ್ಯ ಶೈಕ್ಷಣಿಕ ವರ್ಷದ ಬಗ್ಗೆ ನಾವಂತೂ ಯಾವುದೇ ಚಿಂತನೆ ಮಾಡಿಲ್ಲ.ಈ ಬಗ್ಗೆ ಅಭಿಪ್ರಾಯ ಕೇಳಿಬರುತ್ತಿರುವ ಕಾರಣ ಚರ್ಚಿಸಲಾಗುವುದು ಎಂದು ಸಚಿವ ಸುರೇಶಕುಮಾರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಶಾಲಾ-ಕಾಲೇಜು ಆರಂಭದ ಕುರಿತು ಮಕ್ಕಳು ಹಾಗೂ ಪಾಲಕರು ಅನಗತ್ಯ ಯಾವುದೇ ಗೊಂದಲಕ್ಕೆ ಒಳಗಾಗಬಾರದು. ನಮಗೆ ಮಕ್ಕಳ ಶಿಕ್ಷಣಕ್ಕಿಂತಲೂ ಅವರ ಸುರಕ್ಷತೆ, ಆರೋಗ್ಯವೇ ಮುಖ್ಯವಾಗಿದೆ. -ಸುರೇಶಕುಮಾರ, ಶಿಕ್ಷಣ ಸಚಿವ