ಜಿಲ್ಲೆ

ಶಾಲಾಕೊಠಡಿಗಳ ದುರವಸ್ಥೆಗೆ ಕಾರಜೋಳ ಆಕ್ರೋಶ

ಚಿತ್ರದುರ್ಗ: ರಾಜ್ಯದಲ್ಲೇ ಚಿತ್ರದುರ್ಗ ಜಿಲ್ಲೆಯಲ್ಲಿ ಶಾಲಾ ಕೊಠಡಿಗಳ ಅವ್ಯವಸ್ಥೆ ಅಧಿಕವಿದೆ ಎಂಬ ವರದಿಗಳಿದ್ದರೂ ದುರಸ್ತಿ ಹಾಗೂ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಒದಗಿಸಲು ತಮ್ಮಿಂದ ಸಾಧ್ಯವಾಗಿಲ್ಲ ಎಂದು ಸಂಸದ ಗೋವಿಂದ ಎಂ. ಕಾರಜೋಳ ಅವರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಿಪಂನಲ್ಲಿ ಮಂಗಳವಾರ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ)ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಇಂಥ ಕೆಟ್ಟ ಪರಿಸ್ಥಿತಿ ಇದೆ, ತಮಗೇನೂ ಅನ್ನಿಸುವುದಿಲ್ಲವೆ? ನೀವೇನೂ ಸಾವಿರಾರು ಕೋಟಿ ರೂ.ವೆಚ್ಚದ ಕಾಮಗಾರಿ ಮಾಡಿಸುತ್ತಿದ್ದೀರಾ? ಡ್ಯಾಂ ಕಟ್ಟಿಸುತ್ತಿದ್ದೀರಾ ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರ, ಡಿಎಂಎಫ್ ಹಾಗೂ ಕೆಎಂಇಆರ್‌ಸಿ ಅನುದಾನವಿದ್ದರೂ ಶಾಲಾ ಕೊಠಡಿಗಳ ದುರಸ್ತಿ, ಹೊಸ ಕಟ್ಟಡ, ಅಂಗನವಾಡಿ ಕಟ್ಟಡ, ಶೌಚಗೃಹ ನಿರ್ಮಾಣ ನಿಮ್ಮಿಂದ ಸಾಧ್ಯವಾಗಿಲ್ಲ. 2-5-10 ಲಕ್ಷ ರೂ.ವೆಚ್ಚದ ಕಾಮಗಾರಿಗಳ ಅನುಷ್ಠಾನಕ್ಕೆ ಇಷ್ಟೊಂದು ವಿಳಂಬವೇಕೆ ಶೀಘ್ರ ಶೇ.100 ಪ್ರಮಾಣದಲ್ಲಿ ಅಂಗನವಾಡಿ ಕಟ್ಟಡ ಹಾಗೂ ಶಾಲಾ ಕೊಠಡಿಗಳ ದುರಸ್ತಿಗೆ ಕ್ರಮ ವಹಿಸಬೇಕೆಂದು ತಾಕೀತು ಮಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಡಿಡಿ ವಿಜಯಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 144 ಹೊಸ ಅಂಗನವಾಡಿ ಕಟ್ಟಡಗಳಿಗೆ ಕೆಎಂಇಆರ್‌ಸಿ ಅನುಮೋದನೆ ನೀಡಿದೆ. ಡಿಸೆಂಬರ್‌ವೊಳಗೆ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು ಎಂದರು.

ಜಿಲ್ಲೆಯಲ್ಲಿ 163 ಶಾಲಾ ಕೊಠಡಿಗಳು ದುರಸ್ತಿಯಲ್ಲಿವೆ. 78 ಕೊಠಡಿಗಳು ದುರಸ್ತಿಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ ಸರ್ಕಾರದಿಂದ ಹೊಸ ಮಾರ್ಗಸೂಚಿ ಜಾರಿಯಾಗಿದೆ. ಕೇಂದ್ರ ಸರ್ಕಾರ ಇದಕ್ಕೆ ಈ ವರ್ಷ 36 ಸಾವಿರ ಕೋಟಿ ರೂ. ಅನುದಾನ ಒದಗಿಸಿದೆ. ರಸ್ತೆ ಸಂಪರ್ಕ ಇಲ್ಲದ ಜನವಸತಿ ಪ್ರದೇಶಗಳನ್ನು ಕೂಡ ಗ್ರಾಮವೆಂದು ಪರಿಗಣಿಸಿ,ಹೊಸದಾಗಿ ರಸ್ತೆ ನಿ ರ್ಮಿಸುವಂತೆ ಸಂಸದರು ಸೂಚಿಸಿದರು. ಎಸ್‌ಸಿ ಕಾಲನಿ,ಗೊಲ್ಲರಹಟ್ಟಿ ಮತ್ತಿತರ ಜನವಸತಿ ಪ್ರದೇಶಗಳನ್ನು ಗ್ರಾಮಗಳೆಂದು ಪರಿಗಣಿಸಿ,ಹೊಸ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಇದಕ್ಕಾಗಿ ಜಿಲ್ಲೆಗೆ 50-60 ಕೋಟಿ ಅನುದಾನ ದೊರೆಯಲಿದೆ ಎಂದರು.

ಚಳ್ಳಕೆರೆ ತಾಲೂಕು ತಳಕು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ, ಸ್ವಚ್ಛತೆ ಇಲ್ಲ. ಕೊಠಡಿ ಇದ್ದರೂ ಚಳ್ಳಕೆರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಇದರಿಂದ ಗಡಿ ಗ್ರಾಮದ ಜನರಿಗೆ ಬಹಳ ತೊಂದೆಯಾಗುತ್ತಿದೆ.

ಮೂರು ವರ್ಷಗಳಿಂದ ಹೊಸದುರ್ಗ ತಾಲೂಕು ದೊಡ್ಡಘಟ್ಟದ ಹಳ್ಳದ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿ ನನೆಗುದಿಯಲ್ಲಿದೆ ಎಂದು ನಾಮನಿರ್ದೇಶಿತ ಸದಸ್ಯರು ಆರೋಪಿಸಿದರು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸುವುದಾಗಿ ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್, ಸಣ್ಣ ನೀರಾವರಿ ಇಲಾಖೆ ಇಇ ಪ್ರತಿಕ್ರಿಯಿಸಿದರು.

ಜಿಪಂ ಕೆಡಿಪಿ ಮುಂದುವರಿದ ಸಭೆಯಲ್ಲಿ ಕಾವೇರಿದ ಚರ್ಚೆಗೆ ಕಾರಣವಾಗಿದ್ದ ಜೆಜೆಎಂ ಕಾಮಗಾರಿ ದಿಶಾ ಸಭೆಯಲ್ಲೂ ಮಾರ್ದನಿಸಿತು. ಈ ಕಾಮಗಾರಿ ಅನುಷ್ಠಾನಕ್ಕೆ ಸಂಸದರು ಅಸಮಾಧಾನ ವ್ಯಕ್ತಪಡಿಸಿದರು. ಜನರ ಶುದ್ಧ ಕುಡಿಯುವ ನೀರು ಪೂರೈಸಲು ಜಿಲ್ಲೆಗೆ ಕೇಂದ್ರದಿಂದ 1000 ಕೋಟಿ ರೂ.ಅಧಿಕ ಅನುದಾನ ನೀಡಲಾಗಿದೆ. ಈವರೆಗೂ ಕನಿಷ್ಠ ಜಿಲ್ಲೆಯ 10 ಹಳ್ಳಿಗಳಿಗೆ ನೀರು ಕೊಟ್ಟಿಲ್ಲವೆಂದು ಕಾರಜೋಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಾಮಗಾರಿಗಳ ಕುರಿತು ತನಿಖೆಗೆ ಸಮಿತಿ ರಚನೆ ನಿರ್ಧಾರ ಸೂಕ್ತವಾಗಿದೆ ಎಂದರು.

ಸರ್ಕಾರ ಸೌಲಭ್ಯಗಳನ್ನೂ ನೀಡಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸಮರ್ಪಕ ಸೌಲಭ್ಯ ದೊರೆಯುತ್ತಿಲ್ಲವೆಂ ದು ಸಂಸದರು ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳು ಹಾಸ್ಟೆಲ್‌ಗಳಿಗೆ ಭೇಟಿ ನೀಡಿ, ಅಲ್ಲಿಯೇ ಆಹಾರ ಸೇವಿಸಬೇಕು. ಪ್ರವಾಸ ಸಂದರ್ಭದಲ್ಲಿ ಹಾಸ್ಟೆಲ್‌ನಲ್ಲೇ ಊಟ ಸೇವಿಸುತ್ತೇನೆ. ಕಳಪೆ ಕಂಡುಬಂದರೆ ಅಮಾನತಿಗೆ ನಿರ್ದೇಶಿಸುತ್ತೇನೆ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.

ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಜಿಪಂ ಸಿಇಒ ಡಾ.ಎಸ್.ಆಕಾಶ್, ಎಎಸ್‌ಪಿ ಶಿವಕುಮಾರ್, ನಾಮನಿರ್ದೇಶನ ಸದಸ್ಯರಾದ ಸಂತೋಷ್, ರಾಜಶೇಖರ್, ಲಕ್ಷ್ಮಣ್, ವೆಂಕಟಲಕ್ಷ್ಮೀ, ಗೋವಿಂದಪ್ಪ, ಭರತ್, ಕೆ.ಟಿ.ಕುಮಾರಸ್ವಾಮಿ,ಟಿ. ಮಂಜುಳಾ ಇತರರು ಇದ್ದರು.